ಭಟ್ಕಳದಲ್ಲಿ ದುರಂತ; ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ನೀರು ಪಾಲು

ಕಾರವಾರ : ಕಪ್ಪೆ ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ನೀರು ಪಾಲಾದ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
​ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಈ ದುರಂತ ಸಂಭವಿಸಿದೆ. ಭಾನುವಾರ ರಜೆಯ ದಿನವಾದ್ದರಿಂದ ತಂಡವೊಂದು ಅಳ್ವೇಕೋಡಿ ಸಮುದ್ರ ತೀರಕ್ಕೆ ತೆರಳಿತ್ತು. ಈ ವೇಳೆ ಸಮುದ್ರದಲ್ಲಿ ಕಪ್ಪೆ ಚಿಪ್ಪು ತೆಗೆಯಲು ನೀರಿನಲ್ಲಿ ಇಳಿದಿದ್ದು, ಈ ವೇಳೆ ನದಿಗೆ ಇಳಿದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಎಂಟು ಮಂದಿ ನೀರು ಪಾಲಾದ ಶಂಕೆ ವ್ಯಕ್ತವಾಗಿದೆ.

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು. ಜೊತೆಗೆ ಸಮುದ್ರದ ಅಲೆಗಳ ಅಬ್ಬರವೂ ತೀವ್ರವಾಗಿದ್ದುದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ ಎನ್ನಲಾಗಿದೆ.
ಮೃತದೇಹಗಳನ್ನು ಅಳ್ವೆಕೋಡಿ ಬಳಿ ಪತ್ತೆಹಚ್ಚಿ ಹೊರತೆಗೆಯಲಾಗಿದೆ. ಮೃತರನ್ನು ​ಲಕ್ಷ್ಮಿ ಮಹಾದೇವ ನಾಯ್ಕ (42), ಪಡುಶಿರಾಲಿ ಬೆಂಗ್ರೆ, ಉಮೇಶ ನಾಯ್ಕ (30), ಶಾರದಾಹೊಳೆ, ಲಕ್ಷ್ಮಿ ನಾಯ್ಕ (30), ಶಾರದಾಹೊಳೆ, ​ಜ್ಯೋತಿ ನಾಗಪ್ಪ ನಾಯ್ಕ (34), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ​ಮಾಲತಿ ನಾಯ್ಕ (38), ಲಕ್ಷ್ಮಿ ಶಿವರಾಮ ನಾಯ್ಕ (49), ಮಾಸ್ತಮ್ಮ ನಾಯ್ಕ ಎಂದು ಹೇಳಲಾಗಿದೆ.
ಅದೃಷ್ಟವಶಾತ್ ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭಟ್ಕಳ ಠಾಣೆಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿದ್ದಾರೆ. ನದಿಯಲ್ಲಿ ಇನ್ನೂ ಕೆಲವರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

5 ಲಕ್ಷ ರೂ.ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ‌ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement