ರಸ್ತೆಗಳಲ್ಲಿ ನಮಾಜ್‌ ಮಾಡ್ಬೇಡಿ, ಜಾಗದ ಕೊರತೆಯಿದ್ರೆ ಪಾಳಿಯಲ್ಲಿ ನಮಾಜ್‌ ಮಾಡಿ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ: ರಸ್ತೆಗಳ ಮೇಲೆ ನಮಾಜ್ ಮಾಡುವ ಪದ್ಧತಿಯ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಸಂಚಾರವನ್ನು ನಿರ್ಬಂಧಿಸುವುದಕ್ಕೆ ತಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಅವರು ಒತ್ತಿಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಉತ್ತರ ಪ್ರದೇಶ ಆಡಳಿತವು ಮೊದಲಿಗೆ ಮನವೊಲಿಕೆಯ ಮೂಲಕ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಈ ವಿಧಾನವು ವಿಫಲವಾದರೆ, ಸಾರ್ವಜನಿಕ ಸುವ್ಯವಸ್ಥೆಯ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
“ನೀವು ನಮಾಜ್ ಮಾಡಬೇಕಾದರೆ,  ನೀವು ಬೇರೆ ಬೇರೆ ಪಾಳಿ (ಶಿಫ್ಟ್‌)  ಅಥವಾ ಸಮಯದಲ್ಲಿ ಅದನ್ನು ಮಾಡಬಹುದು. ನಾವು ನಿಮ್ಮನ್ನು ಪ್ರೀತಿಯಿಂದ ಒಪ್ಪಿಸುತ್ತೇವೆ, ಆದರೆ ಅದು ಕೆಲಸ ಮಾಡದಿದ್ದರೆ, ಮತ್ತೊಂದು ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಆದಿತ್ಯನಾಥ ಹೇಳಿದ್ದಾರೆ. ಅಲ್ಲದೆ, ತಮ್ಮ ಈ ಭಾಷಣದ ವೀಡಿಯೊವನ್ನು ಅವರು ‘X’ (ಟ್ವಿಟರ್) ನಲ್ಲೂ ಹಂಚಿಕೊಂಡಿದ್ದಾರೆ.

ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಮಾತ್ರ
ರಸ್ತೆಗಳು ಕಾರ್ಮಿಕರು, ವ್ಯಾಪಾರಿಗಳು, ರೋಗಿಗಳು ಮತ್ತು ತುರ್ತು ಸೇವೆಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕಾಗಿ ಇವೆ. ಯಾವುದೇ ರೀತಿಯ ಅಡೆತಡೆಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಸಂಚಾರವನ್ನು ತಡೆಯಲು ಅಥವಾ ರಸ್ತೆ ವೃತ್ತಗಳನ್ನು (intersections) ಸಭೆ ಸೇರುವ ಸ್ಥಳಗಳನ್ನಾಗಿ ಪರಿವರ್ತಿಸಲು ಯಾರಿಗೂ ಹಕ್ಕಿಲ್ಲ ಎಂದು ಅವರು ಹೇಳಿದರು.
ಕಾನೂನಿನ ಆಡಳಿತವು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಮತ್ತು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಎಂದು ಹೇಳಿದ ಅವರು, “ನಾವು ನಮಾಜ್ ಮಾಡಬೇಡಿ ಎಂದು ಹೇಳುವುದಿಲ್ಲ, ಆದರೆ ಅದನ್ನು ರಸ್ತೆಗಳ ಮೇಲೆ ಮಾಡಬೇಡಿ ಎಂದು ಹೇಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement