ಶಾಂತಿ ಮಾತುಕತೆ ನಡುವೆಯೇ ಇರಾನಿನ ಕ್ಷಿಪಣಿ ನೆಲೆ, ಮೈನ್‌ ಲೇಯಿಂಗ್ ಬೋಟ್‌ಗಳ ಮೇಲೆ ಅಮೆರಿಕ ದಾಳಿ ; ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಮೂರು ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಕತಾರ್ ರಾಜಧಾನಿ ದೋಹಾದಲ್ಲಿ ಉನ್ನತ ಮಟ್ಟದ ಶಾಂತಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಸೇನೆಯು ದಕ್ಷಿಣ ಇರಾನ್ ಮೇಲೆ ಹೊಸದಾಗಿ ವಾಯುದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಕ್ಷಿಪಣಿ ಉಡಾವಣಾ ನೆಲೆಗಳು ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿ ಮೈನ್‌ಗಳನ್ನು (ಸಮುದ್ರ ಬಾಂಬ್) ಇಡಲು ಯತ್ನಿಸುತ್ತಿದ್ದ ಇರಾನಿ ಬೋಟ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಇದನ್ನು ತಾನು ನಡೆಸಿದ ‘ಆತ್ಮರಕ್ಷಣೆ’ (Self-defence) ಕ್ರಮ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಟಿಮ್ ಹಾಕಿನ್ಸ್ ಈ ಕುರಿತು ಮಾಹಿತಿ ನೀಡಿದ್ದು, “ಪ್ರಸ್ತುತ ಜಾರಿಯಲ್ಲಿರುವ ಕದನ ವಿರಾಮದ ನಿಯಮಗಳನ್ನು ಗೌರವಿಸುತ್ತಲೇ, ನಮ್ಮ ಸೈನಿಕರ ರಕ್ಷಣೆಗಾಗಿ ಅಮೆರಿಕ ಮಿಲಿಟರಿ ಈ ಕ್ರಮ ಕೈಗೊಂಡಿದೆ. ಇರಾನ್ ಪಡೆಗಳಿಂದ ಎದುರಾಗಬಹುದಾದ ಭೀತಿಯನ್ನು ಎದುರಿಸಲು ಈ ‘ಆತ್ಮರಕ್ಷಣಾ’ ದಾಳಿ ಅನಿವಾರ್ಯವಾಗಿತ್ತು,” ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಇರಾನ್‌ನ ಪ್ರಮುಖ ನೌಕಾನೆಲೆ ಹೊಂದಿರುವ ಮತ್ತು ಆಯಕಟ್ಟಿನ ಹಾರ್ಮುಜ್ ಜಲಸಂಧಿಗೆ ಹತ್ತಿರವಿರುವ ದಕ್ಷಿಣದ ಪ್ರಮುಖ ಬಂದರು ನಗರಿ ಪೋರ್ಟ್‌ ಅಬ್ಬಾಸ್ ಬಳಿ ಅಮೆರಿಕ ದಾಳಿ ನಡೆಸಿದೆ.
ಅಮೆರಿಕದ ದಾಳಿಯ ಬೆನ್ನಲ್ಲೇ ಪೋರ್ಟ್‌ ಅಬ್ಬಾಸ್ ವಿಮಾನ ನಿಲ್ದಾಣ ಮತ್ತು ನೌಕಾನೆಲೆ ಬಳಿ ಮೂರು ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿರುವುದನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢೀಕರಿಸಿದೆ. ಶತ್ರು ಪಡೆಗಳ ದಾಳಿಯನ್ನು ಎದುರಿಸಲು ಪೋರ್ಟ್‌ ಅಬ್ಬಾಸ್‌ನಲ್ಲಿರುವ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು (Air defence system) ಸಕ್ರಿಯಗೊಳಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಪರ್ಷಿಯನ್ ಕೊಲ್ಲಿಯ ಸಿರಿಕ್ ಮತ್ತು ಜಾಸ್ಕ್ ಬಳಿಯೂ ಸ್ಫೋಟದ ಶಬ್ದಗಳು ಕೇಳಿಬಂದಿವೆ.
ಈ ದಾಳಿಗೂ ಮುನ್ನ ಇರಾನ್ ಸೇನೆಯು ಪರ್ಷಿಯನ್ ಕೊಲ್ಲಿಯಲ್ಲಿ ಶತ್ರು ಪಡೆಯ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿತ್ತು. ದಾಳಿಯ ಕುರಿತು ಇರಾನ್ ಅಧಿಕೃತವಾಗಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ದೇಶದ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ನೂತನ  ಮುಖ್ಯಸ್ಥ ಮೊಹಮ್ಮದ್ ಬಾಘೇರ್ ಜೊಲ್ಘಾದ್ರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಮ್ಮ ಸೈನಿಕರು, ರಾಜತಾಂತ್ರಿಕರು ಮತ್ತು ಇರಾನ್‌ನ ಜನತೆ ಅಪ್ರತಿಮ ಪ್ರತಿರೋಧದ ಮೂಲಕ ಶತ್ರುಗಳನ್ನು ಮೊಣಕಾಲೂರುವಂತೆ ಮಾಡಿದ್ದಾರೆ,” ಎಂದು ಹೇಳಿದ್ದಾರೆ.
ಮುಂದುವರಿದ ಶಾಂತಿ ಮಾತುಕತೆ
ಒಂದೆಡೆ ದಾಳಿಗಳು ನಡೆಯುತ್ತಿದ್ದರೂ, ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಾಘೇರ್ ಘಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಬ್ದುಲ್ನಾಸರ್ ಹೆಮ್ಮತಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಕತಾರ್ ಪ್ರಧಾನಿ ಜೊತೆ ಶಾಂತಿ ಮಾತುಕತೆಯಲ್ಲಿ ನಿರತವಾಗಿದೆ.
ಏಪ್ರಿಲ್ 8 ರಂದು ಆರಂಭವಾದ ಕದನ ವಿರಾಮದ ನಡುವೆಯೂ ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿರುವ ಈ ಯುದ್ಧವನ್ನು ಕೊನೆಗಾಣಿಸಲು ಉಭಯ ದೇಶಗಳು ಶ್ರಮಿಸುತ್ತಿವೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಕಾಯಿ ಅವರ ಪ್ರಕಾರ, ಮಾತುಕತೆಯಲ್ಲಿ ಸ್ವಲ್ಪ ಪ್ರಗತಿಯಾಗಿದೆಯಾದರೂ, ಶಾಂತಿ ಒಪ್ಪಂದ ತಕ್ಷಣವೇ ಏರ್ಪಡುವ ಲಕ್ಷಣಗಳಿಲ್ಲ.
ಚರ್ಚೆಯ ಮುಖ್ಯ ವಿಷಯಗಳು:
ಹಾರ್ಮುಜ್ ಜಲಸಂಧಿ: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನ ಮುಕ್ತಗೊಳಿಸುವುದು.
ಯುರೇನಿಯಂ ಸಂಗ್ರಹ: ಇರಾನ್ ಹೊಂದಿರುವ ಗರಿಷ್ಠ ಪ್ರಮಾಣದ ಪುಷ್ಟೀಕರಿಸಿದ ಯುರೇನಿಯಂ (Enriched Uranium) ವಿಲೇವಾರಿ.
ಮುಟ್ಟುಗೋಲು ಹಾಕಿಕೊಂಡ ಹಣ: ಅಮೆರಿಕದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಸೆಂಟ್ರಲ್ ಬ್ಯಾಂಕ್ ಹಣವನ್ನು ಬಿಡುಗಡೆ ಮಾಡುವುದು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement