ಅಮೆರಿಕ ವಶಕ್ಕೆ ಪಡೆದ ಇರಾನ್ ಹಡಗಿನಲ್ಲಿ ಚೀನಾದ ‘ಕ್ಷಿಪಣಿ ತಯಾರಿಕೆ ರಾಸಾಯನಿಕ’? ನಿಕ್ಕಿ ಹ್ಯಾಲೆ ಸ್ಫೋಟಕ ಆರೋಪ

ವಾಷಿಂಗ್ಟನ್: ಇರಾನ್ ಮೇಲಿನ ನೌಕಾ ದಿಗ್ಬಂಧನದ ನಡುವೆ ಇತ್ತೀಚೆಗೆ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್‌ಗೆ ಕ್ಷಿಪಣಿ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಸಾಗಿಸುತ್ತಿತ್ತು ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್‌ಗೆ ಪ್ರಯಾಣಿಸುತ್ತಿತ್ತು. ಅದರಲ್ಲಿ ಕ್ಷಿಪಣಿ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳಿರುವುದು ಕಂಡುಬಂದಿದೆ. ನಿಲ್ಲುವಂತೆ ಅಮೆರಿಕ ನೌಕಾಪಡೆ ಪದೇ ಪದೇ ಸೂಚಿಸಿದರೂ ಆ ಹಡಗು ಸ್ಪಂದಿಸಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇರಾನ್ ಆಡಳಿತಕ್ಕೆ ಚೀನಾ ಬೆಂಬಲ ನೀಡುತ್ತಿರುವುದು ಈಗ ಜಗತ್ತಿನ ಮುಂದೆ ಸಾಬೀತಾಗಿದೆ. ಚೀನಾವು ಇರಾನ್‌ಗೆ ಮಿಲಿಟರಿ ನೆರವು ನೀಡುತ್ತಿರುವ ಸಾಧ್ಯತೆಯು ಈಗ ಗಂಭೀರ ಕಳವಳಕಾರಿಯಾಗಿದೆ ಎಂದು ಹ್ಯಾಲೆ ಎಚ್ಚರಿಸಿದ್ದಾರೆ.

ಇರಾನ್ ಪ್ರತಿಭಟನೆ:
ಹಡಗನ್ನು ವಶಪಡಿಸಿಕೊಂಡ ಅಮೆರಿಕದ ಕ್ರಮವನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇದನ್ನು ‘ಸಶಸ್ತ್ರ ಕಡಲ್ಗಳ್ಳತನ’ (Armed Piracy) ಎಂದು ಕರೆದಿರುವ ಇರಾನ್, ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇರಾನ್‌ನ ‘ಎಂವಿ ಟೌಸ್ಕಾ’ (MV Touska) ಹಡಗಿನ ಜಪ್ತಿ ಮತ್ತು ಅಮೆರಿಕದ ನೌಕಾ ದಿಗ್ಬಂಧನವು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿರುವ ಮುಂಬರುವ ಶಾಂತಿ ಮಾತುಕತೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ನೌಕಾ ದಿಗ್ಬಂಧನವನ್ನು ತೆರವುಗೊಳಿಸುವವರೆಗೆ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಪ್ರಸ್ತುತ ಕದನ ವಿರಾಮವು ಬುಧವಾರಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಘಟನೆಯಿಂದಾಗಿ ಈ ಭಾಗದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಅಮೆರಿಕದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, ಓಮನ್ ಕೊಲ್ಲಿಯಲ್ಲಿ ವಶಪಡಿಸಿಕೊಳ್ಳಲಾದ ಎಂವಿ ಟೌಸ್ಕಾ ಹಡಗು ಈ ಹಿಂದೆಯೂ ಹಲವು ಬಾರಿ ಚೀನಾಕ್ಕೆ ಸಂಚರಿಸಿತ್ತು. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸಾಗಿಸುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಹಡಗಿನ ಮೇಲೆ ನಿಗಾ ಇಡಲಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದ ನೌಕಾಪಡೆಯು ಹಡಗಿನ ಇಂಜಿನ್ ರೂಮ್‌ಗೆ ಹಾನಿ ಮಾಡುವ ಮೂಲಕ ಅದನ್ನು ತಡೆದು ವಶಕ್ಕೆ ಪಡೆದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement