ವಿಕೃತಿಯ ಪರಮಾವಧಿ: ಮಾಜಿ ಪ್ರೇಯಸಿಯ ಹೆಸರಲ್ಲಿ ನಕಲಿ ಟಿಂಡರ್ ಖಾತೆ ತೆರೆದು ‘ಅತ್ಯಾಚಾರ’ಕ್ಕೆ ಆಹ್ವಾನಿಸಿದ್ದ ವ್ಯಕ್ತಿ; ಮನೆಗೆ ಬಂದ 18 ಅಪರಿಚಿತರು..!

ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮಾಜಿ ಪ್ರೇಯಸಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಹೆಸರಿನಲ್ಲೇ ನಕಲಿ ಡೇಟಿಂಗ್ ಪ್ರೊಫೈಲ್ ಸೃಷ್ಟಿಸಿ, ಆಕೆಗೆ ದೈಹಿಕ ಹಾಗೂ ಮಾನಸಿಕ ಹಾನಿ ಉಂಟುಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬ ಈಗ ಅಪರಾಧಿ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಗ್ರೇಟರ್ ಮ್ಯಾಂಚೆಸ್ಟರ್‌ನ ಚೀಡಲ್ ನಿವಾಸಿ ಅಸದ್ ಹುಸೇನ್ (36) ಎಂಬಾತನೇ ಈ ಕೃತ್ಯ ಎಸಗಿದ ಕಿರಾತಕ. ಈತ ಸಂತ್ರಸ್ತ ಮಹಿಳೆಗೆ ನೀಡಿದ ಕಿರುಕುಳ ಮತ್ತು ಆಕೆಯ ಮನೆಯ ವಿಳಾಸಕ್ಕೆ ಅಪರಿಚಿತರನ್ನು ನುಗ್ಗಿಸಿದ ರೀತಿ ಸಮಾಜವನ್ನೇ ಬೆಚ್ಚಿಬೀಳಿಸುವಂತಿದೆ.
ಪ್ರೀತಿಯಿಂದ ವಿಕೃತಿಯವರೆಗೆ
ವರದಿಗಳ ಪ್ರಕಾರ, ಅಸದ್ ಹುಸೇನ್ ಏಪ್ರಿಲ್ 2024ರಲ್ಲಿ “ಮಿಕ್ ರೆನ್ನಿ” ಎಂಬ ನಕಲಿ ಹೆಸರಿನಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಪ್ರೇಮದ ನಾಟಕವಾಡಿದ್ದ ಈತ, ನಂತರ ಆಕೆಯ ಮೇಲೆ ಅತಿಯಾದ ನಿಯಂತ್ರಣ ಸಾಧಿಸಲು ಯತ್ನಿಸಿದ್ದ. ಒಮ್ಮೆ ಆಕೆಯ ಪುರುಷ ಸ್ನೇಹಿತರೊಬ್ಬರು ಮನೆಗೆ ಬಂದಿದ್ದಾಗ, ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ಡೋರ್ ಬೆಲ್ ಬಾರಿಸಿ ಕಿರಿಕಿರಿ ಉಂಟುಮಾಡಿದ್ದ. ಪೊಲೀಸರು ಸ್ಥಳಕ್ಕೆ ಬಂದ ಮೇಲಷ್ಟೇ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಆಕೆಯ ಫೋನ್ ತಪಾಸಣೆ ನಡೆಸಿ ಇತರೆ ಪುರುಷರ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ ನಂತರ ಇಬ್ಬರ ಸಂಬಂಧ ಮುರಿದುಬಿದ್ದಿತ್ತು.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ನಕಲಿ ಪ್ರೊಫೈಲ್ ಮೂಲಕ ಭೀಕರ ಸಂಚು
ಬ್ರೇಕ್-ಅಪ್ ಆದ ಕೆಲವೇ ವಾರಗಳಲ್ಲಿ ಅಸದ್ ಕ್ರೂರ ಹಾದಿ ಹಿಡಿದಿದ್ದ. ಸಂತ್ರಸ್ತೆಯ ಹೆಸರಿನಲ್ಲೇ ನಕಲಿ ‘ಟಿಂಡರ್’ (Tinder) ಖಾತೆಯನ್ನು ತೆರೆದಿದ್ದ ಆತ, ಅದರಲ್ಲಿ ಮಹಿಳೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಬರೆದುಕೊಂಡಿದ್ದ. “ನನಗೆ ಅತ್ಯಾಚಾರದಂತಹ ಹಿಂಸಾತ್ಮಕ ಲೈಂಗಿಕ ಕ್ರಿಯೆಗಳಲ್ಲಿ ಆಸಕ್ತಿ ಇದೆ ಎಂದು ಪುರುಷರನ್ನು ಮನೆಗೆ ಆಕೆಯ ಮನೆಗೆ ಆಹ್ವಾನಿಸುವ ರೀತಿಯ ಸಂದೇಶಗಳನ್ನು ಹಾಕಿದ್ದ.
ಇದನ್ನು ನಿಜವೆಂದು ನಂಬಿದ ಸುಮಾರು 18ಕ್ಕೂ ಹೆಚ್ಚು ಅಪರಿಚಿತ ಪುರುಷರು ಆಕೆಯ ಮನೆಗೆ ಬಂದಿದ್ದರು. ಒಂದು ರಾತ್ರಿಯಂತೂ ಸತತವಾಗಿ ನಾಲ್ವರು ಪುರುಷರು ಆಕೆಯ ಮನೆ ಬಾಗಿಲಿಗೆ ಬಂದಿದ್ದರು. ಒಬ್ಬ ವ್ಯಕ್ತಿಯಂತೂ “ಬಾಗಿಲನ್ನು ಜೋರಾಗಿ ತಳ್ಳಿ ಒಳಬರುವಂತೆ” ಸಂದೇಶ ಬಂದಿದೆ ಎಂದು ನಂಬಿ ಮನೆಯ ಬಾಗಿಲನ್ನು ಮುರಿಯಲು ಯತ್ನಿಸಿದ್ದ. ಮತ್ತೊಂದು ಘಟನೆಯಲ್ಲಿ, ಮಹಿಳೆ ಮನೆಯಲ್ಲಿ ಇಲ್ಲದಿದ್ದಾಗ ಅಪರಿಚಿತನೊಬ್ಬ ಮನೆಗೆ ನುಗ್ಗಿದ್ದ, ಆಗ ಆಕೆಯ ಹದಿಹರೆಯದ ಮಗಳು ಮನೆಯಲ್ಲಿ ಒಬ್ಬಳೇ ಇದ್ದಳು.

ಸಿಕ್ಕಿಬಿದ್ದಿದ್ದು ಹೇಗೆ?
ತನ್ನ ಗುರುತು ಮರೆಮಾಚಲು ಅಸದ್ ಹುಸೇನ್ ಅತ್ಯಂತ ಜಾಣತನ ಪ್ರದರ್ಶಿಸಿದ್ದ. ಕಾರಿನ ನಂಬರ್ ಪ್ಲೇಟ್ ಬದಲಿಸುವುದು, ಅನೇಕ ಫೋನ್‌ಗಳನ್ನು ಬಳಸುವುದು ಹಾಗೂ “ಮಿಕ್ ರೆನ್ನಿ” ಎಂಬ ನಕಲಿ ಹೆಸರಿನಲ್ಲೇ ವ್ಯವಹರಿಸುತ್ತಿದ್ದ. ಆದರೆ, ಚೆಷೈರ್ ಪೊಲೀಸರು ಆತನ ವ್ಯವಹಾರಕ್ಕೆ ಸಂಬಂಧಿಸಿದ ವಾಹನದ ದಾಖಲೆಗಳನ್ನು ಬೆನ್ನತ್ತಿದಾಗ ಅಸದ್ ಬಣ್ಣ ಬಯಲಾಯಿತು. ನಕಲಿ ಪ್ರೊಫೈಲ್ ಆಕ್ಟಿವ್ ಆಗಿದ್ದ ಸಮಯದಲ್ಲೆಲ್ಲಾ ಆತ ಸಂತ್ರಸ್ತೆಯ ಮನೆಯ ಹತ್ತಿರದ ರಸ್ತೆಯಲ್ಲೇ ಓಡಾಡುತ್ತಿದ್ದದ್ದು ಸಾಕ್ಷ್ಯ ಸಮೇತ ಸಾಬೀತಾಗಿದೆ.
ತನಿಖಾಧಿಕಾರಿ ಕೆವಿನ್ ಟೆರಿಲ್ ಮಾತನಾಡಿ, “ಅಸದ್ ಹುಸೇನ್ ಒಬ್ಬ ಮಹಾ ವಂಚಕ. ತಾನು ಪೊಲೀಸರಿಗಿಂತ ಬುದ್ಧಿವಂತ ಎಂದು ಆತ ಭಾವಿಸಿದ್ದ. ಆದರೆ ಆತನ ಪ್ರತಿ ನಡೆಯೂ ಸಾಕ್ಷ್ಯವಾಗಿ ಸಿಕ್ಕಿಬಿದ್ದಿದೆ. ಆತ ಮಾಡಿದ್ದ ಕೃತ್ಯದಿಂದ ಮಹಿಳೆಯ ಪ್ರಾಣಕ್ಕೇ ಸಂಚಕಾರ ಬರಬಹುದಿತ್ತು, ಆದರೆ ಆತನಿಗೆ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ.
ಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಚಾರಣೆಯ ನಂತರ ಹುಸೇನ್ ಅಪರಾಧಿ ಎಂದು ಘೋಷಿಸಲಾಗಿದ್ದು, ಜೂನ್ ತಿಂಗಳಲ್ಲಿ ಆತನಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement