ಶಿರಸಿ : ಮೇ 8ರಂದು ರಾಘವೇಂದ್ರ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಘವೇಂದ್ರ ಮಠದಲ್ಲಿ ಮೇ 7 ಹಾಗೂ 8ರಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 7ರಂದು ಗುರುವಾರ ರಾಘವೇಂದ್ರ ಮಠದ ಶ್ರೀ ಗುರುರಾಯರ ಸನ್ನಿಧಿಯಲ್ಲಿ ನೂತನ ನಾಗಪ್ರತಿಷ್ಠೆಯ ಅಂಗವಾಗಿ  ಧಾರ್ಮಿಕ ವಿಧಿವಿಧಾನಗಳು ಹಾಗೂ ಮೇ 8ರಂದು ಶುಕ್ರವಾರ ನಾಗಪ್ರತಿಷ್ಠೆ,  ಹೊಸದಾಗಿ ನಿರ್ಮಿಸಲಾದ ಬಾವಿಯಲ್ಲಿ ಗಂಗಾಮಾತೆ ಪೂಜಿಸಿ ಆ ಜಲದಿಂದ ಶ್ರೀ ಗುರುರಾಯರಿಗೆ ಕುಂಬಾಭಿಷೇಕ,  ನೂತನ ಶಿಲಾಮಯ ತುಳಸಿ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ, ಅದೇ ದಿನ ಅತ್ಯಂತ ಸುಂದರವಾಗಿ ಕೆತ್ತನೆ ಮಾಡಲಾದ ನೂತನ ಮುಖ ಮಂಟಪವನ್ನು ರಾಯರ ಮೂಲ ಮೃತ್ತಿಕಾ ಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ.  ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಕೊಳಗಿಬೀಸಿನ ವೇದಮೂರ್ತಿ ಕುಮಾರಭಟ್ಟರ ಆಚಾರ್ಯತ್ವದಲ್ಲಿ ನಡೆಯಲಿದೆ. ಶ್ರೀ ರಾಘವೇಂದ್ರ ಸೇವಾ ಸಮಿತಿ ಅದ್ಯಕ್ಷರಾದ ಶ್ರೀನಿವಾಸ ಹೆಬ್ಬಾರ ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ನೂತನ ಮುಖಮಂಟಪ : 
ಸುಮಾರು 5-6 ಲಕ್ಷ ರೂ. ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಮರದಿಂದ ಕೆತ್ತಲಾದ ನೂತನ ಮುಖಮಂಟಪವು 12 ಅಡಿಗಳಷ್ಟು ಎತ್ತರವಿದ್ದು, ಸುಮಾರು 14 ಅಡಿಗಳಷ್ಟು ಅಗಲವಿದೆ. ಇದನ್ನು ಸಾಗವಾನಿ ಹಾಗೂ ಶಿವಣೆ ಮರದ ಕಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಗಿರೀಶ ಮುರಳಿಧರ ಗುಡಿಗಾರ ಅವರು ಅತ್ಯಂತ ಸುಂದರವಾಗಿ ಕೆತ್ತನೆ ಮಾಡಿದ್ದಾರೆ. ಮುಖಮಂಟಪದ ಮೇಲ್ಭಾಗದಲ್ಲಿ ಮೂಲರಾಮ ದೇವರನ್ನು ಕೆತ್ತಲಾಗಿದೆ, ಒಂದು ಕಡೆ ಹನುಮಂತ ಹಾಗೂ ಮತ್ತೊಂದು ಕಡೆ ಗರುಡನಿದ್ದಾನೆ. ಅಲ್ಲದೆ ಮುಖಮಂಟಪದ ಮಧ್ಯಭಾಗದಲ್ಲಿ ಒಂದು ಕಡೆ ಮಧ್ವಾಚಾರ್ಯರು ಹಾಗೂ ಮತ್ತೊಂದು ಕಡೆ ಟೀಕಾಚಾರ್ಯರು ಇದ್ದಾರೆ. ಮುಖಮಂಟಪದಲ್ಲಿ ಶಂಖ ಚಕ್ರ ಹಾಗೂ ಆನೆಗಳ ಸಾಲುಗಳನ್ನು ಅತ್ಯಂತ ಸುಂದರವಾಗಿ ಕೆತ್ತನೆ ಮಾಡಲಾಗಿದೆ.
ಕೃಷ್ಣಶಿಲೆಯ ನಾಗಮೂರ್ತಿ : ನೂತನ ನಾಗಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇದು 3 ಅಡಿಗಳಷ್ಟು ಎತ್ತರವಿದ್ದು, 80 ಕಿಲೋ ತೂಕವಿದೆ. ಪೀಠದ ತೂಕ  108 ಕೇಜಿ.
ಶಿಲಾಮಯ ತುಳಸಿ ಬೃಂದಾವನ : ನೂತನ ಶಿಲಾಮಯ ತುಳಸಿ ಬೃಂದಾವನದ ಪ್ರತಿಷ್ಠಾಪನೆ ಸಹ ನಡೆಯಲಿದ್ದು, ಇದು 9 ಅಡಿಗಳಷ್ಟು ಎತ್ತರ ಹಾಗೂ 4 ಅಡಿಗಳಷ್ಟು ಅಗಲವಿದೆ. ಇದನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ತರಿಸಲಾಗಿದೆ.
ಅಲ್ಲದೆ 101 ಅಡಿಗಳಷ್ಟು ಆಳದ ನೂತನ ಬಾವಿಯನ್ನು ಸಹ ನಿರ್ಮಿಸಲಾಗಿದ್ದು, ಇದರ ಅಗಲ ಸುಮಾರು 6 ಅಡಿಗಳಷ್ಟಿದೆ. ಇದನ್ನು ಶ್ರೀನಿವಾಸ ಹೆಬ್ಬಾರ ಅವರು ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ್ದಾರೆ. ಅಲ್ಲದೆ ಹಯಗ್ರೀವ ಕುಟೀರವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸಂಪೂರ್ಣ ಟೈಲ್ಸ್‌ ಹಾಕಲಾಗಿದೆ. ಇದಲ್ಲದೆ ರಾಘವೇಂದ್ರ ಮಠದ ಪಾರ್ಕಿಂಗ್‌ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ ಅಂದಾಜು 70-75 ಲಕ್ಷ ರೂ.ಗಳಷ್ಟು ವೆಚ್ಚದಲ್ಲಿ ಈ ಪ್ರತಿಷ್ಠಾಪನೆ ಹಾಗೂ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 8ರಂದು ರಾಘವೇಂದ್ರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೇ 8ರಂದು ಮಧ್ಯಾಹ್ನ  12:30ರಿಂದ 3 ಗಂಟೆ ವರೆಗೆ ಪ್ರಸಾದ ಭೋಜನ ಇರುತ್ತದೆ ಎಂದು ಶ್ರೀ ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ತಿಳಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement