ಭೋಪಾಲ್: ತನ್ನ ಪತ್ನಿ ಟ್ವಿಶಾ ಶರ್ಮಾ ಸಾವಿಗೀಡಾದ ನಂತರ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಪತಿ ಸಮರ್ಥ ಸಿಂಗ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಿಂದ ವಕೀಲನಾಗಿರುವ ಸಮರ್ಥ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದ ಕೆಲವೇ ಗಂಟೆಗಳಲ್ಲಿ ಜಬಲಪುರ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ. ಆದರೆ, ಭೋಪಾಲ ನ್ಯಾಯಾಲಯದ ಮುಂದೆ ಶರಣಾಗುವಂತೆ ಜಬಲ್‌ಪುರ ಕೋರ್ಟ್ ಆತನಿಗೆ ಸೂಚಿಸಿತು. ಇದೇ ವೇಳೆ ಕೋರ್ಟ್ ಆವರಣದಲ್ಲೇ ಹೊಂಚು ಹಾಕಿ ಕುಳಿತಿದ್ದ ಭೋಪಾಲ್ ಪೊಲೀಸರ ತಂಡ ಆತನನ್ನು ವಶಕ್ಕೆ ಪಡೆದು ಭೋಪಾಲಕ್ಕೆ ಕರೆತಂದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮರ್ಥ್ ಸಿಂಗ್ ಮಾಸ್ಕ್, ಕ್ಯಾಪ್, ಸನ್‌ಗ್ಲಾಸ್ ಧರಿಸಿ, ಹೆಗಲ ಮೇಲೆ ಬಟ್ಟೆ ಹೊದ್ದು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡು ಕೋರ್ಟ್ ಆವರಣ ಪ್ರವೇಶಿಸಿದ್ದ ಎನ್ನಲಾಗಿದೆ.
ಭೋಪಾಲದ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಮೇ 12 ರಂದು ಟ್ವಿಶಾ ಶರ್ಮಾ (33) ಶವವಾಗಿ ಪತ್ತೆಯಾಗಿದ್ದರು. ಟ್ವಿಶಾ ಕುಟುಂಬಸ್ಥರು ಇದೊಂದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಆರೋಪಿಸಿದ್ದು, ಪತಿ ಸಮರ್ಥ ಸಿಂಗ್ ಹಾಗೂ ಆತನ ತಾಯಿ, ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೇ 12 ರಂದು ಟ್ವಿಶಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಇದನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ ಟ್ವಿಶಾಳಿಗೆ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಮತ್ತು ಪದೇ ಪದೇ ಆಕೆಯನ್ನು ಅವಮಾನಿಸಲಾಗುತ್ತಿತ್ತು ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
“ಸ್ಥಳೀಯ ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ. ನಮಗೆ ಭೋಪಾಲ್ ಪೊಲೀಸರ ಮೇಲೆ ನಂಬಿಕೆಯಿಲ್ಲ.” ಹೀಗಾಗಿ ಟ್ವಿಶಾ ದೇಹದ ದ್ವಿತೀಯ ಮರಣೋತ್ತರ ಪರೀಕ್ಷೆ (Second Autopsy) ನಡೆಸಬೇಕು ಎಂದು ಪಟ್ಟು ಹಿಡಿದ ಕುಟುಂಬಸ್ಥರು, ಅಲ್ಲಿಯವರೆಗೆ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದರು.
ತಾನು ಅನುಭವಿಸುತ್ತಿದ್ದ ನರಕಯಾತನೆಯ ಬಗ್ಗೆ ಟ್ವಿಶಾ ಸಾವಿಗೂ ಮುನ್ನ ತನ್ನ ಸ್ನೇಹಿತರು ಮತ್ತು ಕುಟುಂಬದವರ ಬಳಿ ಅಳಲು ತೋಡಿಕೊಂಡಿದ್ದರು. ತಾನು ಅತ್ಯಂತ ದುಃಖದಾಯಕ ವೈವಾಹಿಕ ಜೀವನದಲ್ಲಿದ್ದು, ಸಿಕ್ಕಿಬಿದ್ದ ಅನುಭವವಾಗುತ್ತಿದೆ ಎಂದು ಆಕೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ