ಅತಿದೊಡ್ಡ ಸೈಬರ್‌ ವಂಚನೆ : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಶಿಕ್ಷಕಿಗೆ ‘ಡಿಜಿಟಲ್ ಅರೆಸ್ಟ್’; 24 ಕೋಟಿ ರೂ. ಲೂಟಿ..!

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೂಡ್ಡದಾದ ‘ಡಿಜಿಟಲ್ ಅರೆಸ್ಟ್’ ವಂಚನೆ ಜಾಲವನ್ನು ರಾಜ್ಯದ ಸೈಬರ್ ಕಮಾಂಡ್ ಭೇದಿಸಿದ್ದು, ಸಿಬಿಐ (CBI) ಅಧಿಕಾರಿಗಳ ಸೋಗಿನಲ್ಲಿ ಬಂದು ನಿವೃತ್ತ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ 24 ಕೋಟಿ ರೂಪಾಯಿ ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಸಕಾಲಿಕ ಮತ್ತು ಚುರುಕಿನ ಕಾರ್ಯಾಚರಣೆಯಿಂದಾಗಿ ವಂಚನೆಗೊಳಗಾಗಿದ್ದ ಹಣದಲ್ಲಿ ಸುಮಾರು 5.46 ಕೋಟಿ ರೂಪಾಯಿಗಳನ್ನು ಸದ್ಯಕ್ಕೆ ಜಪ್ತಿ ಮಾಡಲಾಗಿದೆ.
ವಂಚನೆಗೊಳಗಾದ ವೃದ್ಧೆ ಶಿವಾಜಿನಗರದ ನಿವಾಸಿಯಾಗಿದ್ದು, ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಬೆಂಗಳೂರು ಮತ್ತು ಮುಂಬೈನಲ್ಲಿದ್ದ ತಮ್ಮ ಆಸ್ತಿಗಳನ್ನು ಮಾರಿ, ಅಮೆರಿಕಾದಲ್ಲಿ ನೆಲೆಸಿರುವ ಮಕ್ಕಳ ಬಳಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಆಕೆಯನ್ನು ವಂಚಿಸಲು ಜಾಲ ಹೆಣೆದಿದ್ದಾರೆ.

ಆರೋಪಿಗಳು ವೃದ್ಧೆಯನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ, “ನಿಮ್ಮ ಬ್ಯಾಂಕ್ ಖಾತೆಗಳು ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ದಂಧೆಗೆ ಬಳಕೆಯಾಗಿವೆ” ಎಂದು ಸುಳ್ಳು ಕಥೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಈ ವಿಷಯವನ್ನು ಯಾರ ಬಳಿಯೂ ಹೇಳಬಾರದು ಎಂದು ಬೆದರಿಸಿ, ಆಕೆಯನ್ನು ‘ಡಿಜಿಟಲ್ ಅರೆಸ್ಟ್’ ಮಾಡಲಾಗಿದೆ ಎಂದು ನಂಬಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಆರೋಪಿಗಳು ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ ಸತತವಾಗಿ ಆಕೆಯನ್ನು ಹೆದರಿಸುತ್ತಾ, ತೀವ್ರ ಮಾನಸಿಕ ಒತ್ತಡದಲ್ಲಿಟ್ಟಿದ್ದರು.
“ನಿಮ್ಮ ಹಣದ ಕಾನೂನುಬದ್ಧತೆ ಪರಿಶೀಲಿಸಬೇಕು (Fund Verification) ಹಾಗೂ ಕ್ಲಿಯರೆನ್ಸ್ ಪ್ರಕ್ರಿಯೆ ಮುಗಿಯಬೇಕು” ಎಂದು ಹೆದರಿಸಿ, ಹಂತ-ಹಂತವಾಗಿ 22 ವಿಭಿನ್ನ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ಬರೋಬ್ಬರಿ 24 ಕೋಟಿ ರೂಪಾಯಿ ವರ್ಗಾಯಿಸಿಕೊಳ್ಳುವಲ್ಲಿ ವಂಚಕರು ಯಶಸ್ವಿಯಾಗಿದ್ದಾರೆ. ಅಷ್ಟು ಕೋಟಿ ಹಣ ಪೀಕಿದ ಮೇಲೂ ವಂಚಕರ ದುರಾಸೆ ನಿಂತಿರಲಿಲ್ಲ, ಅವರು ಮತ್ತಷ್ಟು ಹಣಕ್ಕಾಗಿ ಪೀಡಿಸುತ್ತಲೇ ಇದ್ದರು.

ಪ್ರಮುಖ ಸುದ್ದಿ :-   ಅಕ್ರಮ ವಲಸೆ ತಡೆಯಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿ ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬ್ಯಾಂಕ್ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬೆಳಕಿಗೆ ಬಂದ ದಂಧೆ!
ವಂಚಕರು ಕೇಳಿದ ಹೆಚ್ಚುವರಿ ಹಣವನ್ನು ಹೊಂದಿಸಲು ವೃದ್ಧೆ ಬೆಂಗಳೂರಿನ ಖಾಸಗಿ ಬ್ಯಾಂಕ್‌ಗೆ ತೆರಳಿ, ತಮ್ಮ ಬಳಿಯಿದ್ದ ಸುಮಾರು 1.3 ಕೆಜಿ ಚಿನ್ನದ ಆಭರಣಗಳನ್ನು ಅಡವಿಟ್ಟು ಲೋನ್ ಪಡೆಯಲು ಯತ್ನಿಸಿದ್ದಾರೆ. ಆಕೆಯ ನಡವಳಿಕೆ ಮತ್ತು ಇಷ್ಟೊಂದು ದೊಡ್ಡ ಮೊತ್ತದ ತುರ್ತು ವ್ಯವಹಾರವನ್ನು ಕಂಡು ಸಂಶಯಗೊಂಡ ಬ್ಯಾಂಕ್ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸೈಬರ್ ಕ್ರೈಮ್ ಪೊಲೀಸರು ವೃದ್ಧೆಯನ್ನು ವಿಚಾರಿಸಿದಾಗ, ತಾನು ‘ಡಿಜಿಟಲ್ ಅರೆಸ್ಟ್’ ಆಗಿರುವುದಾಗಿ ಹೆದರುತ್ತಲೇ ತಿಳಿಸಿದ್ದಾರೆ. ಆಗ ಪೊಲೀಸರು ಕಾನೂನಿನಲ್ಲಿ ಇಂತಹ ಯಾವುದೇ ಪ್ರಕ್ರಿಯೆ ಇಲ್ಲ ಎಂದು ಆಕೆಗೆ ಧೈರ್ಯ ತುಂಬಿ ಕೌನ್ಸೆಲಿಂಗ್ ಮಾಡಿದ ನಂತರವೇ ಅವರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಖಾತೆಗಳು ಫ್ರೀಜ್: ಕೋಟ್ಯಂತರ ರೂಪಾಯಿ ರಿಕವರಿ
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳ ಬೆನ್ನುಬಿದ್ದಿದ್ದಾರೆ. ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (National Cyber Crime Reporting Portal) ಸಹಾಯದೊಂದಿಗೆ ವಂಚಕರು ಬಳಸಿದ್ದ ಹಲವು ‘ಮ್ಯೂಲ್ ಅಕೌಂಟ್’ (Mule Accounts) ಗಳನ್ನು ತಕ್ಷಣವೇ ಫ್ರೀಜ್ ಮಾಡುವ ಮೂಲಕ 4 ಕೋಟಿಗೂ ಅಧಿಕ ಹಣವನ್ನು ಉಳಿಸಿದ್ದಾರೆ. ನಂತರ ಕೋರ್ಟ್ ಆದೇಶದ ಮೂಲಕ ಮತ್ತೊಂದು 1.46 ಕೋಟಿ ರೂ. ಹಣವನ್ನು ವಾಪಸ್ ಪಡೆಯಲಾಗಿದೆ. ಇದರೊಂದಿಗೆ ಆರೋಪಿಗಳು ಬಳಸುತ್ತಿದ್ದ 6 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಕಾರವಾರ : ಭಾರತದ ನೌಕಾಪಡೆಗೆ ಸ್ವದೇಶಿ ನಿರ್ಮಿತ ಬಹುಪಯೋಗಿ ನೌಕೆ ‘ಐಎನ್‌ಎಸ್‌ ಸಮರ್ಥಕ್’ ಸೇರ್ಪಡೆ

ವಂಚಕರ ಬಂಧನ
ಬಂಧಿತ ಆರೋಪಿಗಳು ಬೇರೆ ಬೇರೆ ರಾಜ್ಯಗಳಿಗೆ ಸೇರಿದವರಾಗಿದ್ದು, ದೇಶಾದ್ಯಂತ ದೊಡ್ಡ ಸೈಬರ್ ಜಾಲ ಹೊಂದಿದ್ದಾರೆ. ಎನ್ ಶಿವಜ್ಞಾನಂ (ತಮಿಳುನಾಡು), ಅಕ್ಕಾಚ್ ಮಲ್ಲಿಕ್ (ಮುಂಬೈ), ಪಲಕ್ ಭಾಯಿ ಪಟೇಲ್ (ಗುಜರಾತ್), ಅಮಿತ್ ನರೇಂದ್ರ ಪಟೇಲ್ (ಗುಜರಾತ್), ಓಂಪ್ರಕಾಶ ರಜಪೂತ್ (ನವದೆಹಲಿ) ಹಾಗೂ ಗೌರವಕುಮಾರ (ಬಿಹಾರ) ಎಂದು ಗುರುತಿಸಲಾಗಿದೆ.
ಕರ್ನಾಟಕ ರಾಜ್ಯ ಸೈಬರ್ ಕಮಾಂಡ್‌ನ ಮಹಾನಿರ್ದೇಶಕರಾದ (DGP) ಪ್ರಣವ ಮೊಹಂತಿ ಅವರು ಮಾತನಾಡಿ, “ಈ ಜಾಲದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆ ಹಾಗೂ ಉಳಿದ ಹಣವನ್ನು ರಿಕವರಿ ಮಾಡಲು ತನಿಖೆ ತೀವ್ರಗೊಳಿಸಲಾಗಿದೆ. ದೇಶದ ಇತರೆ ಭಾಗಗಳಲ್ಲಿ ನಡೆದಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳಿಗೂ ಈ ಗ್ಯಾಂಗ್‌ಗೂ ಏನಾದರೂ ಲಿಂಕ್ ಇದೆಯೇ ಎಂಬ ನಿಟ್ಟಿನಲ್ಲಿಯೂ ಪರಿಶೀಲನೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement