ಕೋಲ್ಕತ್ತಾ: ಚುನಾವಣೋತ್ತರ ಹಿಂಸಾಚಾರದಲ್ಲಿ ಮೃತಪಟ್ಟರೆನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರೊಬ್ಬರ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಪ್ರಕರಣವು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಬಿಜೆಪಿ ಮತ್ತು ಟಿಎಂಸಿ ನಡುವೆ ಗಂಭೀರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಕನಿಷ್ಠ ಐದು ಜನರನ್ನು ಬಂಧಿಸಿದ್ದಾರೆ. ಸ್ಥಳೀಯ ವಿಡಿಯೋ ತುಣುಕುಗಳ ಆಧಾರದ ಮೇಲೆ ಈ ಬಂಧನಗಳನ್ನು ಮಾಡಲಾಗಿದ್ದು, ಬಂಧಿತರನ್ನು ಬರುಯಿಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಭಿಷೇಕ ಬ್ಯಾನರ್ಜಿ ಅವರಾಗಲಿ ಅಥವಾ ಟಿಎಂಸಿ ಪಕ್ಷವಾಗಲಿ ಭಾನುವಾರದವರೆಗೆ ಯಾವುದೇ ಅಧಿಕೃತ ದೂರು ದಾಖಲಿಸದ ಕಾರಣ, ಪೊಲೀಸರು ಸ್ವಯಂಪ್ರೇರಿತವಾಗಿ (ಸುಯೋ ಮೋಟೋ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರ ಪಟ್ಟಣಕ್ಕೆ ಭೇಟಿ ನೀಡಿದ್ದಾಗ ಶನಿವಾರ ಈ ಘಟನೆ ಸಂಭವಿಸಿದೆ. ಉದ್ರಿಕ್ತ ಜನರ ಗುಂಪು ಅಭಿಷೇಕ ಅವರತ್ತ ಕಲ್ಲು, ಮೊಟ್ಟೆಗಳನ್ನು ಎಸೆದು, ತೀವ್ರ ನಿಂದನೆ ಮಾಡಿದೆ. ಪರಿಸ್ಥಿತಿ ಕೈಮೀರಿದಾಗ ಭದ್ರತಾ ಸಿಬ್ಬಂದಿ ಅಭಿಷೇಕ ಅವರಿಗೆ ಕ್ರಿಕೆಟ್ ಹೆಲ್ಮೆಟ್ ಧರಿಸಿ ಅಲ್ಲಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಇದೇ ವೇಳೆ ಕೆಲವರು “ಕಳ್ಳ, ಕಳ್ಳ” ಎಂದು ಘೋಷಣೆ ಕೂಗುತ್ತಾ, ಅಭಿಷೇಕ ಅವರ ಮೇಲೆ ದೈಹಿಕ ಹಲ್ಲೆಗೆ ಯತ್ನಿಸಿದ್ದಾರೆ.
ದಾಳಿಯ ನಂತರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ, ನಾಯಕರಾದ ಫಿರ್ಹಾದ್ ಹಕೀಂ ಮತ್ತು ಡೆರೆಕ್ ಒಬ್ರಿಯನ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. “ಆಡಳಿತಗಾರರೇ ಕೊಲೆಗಡುಕರಾಗಿದ್ದಾರೆ- ನಿಮಗೆ ನಾಚಿಕೆಯಾಗಬೇಕು ಬಿಜೆಪಿ!” ಎಂದು ಮಮತಾ ಬ್ಯಾನರ್ಜಿ ಎಕ್ಸ್ (ಟ್ವಿಟರ್) ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಟಿಎಂಸಿ ಆರೋಪ
ಇದು ಬಿಜೆಪಿಯ ಪ್ರಾಯೋಜಿತ ಮತ್ತು ವ್ಯವಸ್ಥಿತ ಗುಂಪು ದಾಳಿ ಎಂದು ಟಿಎಂಸಿ ಗಂಭೀರವಾಗಿ ಆರೋಪಿಸಿದೆ. ದಾಳಿಯ ಸ್ಥಳದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷ ಅಭಿಜಿತ ಬಿಸ್ವಾಸ್ ಉಪಸ್ಥಿತರಿದ್ದು, ಜನಸಮೂಹವನ್ನು ಪ್ರಚೋದಿಸುತ್ತಿದ್ದರು ಎಂದು ಟಿಂಎಸಿ ಫೋಟೋ ಒಂದನ್ನು ಬಿಡುಗಡೆ ಮಾಡಿ ಆರೋಪಿಸಿದೆ. ಇದು ಸಾರ್ವಜನಿಕರ ಸ್ವಾಭಾವಿಕ ಆಕ್ರೋಶವಲ್ಲ, ಬದಲಿಗೆ ಜನರನ್ನು ಸಂಘಟಿಸಿ ಮಾಡಲಾದ ಸಂಚು ಎಂದು ಟಿಎಂಸಿ ಆರೋಪಿಸಿದೆ.
ಇದಾದ ಬಳಿಕ ಮತ್ತೊಂದು ಫೋಟೋ ಬಿಡುಗಡೆ ಮಾಡಿರುವ ಟಿಎಂಸಿ, ಆಕಾಶ್ ಗಯಾನ್ ಎಂಬಾತನನ್ನು ದಾಳಿಕೋರ ಎಂದು ಗುರುತಿಸಿದೆ. ಈತ ಬಿಜೆಪಿ ಕಾರ್ಯಕರ್ತನಾಗಿದ್ದು, ಆತನ ಸಾಮಾಜಿಕ ಜಾಲತಾಣದ ಚಟುವಟಿಕೆಗಳೇ ಇದಕ್ಕೆ ಸಾಕ್ಷಿ ಎಂದು ಟಿಎಂಸಿ ಹೇಳಿಕೊಂಡಿದೆ.
ಒಳಜಗಳದ ಫಲ ಎಂದು ಬಿಜೆಪಿ ತಿರುಗೇಟು
ಟಿಎಂಸಿ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಪ್ರಕರಣದಲ್ಲಿ ಬಂಧಿತರಾಗಿರುವ ಆರು (ಪೊಲೀಸರ ಪ್ರಕಾರ ಐದು) ಜನರು ಇತ್ತೀಚಿನವರೆಗೂ ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದರು ಎಂದು ಪ್ರತಿಪಾದಿಸಿದ್ದಾರೆ. ಈ ದಾಳಿಯು ರಾಜಕೀಯ ವಿರೋಧಿಗಳಿಂದ ನಡೆದಿದ್ದಲ್ಲ, ಬದಲಿಗೆ ಟಿಎಂಸಿ ಪಕ್ಷದೊಳಗಿನ ಆಂತರಿಕ ಬಣ ರಾಜಕೀಯ ಮತ್ತು ಒಳಜಗಳದ ಫಲವಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಮಾತನಾಡಿ, “ಈ ಘಟನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಇಂತಹ ಸೌಹಾರ್ದಯುತ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಆದರೆ ಇದು ಕಳೆದ ಹಲವು ವರ್ಷಗಳಿಂದ ಸ್ಥಳೀಯರು ಅನುಭವಿಸಿದ ಕಿರುಕುಳ ಹಾಗೂ ದೌರ್ಜನ್ಯದ ವಿರುದ್ಧ ಸ್ಫೋಟಗೊಂಡ ಸಾರ್ವಜನಿಕ ಆಕ್ರೋಶದ ಫಲವಾಗಿರಬಹುದು” ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ