
ಕೊಲೊಂಬೊ: ಶ್ರೀಲಂಕಾ ಕ್ರಿಕೆಟಿಗರು ಮೈದಾನದ ಹೊರಗಿನ ಅಶಿಸ್ತಿನ ಕಾರಣಗಳಿಗಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ದೇಶದ ಇಬ್ಬರು 19 ವರ್ಷದೊಳಗಿನ (U-19) ಕ್ರಿಕೆಟಿಗರು ಖಾಸಗಿ ಹೋಟೆಲ್ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.
ವೃತ್ತಿಪರ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಮಹಿಳಾ ವೈದ್ಯರು ಆ ಹೋಟೆಲ್ನಲ್ಲಿ ತಂಗಿದ್ದರು ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಈ ಇಬ್ಬರು ಕ್ರಿಕೆಟಿಗರು ಸ್ನಾನಗೃಹದ ಕಿಟಕಿ ಅಥವಾ ಸಂದಿಗಳಿಂದ ತಮ್ಮ ಮೊಬೈಲ್ ಬಳಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗಿದೆ.

“ನಾರಾಹೇನ್ಪಿಟಾದ ಖಾಸಗಿ ಹೋಟೆಲ್ನಲ್ಲಿ ಮಹಿಳಾ ವೈದ್ಯರು ಸ್ನಾನ ಮಾಡುತ್ತಿದ್ದಾಗ ಗುಟ್ಟಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಶ್ರೀಲಂಕಾ ಅಂಡರ್-19 ತಂಡದ ಇಬ್ಬರು ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ‘ಡೈಲಿ ಮಿರರ್’ ವರದಿ ಮಾಡಿದೆ.
ವಿಚಾರಣೆಯ ವೇಳೆ, ಈ ಆಟಗಾರರು ಕೇವಲ ಮಹಿಳೆಯರಷ್ಟೇ ಅಲ್ಲದೆ, ಅದೇ ಹೋಟೆಲ್ನಲ್ಲಿದ್ದ ಪುರುಷರ ವಿಡಿಯೋಗಳನ್ನು ಸಹ ಚಿತ್ರೀಕರಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ವಿಡಿಯೋಗಳನ್ನು ಇಂಟರ್ನೆಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆ
ಬಂಧಿತ ಆಟಗಾರರನ್ನು ಹಲ್ಫ್ಟ್ಸ್ಡಾರ್ಪ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಅವರಿಗೆ ವೈಯಕ್ತಿಕ ಜಾಮೀನು ಮಂಜೂರು ಮಾಡಲಾಗಿದೆ. ಇವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 25 ರಂದು ನಡೆಯಲಿದೆ.
ಶ್ರೀಲಂಕಾ ಕ್ರಿಕೆಟಿಗರು ಇಂತಹ ವಿವಾದಗಳಲ್ಲಿ ಸಿಲುಕಿರುವುದು ಇದೇ ಮೊದಲೇನಲ್ಲ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಅತ್ಯಾಚಾರದ ಆರೋಪದ ಮೇಲೆ ದನುಷ್ಕ ಗುಣತಿಲಕ ಬಂಧನಕ್ಕೊಳಗಾಗಿದ್ದರು (ನಂತರ ಅವರು ಖುಲಾಸೆಗೊಂಡರು).
ಕೋಚಿಂಗ್ ಅವಧಿಯಲ್ಲಿ ಮಹಿಳಾ ಆಟಗಾರ್ತಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ದುಲಿಪ್ ಸಮರವೀರ ಅವರಿಗೆ 20 ವರ್ಷಗಳ ನಿಷೇಧ ಹೇರಿದೆ.
ಯುವ ಆಟಗಾರರ ಈ ಕೃತ್ಯ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮುಜುಗರ ತಂದಿಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ