ಮಡಿಕೇರಿ : ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ ; ಗಾಯಗೊಂಡಿದ್ದ ‘ಮಾರ್ತಾಂಡ’ ಸಾವು

ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಕಂಜನ್ (Kanjan) ಮತ್ತು ಮಾರ್ತಾಂಡ ಆನೆಗಳ (Marthanda Elephant) ನಡುವೆ ಸೋಮವಾರ ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೇ ಇಂದು, ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ.
ಸೋಮವಾರ ಸ್ನಾತ ಮಾಡಿಸುತ್ತಿದ್ದಾಗ ಕಂಜನ್ ಎಂಬ ಆನೆಯು ಏಕಾಏಕಿ ಮಾರ್ತಾಂಡ ಆನೆ ಮೇಲೆ ನಡೆಸಿದ ಹಠಾತ್‌ ದಾಳಿಯಲ್ಲಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದ ಮಾರ್ತಾಂಡ ಆನೆಯಡಿ ಸಿಲುಕಿ ತಮಿಳುನಾಡಿನ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯ ಸಾಕಾನೆ ಮಾರ್ತಾಂಡ ಕೂಡ ಮೃತಪಟ್ಟಿದೆ ಎಂದು ವರದಿಯಾಗಿದೆ.

ಕಂಜನ್ ಆನೆಯ ದಂತದ ತಿವಿತದಿಂದ ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ಇತರೆ ಭಾಗಗಳಿಗೆ ತಿವಿದು ಗಾಯ ಗೊಳಿಸಿತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಆಂತರಿಕ ಗಾಯಗಳಾಗಿದ್ದವು. ಈ ಆನೆಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಾಯಗಳು ಅತ್ಯಂತ ಆಳವಾಗಿದ್ದರಿಂದ ಮತ್ತು ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಮಾರ್ತಾಂಡ ಇಂದು ಮಂಗಳವಾರ ಮೃತಪಟ್ಟಿದೆ. ಮಾರ್ತಾಂಡ ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಾವುತ ಮತ್ತು ಇತರ ಸಿಬ್ಬಂದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದ ಮಾರ್ತಾಂಡ ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು. ದುಬಾರೆಯಲ್ಲಿ ಪ್ರವಾಸಿಗರಿಗೆ ಅತ್ಯಂತ ಪ್ರಿಯವಾದ ಆನೆಯಾಗಿತ್ತು. ಈ ಆನೆ ದಾರುಣವಾಗಿ ಅಂತ್ಯ ಕಂಡಿರುವುದು ಶಿಬಿರದಲ್ಲಿ ಮೌನ ಆವರಿಸುವಂತೆ ಮಾಡಿದೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement