ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇ.ಡಿ. ದಾಳಿ

ತಿರುವನಂತಪುರಂ/ಹೊಸದೆಹಲಿ: ಕೇರಳ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (PMLA) ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರಂ ನಿವಾಸ ಸೇರಿದಂತೆ ಕೇರಳದ ಒಟ್ಟು 12 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ.
ರಾಜಧಾನಿ ತಿರುವನಂತಪುರಂನಲ್ಲಿರುವ ವಿಜಯನ್ ಅವರ ಬಾಡಿಗೆ ಮನೆ ಹಾಗೂ ಕಣ್ಣೂರಿನಲ್ಲಿ ಅವರಿಗೆ ಸೇರಿದ ಮತ್ತೊಂದು ನಿವಾಸದ ಮೇಲೂ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಖಾಸಗಿ ಕಂಪನಿಯಾದ ‘ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್’ (CMRL), ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ (Exalogic Solutions) ಎಂಬ ಐಟಿ ಸಂಸ್ಥೆಗೆ 2018 ಮತ್ತು 2019ರ ಅವಧಿಯಲ್ಲಿ 1.72 ಕೋಟಿ ರೂಪಾಯಿ ಅಕ್ರಮ ಹಣವನ್ನು ಪಾವತಿಸಿದೆ ಎಂಬುದು ಪ್ರಮುಖ ಆರೋಪವಾಗಿದೆ. ವಿಶೇಷವೆಂದರೆ, ವೀಣಾ ಅವರ ಐಟಿ ಕಂಪನಿಯು ಸಿಎಂಆರ್‌ಎಲ್‌ಗೆ ಯಾವುದೇ ರೀತಿಯ ತಾಂತ್ರಿಕ ಸೇವೆಗಳನ್ನು ನೀಡದಿದ್ದರೂ ಈ ಬೃಹತ್ ಮೊತ್ತವನ್ನು ವರ್ಗಾಯಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಪುತ್ರಿ ಮತ್ತು ಅಳಿಯನಿಗೆ ಇಡಿ ಸಂಕಷ್ಟ
ಬುಧವಾರದ ಕಾರ್ಯಾಚರಣೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಣರಾಯಿ ವಿಜಯನ್ ಪುತ್ರಿ ಟಿ. ವೀಣಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರೊಂದಿಗೆ, ವೀಣಾ ಅವರ ಪತಿಯೂ ಆಗಿರುವ ಬೇಪೂರ್ ಶಾಸಕ ಪಿ.ಎ. ಮೊಹಮ್ಮದ್ ರಿಯಾಸ್ ಅವರಿಗೆ ಸಂಬಂಧಿಸಿದ ನಿವಾಸಗಳ ಮೇಲೂ ದಾಳಿ ನಡೆದಿದೆ. ಮತ್ತೊಂದೆಡೆ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಪುತ್ರ ಹಾಗೂ ಕಂಪನಿಯ ನಿರ್ದೇಶಕರ ಮಂಡಳಿ ಸದಸ್ಯನನ್ನೂ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಆ್ಯಕ್ಷನ್!
ಇಡಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ ಕಂಪನಿಯು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರವಷ್ಟೇ ವಜಾಗೊಳಿಸಿತ್ತು. ನ್ಯಾಯಾಲಯದಿಂದ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಈ ದಾಳಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ 2024ರಲ್ಲೇ ಪಿಎಂಎಲ್‌ಎ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಪ್ರಸ್ತುತ ಇಡಿ ಮಾತ್ರವಲ್ಲದೆ, ಗಂಭೀರ ವಂಚನೆ ತನಿಖಾ ಕಚೇರಿಯೂ (SFIO) ಈ ಹಗರಣದ ಸತ್ಯಾಸತ್ಯತೆ ಬಗ್ಗೆ ಶೋಧ ನಡೆಸುತ್ತಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement