ಭೋಪಾಲ : ದಶಕಗಳಿಂದ ವಿವಾದದ ಕೇಂದ್ರವಾಗಿದ್ದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸಂಕೀರ್ಣವು ‘ವಾಗ್ದೇವಿ’ (ಸರಸ್ವತಿ ದೇವಿಯ) ಮಂದಿರ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ಭೋಜಶಾಲಾ ಸಂಕೀರ್ಣದ ನಿರ್ವಹಣೆಯು ಎಎಸ್ಐ (ASI) ವಶದಲ್ಲಿದ್ದರೂ, ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಹಕ್ಕು ಕೇವಲ ಹಿಂದೂಗಳಿಗೆ ಮಾತ್ರ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಜಯಕುಮಾರ ಶುಕ್ಲಾ ಮತ್ತು ಅಲೋಕ ಅವಸ್ಥಿ ಅವರಿದ್ದ ಪೀಠ ತಿಳಿಸಿದೆ. ಆ ಸ್ಥಳದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಬೇರೆ ಬೇರೆ ದಿನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI)ಯ 2003 ರ ಆದೇಶವನ್ನು ರದ್ದುಗೊಳಿಸಿದೆ.
ವಿವಾದಿತ ರಚನೆಯು ಸಂರಕ್ಷಿತ ಸ್ಮಾರಕವಾಗಿದೆ. ಆದರೆ ಅದರ ಧಾರ್ಮಿಕ ಲಕ್ಷಣವು ದೇವಾಲಯದ್ದಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಮಸೀದಿಗೆ ಪರ್ಯಾಯ ಭೂಮಿ ಹಂಚಿಕೆಗಾಗಿ ಮುಸ್ಲಿಂ ಸಮುದಾಯದ ಸದಸ್ಯರು ಅರ್ಜಿ ಸಲ್ಲಿಸಿದರೆ ರಾಜ್ಯ ಸರ್ಕಾರವನ್ನು ಅದನ್ನು ಕಾನೂನಿನ ಪ್ರಕಾರ ಪರಿಶೀಲಿಸಬಹುದು ಎಂದು ಹೈಕೋರ್ಟ್ ಹೇಳಿದೆ.
“ಇದು ಪರಮಾರ ರಾಜವಂಶದ ರಾಜ ಭೋಜ ನಿರ್ಮಿಸಿದ ಸಂಸ್ಕೃತ ಕಲಿಕಾ ಕೇಂದ್ರ ಮತ್ತು ಸರಸ್ವತಿ ಮಂದಿರ ಎಂಬುದಕ್ಕೆ ಐತಿಹಾಸಿಕ ಸಾಕ್ಷ್ಯಗಳಿವೆ. ಇಲ್ಲಿ ಹಿಂದೂಗಳ ಪೂಜಾ ಪರಂಪರೆ ಎಂದಿಗೂ ಸ್ಥಗಿತಗೊಂಡಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕ್ರಿ.ಶ. 1010 ರಿಂದ 1055ರ ಅವಧಿಯಲ್ಲಿ ರಾಜ ಭೋಜನು ಇಲ್ಲಿ ಪ್ರತಿಷ್ಠಾಪಿಸಿದ್ದ ಸರಸ್ವತಿ ದೇವಿಯ ಪುರಾತನ ವಿಗ್ರಹವು ಸದ್ಯ ಲಂಡನ್ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ. ಈ ವಿಗ್ರಹವನ್ನು ಭಾರತಕ್ಕೆ ಮರಳಿ ತಂದು ಭೋಜಶಾಲಾ ಸಂಕೀರ್ಣದಲ್ಲಿ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಸರ್ಕಾರವು ಅಧಿಕೃತವಾಗಿ ಶ್ರಮಿಸಬೇಕು ಮತ್ತು ಅರ್ಜಿದಾರರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
2024ರ ಮಾರ್ಚ್ನಲ್ಲಿ ಹೈಕೋರ್ಟ್ ಸೂಚನೆಯಂತೆ ಎಎಸ್ಐ (ASI) ತಂಡವು ಸತತ 98 ದಿನಗಳ ಕಾಲ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಸುಮಾರು 2,000 ಪುಟಗಳ ವರದಿ ಸಲ್ಲಿಸಲಾಗಿತ್ತು.
ಪ್ರಸ್ತುತ ಇರುವ ವಿವಾದಿತ ಕಟ್ಟಡವನ್ನು ಹಿಂದಿನ ಮಂದಿರದ ಅವಶೇಷಗಳನ್ನು ಬಳಸಿಕೊಂಡೇ ನಿರ್ಮಿಸಲಾಗಿದೆ. ಸಮೀಕ್ಷೆಯ ವೇಳೆ ದೊರೆತ ನಾಣ್ಯಗಳು, ಶಿಲ್ಪಗಳು ಮತ್ತು ಶಾಸನಗಳು ಇದು ಮೂಲತಃ ಹಿಂದೂ ದೇವಾಲಯವಾಗಿತ್ತು ಎಂಬುದನ್ನು ದೃಢಪಡಿಸಿವೆ ಎಂದು ಅದು ಹೇಳಿದೆ.
2003ರ ವ್ಯವಸ್ಥೆಯ ಪ್ರಕಾರ, ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರು ಶುಕ್ರವಾರ ನಮಾಜು ಮಾಡಲು ಅವಕಾಶವಿತ್ತು. ಆದರೆ, ಇದು ಮೂಲತಃ ವಾಗ್ದೇವಿ ಮಂದಿರವಾಗಿದ್ದು, ತಮಗೆ ಸಂಪೂರ್ಣ ಹಕ್ಕು ಬೇಕೆಂದು ಹಿಂದೂ ಸಮುದಾಯ ನ್ಯಾಯಾಲಯದ ಮೊರೆ ಹೋಗಿತ್ತು. ಮುಸ್ಲಿಂ ಸಮುದಾಯವು ಎಎಸ್ಐ ವರದಿಯು ‘ಪಕ್ಷಪಾತ’ದಿಂದ ಕೂಡಿದೆ ಎಂದು ವಾದಿಸಿತ್ತಾದರೂ, ನ್ಯಾಯಾಲಯವು ಐತಿಹಾಸಿಕ ದಾಖಲೆಗಳು ಮತ್ತು ಸಮೀಕ್ಷೆಯ ಆಧಾರದ ಮೇಲೆ ಈ ತೀರ್ಪು ನೀಡಿರುವುದಾಗಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ