ಉತ್ತರ ಕನ್ನಡ : ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

ಕಾರವಾರ : ಉತ್ತರ ಕನ್ನ ಜಿಲ್ಲೆಯ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಬೋಟ್‌ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದೆ. ಮುಳುಗಡೆಯಾದ ಬೋಟ್ ‘ಶ್ರೀ ನವರತ್ನ’ ಅಂಕೋಲಾ ತಾಲೂನಿ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿತ್ತು. ಇದು ಹಿಂತಿರುಗಿ ಬರುವಾಗ ಹೊನ್ನಾವರ ಹಾಗೂ ಕುಮಟಾ ವ್ಯಾಪ್ತಿಯ ಆಳ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಮೀಪದಲ್ಲೇ ಇದ್ದ ಇತರ ಮೀನುಗಾರಿಕಾ ಬೋಟ್‌ನ ಸಿಬ್ಬಂದಿ ಧಾವಿಸಿ ಬಂದು ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಏಳು  ಮೀನುಗಾರರನ್ನು ಕಾಪಾಡಿ ತಮ್ಮ ಬೋಟ್‌ಗೆ ಒಯ್ದಿದ್ದಾರೆ ಎಂದು ಹೇಳಲಾಗಿದೆ.
ಬೋಟ್‌ನಲ್ಲಿದ್ದ ಮೀನುಗಾರರಾದ ವೆಂಕಟೇಶ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ ಖಾರ್ವಿ, ವಿಕಾಸ ಖಾರ್ವಿ, ವಿಶ್ಲೇಷ ಖಾರ್ವಿ, ರಜತ ಬಾಣಾವಳಿಕರ್‌ ಹಾಗೂ ಲತೇಶ್ ಖಾರ್ವಿ ಎಂಬವರನ್ನು ರಕ್ಷಿಸಲಾಗಿದೆ.
ಬೋಟ್ ಸಮುದ್ರದ ಪಾಲಾಗಿದ್ದರಿಂದ ಬೋಟ್‌ನಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು, ಉಪಕರಣಗಳು ಹಾಗೂ ಇಂಜಿನ್ ಸೇರಿದಂತೆ ಭಾರಿ ಆರ್ಥಿಕ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.  ಮುಳುಗಡೆಯಾದ ಈ ಬೋಟ್ ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ  ಮಂಜುನಾಥ  ಖಾರ್ವಿ ಎಂಬವರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್‌ನ ಹೊರಭಾಗಕ್ಕೆ ಹಾನಿಯಾದ ಪರಿಣಾಮ ನೀರು ಬೋಟ್‌ನೊಳಗೆ ನುಗ್ಗಿ ಮುಳುಗಡೆಯಾಗಿದೆ ಎನ್ನಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement