ಚೆನ್ನೈ: ಕಳೆದ ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿದೇಶಿ ಪ್ರಜೆಗಳು “ಮೋಸದಿಂದ” ಮತದಾನ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗ (EC) ಆದೇಶಿಸಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ಹತ್ತಲು ಯತ್ನಿಸುತ್ತಿದ್ದ ಹತ್ತು ಮಂದಿ ವಿದೇಶಿ ಪ್ರಜೆಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಪೊಲೀಸರು ಸಲ್ಲಿಸಿದ ವರದಿಯ ಬೆನ್ನಲ್ಲೇ ಚುನಾವಣಾ ಆಯೋಗವು ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಂಧಿತ ವಿದೇಶಿ ಪ್ರಜೆಗಳು ವಿಮಾನ ನಿಲ್ದಾಣದಿಂದ ಹೊರಹೋಗಲು ಯತ್ನಿಸುತ್ತಿದ್ದಾಗ, ಅವರ ತೋರುಬೆರಳಿನ ಮೇಲಿದ್ದ ಚುನಾವಣೆಯ ಅಳಿಸಲಾಗದ ಶಾಯಿ (ಇಂಡೆಲಿಬಲ್ ಇಂಕ್)ಯನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ರೀಲಂಕಾ, ಯುಕೆ, ಕೆನಡಾ ಪ್ರಜೆಗಳು ಭಾಗಿ..?
ಚೆನ್ನೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತಮಿಳುನಾಡು 2026 ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಿದ ಆರೋಪದ ಮೇಲೆ ಒಟ್ಟು 9 ಪ್ರಕರಣಗಳಲ್ಲಿ 10 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಇವರನ್ನು ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ಪೊಲೀಸ್ ವಿಚಾರಣೆಯಿಂದ ಈ ಪ್ರಜೆಗಳು ಶ್ರೀಲಂಕಾ, ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಕೆನಡಾ ದೇಶಗಳಿಗೆ ಸೇರಿದವರಾಗಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
“ಬಂಧಿತರು ಭಾರತದ ನಕಲಿ ಗುರುತಿನ ಚೀಟಿಗಳನ್ನು (ID documents) ಬಳಸಿಕೊಂಡು ಮತ ಚಲಾಯಿಸಿದ್ದರು. ಅವರು ದೇಶದಿಂದ ಹೊರಗೆ ಹೋಗಲು ಯತ್ನಿಸುವಾಗ ವಿಮಾನ ನಿಲ್ದಾಣದಲ್ಲಿ ಅವರ ಬೆರಳುಗಳ ಮೇಲಿದ್ದ ಶಾಯಿಯಿಂದ ಇವರು ಸಿಕ್ಕಿಬಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಿಯಮಗಳೇನು?
ಪ್ರಸ್ತುತ ಪೊಲೀಸರ ಕೇಂದ್ರ ಅಪರಾಧ ವಿಭಾಗ (CCB) ಈ ಕುರಿತು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 20A ಅಡಿಯಲ್ಲಿ ಅನಿವಾಸಿ ಭಾರತೀಯರು ಮತದಾನಕ್ಕೆ ನೋಂದಾಯಿಸಿಕೊಳ್ಳಬಹುದು. ಆದರೆ ಮತಗಟ್ಟೆಯಲ್ಲಿ ಅವರು ತಮ್ಮ ಅಸಲಿ (Original) ಭಾರತೀಯ ಪಾಸ್ಪೋರ್ಟ್ ಅನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಸಾಗರೋತ್ತರ ಮತದಾರರಾಗಲು (Overseas elector) ಅವರು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು ಮತ್ತು ಬೇರೆ ಯಾವುದೇ ದೇಶದ ಪೌರತ್ವವನ್ನು ಹೊಂದಿರಬಾರದು. ಭಾರತದ ಪೌರತ್ವವನ್ನು ತೊರೆದವರಿಗೆ ಭಾರತದಲ್ಲಿ ಮತ ಚಲಾಯಿಸುವ ಹಕ್ಕಿರುವುದಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ