ಗೋವಾ ಕರಾವಳಿಯಲ್ಲಿ ಕಾರವಾರದ ಬೋಟ್ ಮುಳುಗಡೆ : 22 ಮೀನುಗಾರರ ರಕ್ಷಣೆ

ಬೆತುಲ್ (ಗೋವಾ): ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಶಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾದ ಬೆತುಲ್ ಕರಾವಳಿ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಹತ್ತಿರದಲ್ಲಿದ್ದ ಇತರ ಮೀನುಗಾರರು ರಕ್ಷಿಸಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಕಾರವಾರದ ಮುದಗಾ ನಿವಾಸಿ ದಿನೇಶ ಕಾಂಚನ್ ಎಂಬವರಿಗೆ ಸೇರಿದ “ಶ್ರೀ ಅಮ್ಮ” ಹೆಸರಿನ ಬೋಟ್ ಸುಮಾರು ಒಂದು ವಾರದ ಹಿಂದೆ ಅರಬ್ಬೀ ಸಮುದ್ರದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆಯನ್ನು ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ, ಗೋವಾದ ಬೆತುಲ್ ಕರಾವಳಿ ಸಮೀಪ ಬೋಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರದಲ್ಲಿ ಮುಳುಗಲಾರಂಭಿಸಿತು.

ಬೋಟ್ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಸಮೀಪದ ಇತರ ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಸುರಕ್ಷಿತವಾಗಿ ಇತರ ದೋಣಿಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು.
ಈ ಘಟನೆಯಿಂದ ಬೋಟ್ ಮಾಲೀಕರು ಮತ್ತು ಕಾರ್ಮಿಕರಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಸುಸಜ್ಜಿತ ಬೋಟ್, ಅತ್ಯಂತ ದುಬಾರಿ ಮೀನುಗಾರಿಕಾ ಬಲೆಗಳು ಹಾಗೂ ಇತರ ಬೆಲೆಬಾಳುವ ಸಲಕರಣೆಗಳು ಸಂಪೂರ್ಣವಾಗಿ ಸಮುದ್ರದ ಪಾಲಾಗಿವೆ. ಈ ಘಟನೆಯಿಂದಾಗಿ ಕೋಟಿಗಟ್ಟಲೆ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement