“ಎರಡು ದಿನ ಕಾಯಿರಿ…” : ದೆಹಲಿಗೆ ತೆರಳುವ ಮುನ್ನ ಹೊಸ ಪಕ್ಷ ಸ್ಥಾಪನೆ ವದಂತಿಗಳಿಗೆ ಉತ್ತರಿಸಿದ ಅಣ್ಣಾಮಲೈ

ಚೆನ್ನೈ: ಬಿಜೆಪಿಗೆ ರಾಜೀನಾಮೆ ನೀಡಿ ತಾವೇ ಸ್ವತಃ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೆ. ಅಣ್ಣಾಮಲೈ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ, “ದಯವಿಟ್ಟು ಸ್ವಲ್ಪ ಕಾಯಿರಿ. ಇನ್ನು ಎರಡು ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು ಮಾತನಾಡಲಿದ್ದೇವೆ. ಆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ,” ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ಸದ್ಯ ರಾಜಕೀಯ ವಲಯದಲ್ಲಿ ಅಣ್ಣಾಮಲೈ ಅವರು ಬಿಜೆಪಿಗೆ ಗುಡ್‌ಬೈ ಹೇಳಿ ಸ್ವಂತ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ತಮ್ಮ ಮುಂದಿನ ಭವಿಷ್ಯದ ಕುರಿತು ಚರ್ಚಿಸಲು ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಭೇಟಿಗೆ ಸಮಯಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಇದಲ್ಲದೆ, ತಮ್ಮ ದೆಹಲಿ ಪ್ರವಾಸದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಅವರು ಭೇಟಿಯಾಗಲಿದ್ದಾರೆ ಎಂದು ಕೆಲವು ವರದಿಗಳು ಸೂಚಿಸಿವೆ.

ಜೂನ್ 4 ರಂದು ‘ಅಣ್ಣಾಮಲೈ 2.0’?
ಮೂಲಗಳ ಪ್ರಕಾರ, ಜೂನ್ 4 ರಂದು ಬರಲಿರುವ ತಮ್ಮ ಜನ್ಮದಿನದಂದೇ ಅಣ್ಣಾಮಲೈ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮಧುರೈ ಮತ್ತು ಕೊಯಮತ್ತೂರು ನಗರಗಳಲ್ಲಿ ಅಣ್ಣಾಮಲೈ ಅವರನ್ನು ‘2.0 ಅವತಾರ’ದಲ್ಲಿ ಬಿಂಬಿಸುವ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದು, ಅವರು ಶೀಘ್ರದಲ್ಲೇ ಬಿಜೆಪಿಯಿಂದ ಹೊರಬರಲಿದ್ದಾರೆ ಎಂಬ ಅನುಮಾನಕ್ಕೆ ಮತ್ತಷ್ಟು ಗ್ರಾಸ ಒದಗಿಸಿದೆ.
ಬಿಜೆಪಿ ಮತ್ತು ಅಣ್ಣಾಮಲೈ ನಡುವಿನ ಅಸಮಾಧಾನಕ್ಕೆ ಕಾರಣಗಳೇನು?
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಇತ್ತೀಚೆಗೆ ಕೇಂದ್ರ ಸರ್ಕಾರದ ‘ತ್ರಿಭಾಷಾ ನೀತಿ’ಯನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಈ ನೀತಿಯನ್ನು ಹಿಂಪಡೆಯುವಂತೆ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಮನವಿ ಮಾಡಿ ಅವರು ಎಕ್ಸ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್, ಅವರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಿತ್ತು.
ನೆನಪಿಸಿಕೊಳ್ಳಬೇಕಾದ ಸಂಗತಿಯೆಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಸ್ಟಾರ್ ಪ್ರಚಾರಕರಾಗಿ ಅಣ್ಣಾಮಲೈ ಗುರುತಿಸಿಕೊಂಡಿದ್ದರು. ಹಾಗೂ ಎಐಎಡಿಎಂಕೆ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದವು. ಆದರೆ, ಅವರ ಭರ್ಜರಿ ಪ್ರಚಾರದ ಹೊರಾಗಿಯೂ ಪಕ್ಷವು ರಾಜ್ಯದಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆದರೂ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ.11.24ರಷ್ಟಾಗಿತ್ತು. ಇದು ಕಳೆದ ಲೋಕಸಭೆ ಚುನಾವಣೆಗಿಂತ ಶೇ.7.58ರಷ್ಟು ಹೆಚ್ಚಾಗಿತ್ತು.ಅಣ್ಣಾಮಲೈ ಅವರ ಕಠಿಣ ನಿಲುವಿನಿಂದಾಗಿಯೇ ಬಿಜೆಪಿ ಮತ್ತು ಎಐಎಡಿಎಂಕೆ (AIADMK) ಮೈತ್ರಿ ಮುರಿದುಬಿದ್ದಿತ್ತು ಎಂದು ಎಐಎಡಿಎಂಕೆ ಆರೋಪಿಸಿತ್ತು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಆದರೆ, 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಪಕ್ಷವು ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಮರಳಿತು. ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂಬ ಷರತ್ತನ್ನು ಮುಂದಿಟ್ಟೇ ಎಐಎಡಿಎಂಕೆ ಪಕ್ಷ ಮೈತ್ರಿಗೆ ಒಪ್ಪಿಕೊಂಡಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು.
ಈ ಬೆಳವಣಿಗೆಯಿಂದ ಬೇಸತ್ತಿದ್ದ ಅಣ್ಣಾಮಲೈ, ಇತ್ತೀಚೆಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸದೆ ಹಾಗೂ ಸಕ್ರಿಯ ಪ್ರಚಾರದಲ್ಲಿ ಭಾಗಿಯಾಗದೆ ದೂರ ಉಳಿದಿದ್ದರು. ಅಂತಿಮವಾಗಿ ಈ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವು ಹೀನಾಯ ಸೋಲನ್ನು ಅನುಭವಿಸಿತು. ಹಾಗೂ 2021ರ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ 2026ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧ್ಯವಾಯಿತು. ಎಐಎಡಿಎಂಕೆ ಪಕ್ಷದ ಸಾಧನೆಯೂ 2021ಕ್ಕಿಂತ ಕಳಪೆಯಾಗಿತ್ತು.
ಈ ಎಲ್ಲಾ ನಾಟಕೀಯ ಬೆಳವಣಿಗೆಗಳ ಬೆನ್ನಲ್ಲೇ, ಅಣ್ಣಾಮಲೈ ಅವರು ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಕಟ್ಟಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಈಗ ಅವರು ಹೊಸ ಪಕ್ಷ ಕಟ್ಟುತ್ತಾರೋ ಅಥವಾ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement