ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಯುಜಿ (NEET UG) 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸೂತ್ರಧಾರಿಯನ್ನು (Kingpin) ಕೇಂದ್ರ ತನಿಖಾ ದಳ (CBI) ಬಂಧಿಸಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ರಸಾಯನಶಾಸ್ತ್ರ ಉಪನ್ಯಾಸಕ ಪಿ. ವಿ. ಕುಲಕರ್ಣಿ ಈ ಹಗರಣದ ಮುಖ್ಯ ಆರೋಪಿ ಎಂದು ಗುರುತಿಸಲಾಗಿದೆ.
ಮೂಲತಃ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯವರಾದ ಕುಲಕರ್ಣಿ, ಪುಣೆಯಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎನ್‌ಟಿಎ ಜೊತೆಗಿನ ಸುದೀರ್ಘ ಸಂಬಂಧದಿಂದಾಗಿ ಅವರಿಗೆ ಪ್ರಶ್ನೆ ಪತ್ರಿಕೆಗಳನ್ನು ಪಡೆಯುವ ಅವಕಾಶವಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಸಿಬಿಐ ತನಿಖೆಯ ಪ್ರಕಾರ, ಏಪ್ರಿಲ್ ಕೊನೆಯ ವಾರದಲ್ಲಿ ಕುಲಕರ್ಣಿ ಅವರು ಮತ್ತೊಬ್ಬ ಆರೋಪಿ ಮನಿಷಾ ವಾಘ್ಮಾರೆ (ಮೇ 14ರಂದು ಬಂಧಿತರು) ಅವರ ಸಹಾಯದೊಂದಿಗೆ ಆಯ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದರು. ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಕುಲಕರ್ಣಿ ವಿಶೇಷ ತರಗತಿಗಳನ್ನು ನಡೆಸಿದ್ದರು.
ಈ ತರಗತಿಗಳಲ್ಲಿ ಕುಲಕರ್ಣಿ ಅವರು ನೇರವಾಗಿ ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಹೇಳಿ ಬರೆಸಿದ್ದರು. ವಿದ್ಯಾರ್ಥಿಗಳ ನೋಟ್‌ಬುಕ್‌ನಲ್ಲಿರುವ ಈ ಹಸ್ತಪ್ರತಿಗಳು ಮೇ 3ರಂದು ನಡೆದ ಮೂಲ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಅಕ್ಷರಶಃ ತಾಳೆಯಾಗಿವೆ.
ಸೋರಿಕೆ ಬೆಳಕಿಗೆ ಬಂದಿದ್ದು ಹೇಗೆ?
ಈ ಬೃಹತ್ ಹಗರಣ ಬಯಲಿಗೆ ಬರಲು ಲಾತೂರ್ ಪೊಲೀಸರಿಗೆ ಪೋಷಕರು ನೀಡಿದ ದೂರು ಕಾರಣವಾಯಿತು. ಖಾಸಗಿ ಕೋಚಿಂಗ್ ಸಂಸ್ಥೆಯೊಂದು ನಡೆಸಿದ ‘ಮಾಕ್ ಟೆಸ್ಟ್’ (ಅಣಕು ಪರೀಕ್ಷೆ) ನಲ್ಲಿ ಕೇಳಲಾಗಿದ್ದ 42 ಪ್ರಶ್ನೆಗಳು ಮೇ 3ರ ನೀಟ್ ಪರೀಕ್ಷೆಯಲ್ಲಿ ಯಥಾವತ್ತಾಗಿ ಬಂದಿದ್ದವು. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಲಾತೂರ್ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಸಿಬಿಐಗೆ ಹಸ್ತಾಂತರಿಸಿದ ನಂತರ ಈ ‘ಕಿಂಗ್‌ಪಿನ್’ ಮುಖವಾಡ ಕಳಚಿದೆ.
ಈ ಪ್ರಕರಣದಲ್ಲಿ ಇದುವರೆಗೆ ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹಿಲ್ಯನಗರಗಳಿಂದ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಐವರು ಆರೋಪಿಗಳನ್ನು 7 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ಇತ್ತೀಚೆಗೆ ಬಂಧಿತರಾದ ಕುಲಕರ್ಣಿ ಸೇರಿದಂತೆ ಇಬ್ಬರನ್ನು ದೆಹಲಿಗೆ ಸ್ಥಳಾಂತರಿಸಲಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧೆಡೆ ದಾಳಿ ನಡೆಸಿರುವ ಸಿಬಿಐ, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ (Forensic) ತನಿಖೆಗೆ ಒಳಪಡಿಸಿದೆ.
ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೇ 12ರಂದು ರದ್ದುಗೊಳಿಸಲಾಗಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ಈಗ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ