ಚುನಾವಣೆಯಲ್ಲಿ ಟಿಎಂಸಿ ಸೋತು ಸುಣ್ಣವಾದ್ರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೋಲನುಭವಿಸಿದರೂ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ. ಈ ಚುನಾವಣಾ ಫಲಿತಾಂಶವು ಜನರ ನೈಜ ತೀರ್ಪಲ್ಲ, ಬದಲಾಗಿ ಇದೊಂದು “ಪಿತೂರಿ” ಎಂದು ಅವರು ಆರೋಪಿಸಿದ್ದಾರೆ.
2026ರ ಪಶ್ಚಿಮ ಬಂಗಾಳ ಚುನಾವಣಾ ಸೋಲಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ತಾವು ರಾಜಭವನಕ್ಕೆ ಹೋಗಿ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ನನ್ನನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸೋತಿಲ್ಲ, ರಾಜೀನಾಮೆ ನೀಡುವುದೂ ಇಲ್ಲ,” ಎಂದು ಅವರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರನ್ನು ಈ ಚುನಾವಣೆಯ “ವಿಲನ್” ಎಂದು ಕರೆದ ಮಮತಾ, ಮತಯಂತ್ರಗಳ (EVM) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. “ಮತದಾನದ ನಂತರವೂ ಮತಯಂತ್ರಗಳು ಶೇ. 80-95 ರಷ್ಟು ಚಾರ್ಜ್ ತೋರಿಸುತ್ತಿದ್ದುದು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ. ಸುಮಾರು 100 ಕ್ಷೇತ್ರಗಳಲ್ಲಿ ಜನಾದೇಶವನ್ನು “ಲೂಟಿ” ಮಾಡಲಾಗಿದೆ ಮತ್ತು ಎಣಿಕೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ. “ನಾವು ಹೋರಾಡಿದ್ದು ಬಿಜೆಪಿಯ ವಿರುದ್ಧವಲ್ಲ, ಬದಲಾಗಿ ಬಿಜೆಪಿ ಪರವಾಗಿ ಕೆಲಸ ಮಾಡಿದ ಚುನಾವಣಾ ಆಯೋಗದ ವಿರುದ್ಧ,” ಎಂದು ಅವರು ಆರೋಪಿಸಿದರು.
ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು ಮತ್ತು ನಂತರ 7 ಲಕ್ಷ ಹೆಸರುಗಳನ್ನು ಯಾರಿಗೂ ತಿಳಿಯದಂತೆ ಸೇರಿಸಲಾಗಿದೆ ಎಂದು ಅವರು ದೂರಿದ್ದಾರೆ. ಮತ ಎಣಿಕೆ ವೇಳೆ ಸಿಆರ್‌ಪಿಎಫ್ (CRPF) ಸಿಬ್ಬಂದಿ ಮತ್ತು ಹೊರಗಿನ ಗೂಂಡಾಗಳು ಟಿಎಂಸಿ ಏಜೆಂಟ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಮತಾ ಹೇಳಿದ್ದಾರೆ. ಮತ ಎಣಿಕೆ ಕೇಂದ್ರಕ್ಕೆ ಹೋದಾಗ ತಮ್ಮ ಮೇಲೆಯೂ ದೈಹಿಕ ಹಲ್ಲೆ ನಡೆದಿದೆ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಒದೆಯಲಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

‘ಇಂಡಿಯಾ’ (INDIA) ಮೈತ್ರಿಕೂಟದ ಜೊತೆ  ಕೆಲಸ
ಸೋಲಿನ ನಂತರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದು ಮಮತಾ ತಿಳಿಸಿದರು. “ಈಗ ನಾನು ಯಾವುದೇ ಅಧಿಕೃತ ಸ್ಥಾನದಲ್ಲಿಲ್ಲದ ಕಾರಣ ಸ್ವತಂತ್ರ ಹಕ್ಕಿ. ಜನರ ಸೇವೆಗಾಗಿ ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ. ನಾನು ಹುಲಿಯಂತೆ ಹೋರಾಡಿದ್ದೇನೆ, ಮುಂದೆಯೂ ಹೋರಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.
ಬಿಜೆಪಿ 207 ಸ್ಥಾನಗಳಲ್ಲಿ ಜಯ
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತ ಕೊನೆಯಾಗಿದೆ. ವಿಶೇಷವೆಂದರೆ, ಹೈಪ್ರೊಫೈಲ್ ಕದನ ನಡೆದ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದಾರೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement