ಪಶ್ಚಿಮ ಬಂಗಾಳದ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ: ಸಚಿವರಾಗಿ ಐವರಿಂದ ಪ್ರಮಾಣ ವಚನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು, ಶನಿವಾರ ಬಿಜೆಪಿಯ ಯುಗ ಆರಂಭವಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಸುವೇಂದು ಅಧಿಕಾರಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಅವರ ಜೊತೆ ಐವರು ಶಾಕಸರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಾಸಕರಾದ ಅಗ್ನಿಮಿತ್ರ ಪಾಲ್, ದಿಲೀಪ ಘೋಷ್, ನಿಸಿತ್ ಪ್ರಾಮಾಣಿಕ್, ಕ್ಷುದಿರಾಮ್ ತುಡು ಮತ್ತು ಅಶೋಕ ಕೀರ್ತಾನಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. . ಬುಡಕಟ್ಟು, ಪರಿಶಿಷ್ಟ ಜಾತಿಗಳು ಮತ್ತು ತಳಮಟ್ಟದ ನಾಯಕತ್ವ ಈ ಎಲ್ಲ ಅಂಶಗಳ ಬಗ್ಗೆ ಬಿಜೆಪಿಯ ಎಚ್ಚರಿಕೆಯ ಪರಿಗಣನೆಯನ್ನು ಈ ಆಯ್ಕೆ ಪ್ರತಿಬಿಂಬಿಸುತ್ತದೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ದಶಕಗಳ ಕಾಲದ ಪ್ರಾಬಲ್ಯವನ್ನು ಕೊನೆಗಾಣಿಸಿದ ಬಿಜೆಪಿಯ ಗೆಲುವು ಬಂಗಾಳದ ರಾಜಕಾರಣದಲ್ಲಿ ಒಂದು ಪ್ರಮುಖ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ಫಲಿತಾಂಶದ ನಂತರ, ಸುವೇಂದು ಅಧಿಕಾರಿ ಅವರು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅಧಿಕೃತವಾಗಿ ಹಕ್ಕು ಮಂಡಿಸಿದರು. ಜನಾದೇಶವನ್ನು “ಐತಿಹಾಸಿಕ” ಎಂದು ಬಣ್ಣಿಸಿದ ನೂತನ ಮುಖ್ಯಮಂತ್ರಿ, “ನಮ್ಮ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ. ಅಭಿವೃದ್ಧಿ, ಸ್ಥಿರತೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ” ಎಂದು ಭರವಸೆ ನೀಡಿದರು.

ರಾಷ್ಟ್ರೀಯ ನಾಯಕರ ದಂಡು
ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸಮಾರಂಭವು ರಾಷ್ಟ್ರೀಯ ಮಟ್ಟದ ಪ್ರಮುಖ ರಾಜಕೀಯ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ಎನ್‌ಡಿಎ (NDA) ಒಕ್ಕೂಟದ ಪ್ರಮುಖ ನಾಯಕರು, ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಮೂಲಕ ಬಿಜೆಪಿಯ ಬಲಪ್ರದರ್ಶನಕ್ಕೆ ಸಾಕ್ಷಿಯಾದರು. ಪ್ರಧಾನಿ ನರೇಂದ್ರ ಮೋದಿ, ಋಕ್ಷಣಾ ಸಚಿವ ರಾಜನಾಥ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ, ಪೆಟ್ರೋಲಿಯಂ ಖಾತೆ ಸಚಿವ ಸುರೇಶ ಗೋಪಿ, ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಮಣಿಪುರ ಮುಖ್ಯಮಂತ್ರಿ ಖೇಮ್ ಚಂದ್ ಸಿಂಗ್, ನಾಗಾಲ್ಯಾಂಡ್ ಮುಖ್ಯಮಂತ್ರಿ, ನೈಫಿಯು ರಿಯೊ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಸುವೇಂದು ಅಧಿಕಾರಿಯ ರಾಜಕೀಯ ಪಯಣ
ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, 2021ರ ಚುನಾವಣೆಗೆ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದರು.
2021ರ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಅಂದಿನಿಂದ ಬಂಗಾಳದಲ್ಲಿ ಬಿಜೆಪಿಯ ಪ್ರಬಲ ಮುಖವಾಗಿ ಬೆಳೆದ ಸುವೇಂದು, ಇಂದು ಮುಖ್ಯಮಂತ್ರಿ ಗದ್ದುಗೆಗೇರುವ ಮೂಲಕ ಪಕ್ಷಕ್ಕೆ ಐತಿಹಾಸಿಕ ಮೈಲಿಗಲ್ಲು ತಂದುಕೊಟ್ಟಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement