ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ (AAP) ನಾಯಕರುಗಳಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಗುರುವಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಈ ಬೆಳವಣಿಗೆಯ ನಡುವೆಯೇ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಶರ್ಮಾ ಅವರು ಹಿಂದೆ ಸರಿದಿದ್ದಾರೆ.
ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಮತ್ತು ಇತರರನ್ನು ಖುಲಾಸೆಗೊಳಿಸಿದ್ದ (Recusal). “ನಾನು ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದರೆ, ನನಗೆ ಅವರ ಮೇಲೆ ದ್ವೇಷವಿದೆ ಎಂದು ಕೇಜ್ರಿವಾಲ್ ಮತ್ತು ಇತರರು ಭಾವಿಸಬಹುದು. ಹಾಗಾಗಿ ಈ ಪ್ರಕರಣವನ್ನು ಬೇರೆ ಪೀಠ ವಿಚಾರಣೆ ನಡೆಸಲಿ ಎಂದು ಅವರು ತಿಳಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಹೇಳಿದೆ.
ಕೆಲವರು ನ್ಯಾಯಾಲಯದ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುತ್ತಿದ್ದಾರೆ ಮತ್ತು ಅದರ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುತ್ತಿದ್ದಾರೆ. ಪ್ರತಿವಾದಿಗಳಲ್ಲಿ ಕೆಲವರು ನನ್ನ ವಿರುದ್ಧ ಮತ್ತು ಈ ನ್ಯಾಯಾಲಯದ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ಮಾನಹಾನಿಕರ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ ಮತ್ತು ನಾನು ಮೌನವಾಗಿರಲು ಸಾಧ್ಯವಿಲ್ಲ. ಕೆಲವು ಪ್ರತಿವಾದಿಗಳು ಮತ್ತು ಇತರ ಕೆಲವು ಅಸಂಬದ್ಧರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ನಾನು ನಿರ್ಧರಿಸಿದ್ದೇನೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯಾಯಮೂರ್ತಿಗಳು ಕೇಜ್ರಿವಾಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಕೇಜ್ರಿವಾಲ್ ನ್ಯಾಯಾಲಯದ ಒಳಗೆ ಗೌರವದ ಮಾತನಾಡುತ್ತಾರೆ, ಆದರೆ ಹೊರಗೆ ನನ್ನ ವಿರುದ್ಧ ಸಂಘಟಿತ ಅಭಿಯಾನ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯದ ವಿರುದ್ಧ ಪತ್ರ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ,” ಎಂದು ಹೇಳಿದರು
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ನಡೆಸುತ್ತಿತ್ತು. ಆದರೆ, ಕಳೆದ ಏಪ್ರಿಲ್‌ನಲ್ಲಿ ಅರವಿಂದ್ ಕೇಜ್ರಿವಾಲ, ಮನೀಶ ಸಿಸೋಡಿಯಾ ಮತ್ತು ದುರ್ಗೇಶ ಪಾಠಕ್ ಅವರು ಈ ಪೀಠದ ವಿಚಾರಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ನ್ಯಾಯಮೂರ್ತಿಗಳು ಆರ್‌ಎಸ್‌ಎಸ್ (RSS) ಸಂಘಟನೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಿ, ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಆಪ್ ನಾಯಕರು ಒತ್ತಾಯಿಸಿದ್ದರು. ಆದರೆ ಏಪ್ರಿಲ್ 20 ರಂದು ನ್ಯಾಯಮೂರ್ತಿ ಶರ್ಮಾ ಈ ಮನವಿಯನ್ನು ತಿರಸ್ಕರಿಸಿದ್ದರು.
ಏನಿದು ಮದ್ಯ ನೀತಿ ಪ್ರಕರಣ?
ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. 2021ರ ನವೆಂಬರ್‌ನಲ್ಲಿ ಜಾರಿಗೆ ಬಂದಿದ್ದ ಈ ನೀತಿಯನ್ನು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ 2022ರ ಜುಲೈನಲ್ಲಿ ಹಿಂಪಡೆಯಲಾಗಿತ್ತು. ಸಗಟು ವ್ಯಾಪಾರಿಗಳ ಕಮಿಷನ್ ಅನ್ನು ಶೇ. 5 ರಿಂದ ಶೇ. 12 ಕ್ಕೆ ಏರಿಸಿ ಲಂಚ ಪಡೆದ ಆರೋಪ ಈ ಪಕ್ಷದ ಮೇಲಿದೆ.
ಫೆಬ್ರವರಿ 27 ರಂದು ವಿಶೇಷ ನ್ಯಾಯಾಲಯವು ಕೇಜ್ರಿವಾಲ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಅಬಕಾರಿ ನೀತಿಯಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೊರೆ ಹೋಗಿತ್ತು. ಮಾರ್ಚ್ 9 ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಅದಕ್ಕೆ ತಡೆ ನೀಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ