ನವದೆಹಲಿ: ಪಶ್ಚಿಮ ಬಂಗಾಳದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಿ ನೌಕರರನ್ನು ನಿಯೋಜಿಸುವ ಚುನಾವಣಾ ಆಯೋಗದ (EC) ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಿರಸ್ಕರಿಸಿದೆ.
ಚುನಾವಣಾ ಆಯೋಗದ ನಿರ್ಧಾರದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಈ ವಿಷಯದಲ್ಲಿ ಹೆಚ್ಚಿನ ಆದೇಶಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.
ಚುನಾವಣಾ ಆಯೋಗದ ನಿಲುವನ್ನು ಬಲವಾಗಿ ಬೆಂಬಲಿಸಿದ ಸುಪ್ರೀಂ ಕೋರ್ಟ್ ಪೀಠವು “ಮತ ಎಣಿಕೆ ಸಿಬ್ಬಂದಿಯನ್ನು ಒಂದೇ ಮೂಲದಿಂದ (ಕೇಂದ್ರ ಸರ್ಕಾರ) ಆಯ್ಕೆ ಮಾಡುವ ಹಕ್ಕು ಚುನಾವಣಾ ಆಯೋಗಕ್ಕಿದೆ. ಹಾಗಾಗಿ ಆಯೋಗದ ಸುತ್ತೋಲೆಯನ್ನು ತಪ್ಪು ಎಂದು ಹೇಳಲಾಗದು” ಎಂದು ಹೇಳಿದೆ.
ಏಪ್ರಿಲ್ 13 ರಂದು ಹೊರಡಿಸಲಾದ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಚುನಾವಣಾ ಆಯೋಗ ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ಏಪ್ರಿಲ್ 13ರ ಸುತ್ತೋಲೆಯನ್ನು ಅದರ ಆಶಯಕ್ಕೆ ತಕ್ಕಂತೆ ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿದೆ. ರಾಜ್ಯ ಸರ್ಕಾರಿ ನೌಕರರಾಗಿರುವ ರಿಟರ್ನಿಂಗ್ ಆಫೀಸರ್ (Returning Officer) ಅವರೇ ಎಣಿಕೆಯ ಒಟ್ಟಾರೆ ನಿಯಂತ್ರಣವನ್ನು ಹೊಂದಿರುತ್ತಾರೆ. ಪಕ್ಷಪಾತದ ಕುರಿತು ಟಿಎಂಸಿ ವ್ಯಕ್ತಪಡಿಸಿರುವ ಆತಂಕಗಳು ಆಧಾರರಹಿತವಾಗಿವೆ ಎಂದು ಆಯೋಗ ತಿಳಿಸಿದೆ.
ಟಿಎಂಸಿ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ರಾಜ್ಯ ಸರ್ಕಾರದ ಸಿಬ್ಬಂದಿಗೆ ಅವಕಾಶ ನೀಡಿಲ್ಲ ಮತ್ತು ನಿರ್ಧಾರದ ಬಗ್ಗೆ ತಡವಾಗಿ ಮಾಹಿತಿ ನೀಡಲಾಯಿತು ಎಂದು ವಾದಿಸಿದರು. ಆದರೆ ಚುನಾವಣಾ ಆಯೋಗದ ಪರ ವಕೀಲ ಡಿ.ಡಿ ಎಸ್ ನಾಯ್ಡು, ಅವರು, ಪ್ರಕ್ರಿಯೆ ನ್ಯಾಯಸಮ್ಮತವಾಗಿದ್ದು ನಿಯಮಾನುಸಾರವೇ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಟಿಎಂಸಿ ನ್ಯಾಯಾಲಯದ ಮೆಟ್ಟಿಲೇರಿದ್ದು ಏಕೆ?
ಪ್ರತಿ ಮತ ಎಣಿಕೆ ಟೇಬಲ್‌ನಲ್ಲಿ ಕನಿಷ್ಠ ಒಬ್ಬ ಕೇಂದ್ರ ಸರ್ಕಾರಿ ಅಧಿಕಾರಿಯನ್ನು ನಿಯೋಜಿಸಬೇಕು ಎಂಬ ಚುನಾವಣಾ ಆಯೋಗದ ಆದೇಶವನ್ನು ಟಿಎಂಸಿ ವಿರೋಧಿಸಿತ್ತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗುವುದರಿಂದ ಮತ ಎಣಿಕೆಯ ತಾಟಸ್ಥ್ಯಕ್ಕೆ ಧಕ್ಕೆ ಬರಬಹುದು ಎಂಬುದು ಪಕ್ಷದ ವಾದವಾಗಿತ್ತು.
ಕೋಲ್ಕತ್ತಾ ಹೈಕೋರ್ಟ್ ಕೂಡ ಟಿಎಂಸಿ ಅರ್ಜಿಯನ್ನು ತಿರಸ್ಕರಿಸಿ, ಚುನಾವಣಾ ಆಯೋಗಕ್ಕೆ ಸಿಬ್ಬಂದಿ ಆಯ್ಕೆ ಮಾಡುವ ಪೂರ್ಣಾಧಿಕಾರವಿದೆ ಎಂದು ಹೇಳಿತ್ತು. ಹೀಗಾಗಿ ಟಿಎಂಸಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಸೋಮವಾರ (ಮೇ 4) ಮತ ಎಣಿಕೆ ನಡೆಯಲಿರುವುದರಿಂದ ಶನಿವಾರವೇ ತುರ್ತು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರಿಗೆ ಮನವಿ ಮಾಡಿತ್ತು.
ಈಗಾಗಲೇ 2023ರ ನಿಯಮಾವಳಿಗಳ ಪ್ರಕಾರ ಪ್ರತಿ ಟೇಬಲ್‌ನಲ್ಲಿ ‘ಮೈಕ್ರೋ ಅಬ್ಸರ್ವರ್’ಗಳಾಗಿ ಕೇಂದ್ರ ಸೇವೆಗಳ ಅಧಿಕಾರಿಗಳು ಇರುತ್ತಾರೆ. ಅಂದಮೇಲೆ ಮೇಲ್ವಿಚಾರಕರು ಅಥವಾ ಸಹಾಯಕರಾಗಿ ಮತ್ತೆ ಕೇಂದ್ರ ನೌಕರರನ್ನು ಸೇರಿಸುವುದು ಅನಗತ್ಯ ಮತ್ತು ಸಮಸ್ಯಾತ್ಮಕ ಎಂದು ಟಿಎಂಸಿ ವಾದಿಸಿತ್ತು.
ಮತ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ನೌಕರರ ಸಂಖ್ಯೆ ಹೆಚ್ಚಾಗುವುದರಿಂದ ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗಬಹುದು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಮಾನ ಅವಕಾಶದ (Level playing field) ತತ್ವಕ್ಕೆ ಧಕ್ಕೆಯಾಗಬಹುದು ಎಂದು ಟಿಎಂಸಿ ಪ್ರತಿಪಾದಿಸಿತ್ತು. ಯಾವುದೇ ಸ್ಪಷ್ಟ ಕಾರಣ ನೀಡದೆ ಚುನಾವಣಾ ಆಯೋಗವು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ ಎಂದು ಟಿಎಂಸಿ ಪ್ರಶ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಎಲ್ಲಾ ವಾದಗಳನ್ನು ತಳ್ಳಿಹಾಕಿದ್ದು, ಚುನಾವಣಾ ಆಯೋಗದ ಕಾರ್ಯವಿಧಾನದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಹೀಗಾಗಿ ಮೇ 4ರಂದು ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳು ಮುಂದುವರಿಯಲಿವೆ.


ನಿಮ್ಮ ಕಾಮೆಂಟ್ ಬರೆಯಿರಿ