ಪ್ರಧಾನಿ ಮೋದಿಯನ್ನು ‘ಹಾವಾಡಿಗ’ನಂತೆ ಬಿಂಬಿಸಿ ʼಜನಾಂಗೀಯ ನಿಂದನೆʼಯ ಕಾರ್ಟೂನ್ ಪ್ರಕಟಿಸಿದ ನಾರ್ವೆ ಪತ್ರಿಕೆ

ಓಸ್ಲೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಕುರಿತಾದ ಚರ್ಚೆಗಳ ಬೆನ್ನಲ್ಲೇ, ನಾರ್ವೆಯ ಮುಂಚೂಣಿಯ ದಿನಪತ್ರಿಕೆಯೊಂದು ಪ್ರಧಾನಿ ಮೋದಿ ಅವರನ್ನು ‘ಹಾವಾಡಿಗ’ನಂತೆ ಬಿಂಬಿಸುವ ಜನಾಂಗೀಯ ನಿಂದನೆಯ ಕಾರ್ಟೂನ್ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ಪ್ರಧಾನಿ ಮೋದಿ ಅವರು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಇಳಿಯುವುದಕ್ಕೂ ಕೆಲವೇ ಗಂಟೆಗಳ ಮುನ್ನ ನಾರ್ವೆಯ ಪ್ರಮುಖ ದಿನಪತ್ರಿಕೆ ‘ಅಫ್ಟೆನ್‌ಪೋಸ್ಟನ್’ (Aftenposten) ಈ ಕಾರ್ಟೂನ್ ಹಾಗೂ ಅದರ ಜೊತೆಗೆ ಲೇಖನವೊಂದನ್ನು ಪ್ರಕಟಿಸಿತ್ತು.
ವಿವಾದಿತ ಕಾರ್ಟೂನ್ ಮತ್ತು ಲೇಖನದಲ್ಲೇನಿದೆ?
“ಒಬ್ಬ ಚತುರ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ” (A clever and slightly annoying man) ಎಂಬ ಶೀರ್ಷಿಕೆಯಡಿ ಈ ಲೇಖನವನ್ನು ಪ್ರಕಟಿಸಲಾಗಿದೆ. ನಾರ್ಡಿಕ್ (Nordic) ದೇಶಗಳೊಂದಿಗೆ ಭಾರತ ಏಕೆ ಸಭೆ ನಡೆಸುತ್ತಿದೆ ಎಂಬುದರ ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಆದರೆ, ಇದರ ಜೊತೆಗಿದ್ದ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಹಾವಾಡಿಗನಂತೆ ಚಿತ್ರಿಸಲಾಗಿದೆ. ಮೋದಿಯವರನ್ನು ಹಾವಾಡಿಗನ ರೂಪದಲ್ಲಿ ತೋರಿಸಲಾಗಿದ್ದು, ಹಾವಿನ ಬದಲು ಪೆಟ್ರೋಲ್ ಬಂಕಿನ ಇಂಧನ ಪೈಪ್ ಅನ್ನು ಮೋದಿಯವರು ನಿಯಂತ್ರಿಸುತ್ತಿರುವಂತೆ ಚಿತ್ರಿಸಲಾಗಿದೆ.

‘ಇದು ಜನಾಂಗೀಯ ದ್ವೇಷದ ಪರಮಾವಧಿ’
ಈ ಕಾರ್ಟೂನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಜಗತ್ತಿನಾದ್ಯಂತ ಇರುವ ನೆಟ್ಟಿಗರು ಪತ್ರಿಕೆಯ ವರ್ಣಭೇದ ನೀತಿ ಹಾಗೂ ಜನಾಂಗೀಯ ದ್ವೇಷದ (Racist) ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಅತ್ಯಂತ “ಅವಹೇಳನಕಾರಿ” ಮತ್ತು ಕೀಳುಮಟ್ಟದ ಕಲ್ಪನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
“ಲೇಖಕ ಫ್ರಾಂಕ್ ರೊಸ್ಸಾವಿಕ್ ಮತ್ತು ಅಫ್ಟೆನ್‌ಪೋಸ್ಟನ್ ಪತ್ರಿಕೆಯು ಪ್ರಧಾನಿ ಮೋದಿ ಅವರನ್ನು ಹಾವಾಡಿಗನಂತೆ ಚಿತ್ರಿಸಿ ಜನಾಂಗೀಯ ನಿಂದನೆಯ ಕಾರ್ಟೂನ್ ರಚಿಸಿದ್ದಾರೆ. ಯೂರೋಪಿನ ಸವೆದುಹೋದ ಪತ್ರಿಕೆಗಳಿಂದ ಇಂತಹ ಹಳೇ ವಸಾಹತುಶಾಹಿ ಕಸವನ್ನು ಬಿಟ್ಟು ಬೇರೇನು ನಿರೀಕ್ಷಿಸಲು ಸಾಧ್ಯ?” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಭಾರತದ ಬೆಳವಣಿಗೆಯನ್ನು ಸಹಿಸದ ಪಾಶ್ಚಿಮಾತ್ಯರು:
“ಪಾಶ್ಚಿಮಾತ್ಯ ದೇಶಗಳ ಬಳಿ ಭಾರತವನ್ನು ಎದುರಿಸಲು ಈಗ ಯಾವುದೇ ರಚನಾತ್ಮಕ ವಾದಗಳು ಉಳಿದಿಲ್ಲ. ಜಿಡಿಪಿ (GDP) ಬೆಳವಣಿಗೆಯಲ್ಲಿ ಭಾರತವನ್ನು ಸೋಲಿಸಲು ಅವರ ಕೈಲಾಗುತ್ತಿಲ್ಲ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ (Digital Public Infrastructure) ಸರಿಸಾಟಿಯಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು (Global Supply Chains) ಭಾರತ ಮುನ್ನಡೆಸುತ್ತಿರುವುದನ್ನು ಅವರಿಗೆ ತಡೆಯಲು ಆಗುತ್ತಿಲ್ಲ. ಹಾಗಾಗಿ, ಅವರ ಬಳಿ ಉಳಿದಿರುವ ಏಕೈಕ ಸಾಧನವೆಂದರೆ ಇಂತಹ ಜನಾಂಗೀಯ ನಿಂದನೆಯ ಹಾವಾಡಿಗನ ಚಿತ್ರ ಬಿಡಿಸುವುದು ಮಾತ್ರ,” ಎಂದು ಮತ್ತೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿವಾದದ ಮಧ್ಯೆ ಪ್ರಧಾನಿ ಮೋದಿ ಅವರ ನಾರ್ವೆ ಭೇಟಿಯ ಸಂದರ್ಭ ನಡೆದ ಪತ್ರಿಕಾಗೋಷ್ಠಿಯೂ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್, ಪ್ರಧಾನಿ ಮೋದಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡದೇ ಹೊರಟಿರುವುದನ್ನು ಪ್ರಶ್ನಿಸಿದ್ದರು.
ನಾರ್ವೆ ಪ್ರಧಾನಿ ಜೊತೆ ನಡೆದ ಜಂಟಿ ಕಾರ್ಯಕ್ರಮದಲ್ಲಿ ಅವರು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಸ್ಥಿತಿಗತಿ ಕುರಿತು ಪ್ರಶ್ನೆ ಎತ್ತಿದ್ದರು. ಆದರೆ, ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಬಳಿಕ ಈ ವಿಡಿಯೊವನ್ನು ಹೆಲ್ಲೆ ಲಿಂಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿ.ಬಿ. ಜಾರ್ಜ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಸಂವಿಧಾನಬದ್ಧ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಭದ್ರವಾದ ವ್ಯವಸ್ಥೆ ಇದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

“ಭಾರತದ ಪ್ರಮಾಣ, ವೈವಿಧ್ಯತೆ ಹಾಗೂ ಪ್ರಜಾಪ್ರಭುತ್ವದ ಬಲದ ಬಗ್ಗೆ ಹಲವರಿಗೆ ಸಮರ್ಪಕ ಅರಿವಿಲ್ಲ. ಭಾರತದಲ್ಲಿ ಪ್ರತಿದಿನ ಎಷ್ಟು ಸುದ್ದಿಗಳು ಹೊರಬರುತ್ತವೆ ಎಂಬುದು ನಿಮಗೇನಾದರೂ ತಿಳಿದಿದೆಯೇ? ಕೇವಲ ದೆಹಲಿಯಲ್ಲೇ ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಕನಿಷ್ಠ 200 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳಿವೆ. ಪ್ರತಿ ಸಂಜೆ ನೂರಾರು ಬ್ರೇಕಿಂಗ್ ನ್ಯೂಸ್‌ಗಳು ಬಿತ್ತರವಾಗುತ್ತವೆ. ಟೀಕೆ ಮಾಡುವವರಿಗೆ ಭಾರತದ ಭೌಗೋಳಿಕ ಮತ್ತು ಸಾಮಾಜಿಕ ವಿಸ್ತಾರ ಹಾಗೂ ಸಂಕೀರ್ಣತೆಯ ಅರಿವೇ ಇಲ್ಲ ಎಂದು ಹೇಳಿದ್ದಾರೆ.
ಕೆಲವು ಅರೆಬರೆ ಜ್ಞಾನ ಹೊಂದಿರುವ ಎನ್‌ಜಿಒಗಳು (NGOs) ನೀಡುವ ಒಂದೆರಡು ವರದಿಗಳನ್ನು ಓದಿಕೊಂಡು ಬಂದು, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳಲು ನಿಲ್ಲುತ್ತಾರೆ,” ಎಂದು ಸಿಬಿ ಜಾರ್ಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿಯನ್ನು ನೆನಪಿಸಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ಗ್ಯಾರಂಟಿ ನೀಡಿದೆ. ಯಾವುದೇ ಹಕ್ಕುಗಳ ಉಲ್ಲಂಘನೆಯಾದರೂ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಭಾರತದಲ್ಲಿದೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳ ಆಪಾದನೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಹಳೇ ವಸಾಹತುಶಾಹಿ ಭ್ರಮೆಯಿಂದ ಹೊರಬರದ ಯೂರೋಪ್
ಭಾರತವನ್ನು ಇಂದಿಗೂ ಹಾವಾಡಿಗರು, ಆನೆಗಳು ಮತ್ತು ಹಳೆಯ ವಸಾಹತುಶಾಹಿ ಕಾಲದ ಕಲ್ಪನೆಗಳಲ್ಲೇ ನೋಡಲು ಬಯಸುವ ಪಾಶ್ಚಿಮಾತ್ಯ ಮಾಧ್ಯಮಗಳ ಧೋರಣೆಯನ್ನು ಇಂಟರ್ನೆಟ್ ಬಳಕೆದಾರರು ತೀವ್ರವಾಗಿ ಖಂಡಿಸಿದ್ದಾರೆ.
ಇದೇ ರೀತಿಯ ಘಟನೆ 2022 ರಲ್ಲೂ ನಡೆದಿತ್ತು. ಭಾರತದ ಆರ್ಥಿಕ ಬೆಳವಣಿಗೆಯನ್ನು ವರದಿ ಮಾಡುವಾಗ ಸ್ಪೇನ್ ದೇಶದ ಪತ್ರಿಕೆಯೊಂದು ಇದೇ ಹಾವಾಡಿಗನ ಸಂಕೇತವನ್ನು ಬಳಸಿ ತೀವ್ರ ಟೀಕೆಗೆ ಒಳಗಾಗಿತ್ತು.
ಭಾರತದ ವೇಗವಾದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಪ್ರಭಾವದ ನಡುವೆಯೂ ಕೆಲ ಪಾಶ್ಚಾತ್ಯ ಮಾಧ್ಯಮಗಳು ಇನ್ನೂ ಹಳೆಯ ಪೂರ್ವಾಗ್ರಹಗಳಿಂದ ಹೊರಬರದೇ ಇರುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಗಮನಾರ್ಹವಾಗಿ, ಪ್ರಧಾನಿ ಮೋದಿ ಅವರು 2014ರಲ್ಲಿ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ, “ಒಮ್ಮೆ ಭಾರತವನ್ನು ಹಾವು ಹಿಡಿಯುವವರ ದೇಶ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ನಮ್ಮ ಯುವಕರು ಕಂಪ್ಯೂಟರ್ ಮೌಸ್ ಬಳಸಿ ಜಗತ್ತನ್ನೇ ಆಡಿಸುವ ‘ಮೌಸ್ ಚಾರ್ಮರ್ಸ್’ (Mouse Charmers) ಆಗಿ ಭಾರತವನ್ನು ತಂತ್ರಜ್ಞಾನದ ಶಕ್ತಿಯಾಗಿ ಪರಿವರ್ತಿಸಿದ್ದಾರೆ,” ಎಂದು ಪಾಶ್ಚಿಮಾತ್ಯರ ಸ್ಟೀರಿಯೋಟೈಪ್‌ಗಳಿಗೆ ತಕ್ಕ ಉತ್ತರ ನೀಡಿದ್ದರು. ಆದಾಗ್ಯೂ, ಪಾಶ್ಚಿಮಾತ್ಯ ಮಾಧ್ಯಮಗಳು ಇಂದಿಗೂ ಅದೇ ಹಳೇ ವಿಕೃತ ಮನಸ್ಥಿತಿಯಲ್ಲಿ ಬದುಕುತ್ತಿರುವುದು ಈ ಘಟನೆಯಿಂದ ಸಾಬೀತಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement