ಐಪಿಎಲ್ 2026 ಫೈನಲ್ : ಬೌಲರ್‌ಗಳ ಕರಾಮತ್ತು, ಕೊಹ್ಲಿ ಅಬ್ಬರ; ಸತತ 2ನೇ ಬಾರಿ ಐಪಿಎಲ್ ಚಾಂಪಿಯನ್‌ ಆದ ಆರ್‌ಸಿಬಿ

ಅಹಮದಾಬಾದ್: 18 ವರ್ಷಗಳ ಕಾಯುವಿಕೆಗೆ ಹೋದ ವರ್ಷವಷ್ಟೇ ತೆರೆ ಎಳೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಕೇವಲ 12 ತಿಂಗಳಲ್ಲಿ ತನ್ನ ಎರಡನೇ ಐಪಿಎಲ್ ಮುಕುಟವನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಐತಿಹಾಸಿಕ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.
ತಾಂತ್ರಿಕವಾಗಿ ಇದು ಗುಜರಾತ್ ಟೈಟನ್ಸ್ ತಂಡದ ತವರು ಮೈದಾನವಾಗಿದ್ದರೂ, ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ರಜತ ಪಾಟೀದಾರ್ ಪಡೆಯ ನಿರ್ಧಾರವನ್ನು ಬೌಲರ್‌ಗಳು ನೂರಕ್ಕೆ ನೂರರಷ್ಟು ಸಮರ್ಥಿಸಿಕೊಂಡರು. ಅಹಮದಾಬಾದ್‌ನ ಸುಡುವ ಬಿಸಿಲಿಗೆ ಒಣಗಿದ್ದ ಪಿಚ್ ಬ್ಯಾಟಿಂಗ್‌ಗೆ ಅಷ್ಟೇನೂ ಸುಲಭವಾಗಿರಲಿಲ್ಲ. ಈ ಸೀಸನ್‌ನಲ್ಲಿ ತಲಾ 700ಕ್ಕೂ ಹೆಚ್ಚು ರನ್ ಗಳಿಸಿ ಅಬ್ಬರಿಸಿದ್ದ ಗುಜರಾತ್‌ನ ಇಬ್ಬರೂ ಆರಂಭಿಕ ಆಟಗಾರರನ್ನು ಪವರ್‌ಪ್ಲೇ ಒಳಗಾಗಿಯೇ ಆರ್‌ಸಿಬಿ ಬೌಲರ್‌ಗಳು ಪೆವಿಲಿಯನ್‌ಗೆ ಅಟ್ಟಿದರು.

ಬೌನ್ಸರ್ ಬಲೆಗೆ ಬಿದ್ದ ಸಾಯಿ: ಅನುಭವಿ ವೇಗಿ ಭುವನೇಶ್ವರಕುಮಾರ, ಗುಜರಾತ್‌ ಟೈಟನ್ಸ್‌ನ ಅಪಾಯಕಾರಿ ಆಟಗಾರ ಸಾಯಿ ಸುದರ್ಶನ ಆರಂಭಿಕ ಸ್ವಿಂಗ್ ತಡೆಯಲು ಕ್ರೀಸ್‌ನಿಂದ ಮುಂದೆ ಬಂದು ಆಡುವುದನ್ನು ಅರಿತು ತೀಕ್ಷ್ಣವಾದ ಬೌನ್ಸರ್ ಎಸೆದರು. ಈ ಬೌನ್ಸರ್ ಬಲೆಯಲ್ಲಿ ಬಿದ್ದ ಸುದರ್ಶನ್ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಜಲ್‌ವುಡ್ ಕೂಡ ಮಹತ್ವದ ಪಂದ್ಯದಲ್ಲಿ ಎಂದಿನಂತೆ ವಿಕೆಟ್ ಬೇಟೆಯಾಡಿದರು. 3.4 ಓವರ್‌ಗಳಲ್ಲಿ 26 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡು ಗುಜರಾತ್‌ ಟೈಟನ್ಸ್‌ ಆಘಾತಕ್ಕೆ ಒಳಗಾಯಿತು.
ರಸಿಖ್ ಸಲಾಮ್ ಮಾರಕ ದಾಳಿ: ಗುಜರಾತ್‌ನ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿಯುವ ಕೆಲಸ ಮಾಡಿದ್ದು ಆರ್‌ಸಿಬಿಯ 5ನೇ ಬೌಲರ್ ರಸಿಖ್ ಸಲಾಮ್ ದಾರ್. ಜಿಟಿ ಬ್ಯಾಟರ್‌ಗಳು ಇವರನ್ನು ಹಗುರವಾಗಿ ಪರಿಗಣಿಸಿದ್ದಕ್ಕೆ ಭಾರಿ ಬೆಲೆ ತೆತ್ತರು. ರಸಿಖ್ ಕೇವಲ 27 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಭುವನೇಶ್ವರಕುಮಾರ (2/29) ಮತ್ತು ಜೋಶ್ ಹ್ಯಾಜಲ್‌ವುಡ್ (2/37) ತಲಾ ಎರಡು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ (1/23) ಅತ್ಯಂತ ಮಿತವ್ಯಯಿ ಎನಿಸಿಕೊಂಡರು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ವಾಷಿಂಗ್ಟನ್‌ ಸುಂದರ ಏಕಾಂಗಿ ಹೋರಾಟ: ವಾಷಿಂಗ್ಟನ್ ಸುಂದರ ಅವರು 3 ರನ್ ಗಳಿಸಿದ್ದಾಗ ಬದಲಿ ಫೀಲ್ಡರ್ ಜೋರ್ಡಾನ್ ಕಾಕ್ಸ್ ಕ್ಯಾಚ್ ಕೈಬಿಟ್ಟು ಜೀವದಾನ ನೀಡಿದರು. ಇದರ ಲಾಭ ಪಡೆದ ಸುಂದರ್ 37 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅನ್‌ಕ್ಯಾಪ್ಡ್ ಆಲ್‌ರೌಂಡರ್ ಅರ್ಷದ್ ಖಾನ್ ಕೊನೆಯಲ್ಲಿ 6 ಎಸೆತಗಳಲ್ಲಿ 15 ರನ್ ಚಚ್ಚಿದರು. ಅಂತಿಮವಾಗಿ ಗುಜರಾತ್ ಟೈಟನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್‌ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.
ಕೊಹ್ಲಿ ಭರ್ಜರಿ ಬ್ಯಾಟಿಂಗ್‌ : ಆರ್‌ಸಿಬಿ ಚೇಸಿಂಗ್
156 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಫಿಲ್ ಸಾಲ್ಟ್ ಅಲಭ್ಯತೆಯಲ್ಲಿ ‘ಪಿಂಚ್ ಹಿಟ್ಟರ್’ ಪಾತ್ರ ವಹಿಸಿದ ವೆಂಕಟೇಶ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಕಾಲಿನ ಗಾಯದ ಸಮಸ್ಯೆಯ ನಡುವೆಯೂ ವೆಂಕಟೇಶ ಅಯ್ಯರ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ವಿರಾಟ್ ಕೊಹ್ಲಿ ವೇಗಿಗಳ ವಿರುದ್ಧ ಕ್ರಾಸ್-ಬ್ಯಾಟ್ ಶಾಟ್‌ಗಳನ್ನು ಆಡುತ್ತಾ ಮನರಂಜಿಸಿದರು.

ರಾಬಾಡಾ ಓವರ್‌ನಲ್ಲಿ 19 ರನ್: ಐಪಿಎಲ್‌ನ ಈ ಸೀಸನ್‌ನ ಲೀಡಿಂಗ್ ವಿಕೆಟ್ ಟೇಕರ್, ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕಗಿಸೊ ರಾಬಾಡಾ ಎಸೆದ ಓವರ್‌ನಲ್ಲಿ ಕೊಹ್ಲಿ ಮತ್ತು ಅಯ್ಯರ್ ಜೋಡಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ ಭರ್ಜರಿ 19 ರನ್ ಚಚ್ಚಿ ಪಂದ್ಯವನ್ನು ಸಂಪೂರ್ಣವಾಗಿ ಆರ್‌ಸಿಬಿ ಕಡೆಗೆ ತಿರುಗಿಸಿದರು. ಕೇವಲ 5ನೇ ಓವರ್‌ನಲ್ಲೇ ಆರ್‌ಸಿಬಿ 60ರ ಗಡಿ ದಾಟಿತು. ಪವರ್‌ಪ್ಲೇ ಅಂತ್ಯಕ್ಕೆ ವೆಂಕಟೇಶ್ ಅಯ್ಯರ್ ಅವರ ಆಕರ್ಷಕ ಕ್ಯಾಮಿಯೋ ಇನಿಂಗ್ಸ್ ಹಾಗೂ ದೇವದತ್ ಪಡಿಕ್ಕಲ್ ಅವರ ವಿಕೆಟ್ ಕಳೆದುಕೊಂಡರೂ, ಆರ್‌ಸಿಬಿ ಬೋರ್ಡ್‌ನಲ್ಲಿ 70 ರನ್ ದಾಖಲಾಗಿತ್ತು.
ರಶೀದ್ ಖಾನ್ ನೀಡಿದ ಸಣ್ಣ ಆಘಾತ
ಪಂದ್ಯದ 9ನೇ ಓವರ್‌ನಲ್ಲಿ ಗುಜರಾತ್‌ನ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಆರ್‌ಸಿಬಿಗೆ ಸಣ್ಣ ಆಘಾತ ನೀಡಿದರು. ಸ್ಪಿನ್ ದಾಳಿಯನ್ನು ಧೂಳೀಪಟ ಮಾಡುತ್ತಿದ್ದ ರಜತ್ ಪಾಟೀದಾರ್ ಅವರನ್ನು ರಶೀದ್ ತಮ್ಮ ಸ್ಪಿನ್ ಜಾಲದಲ್ಲಿ ಸಿಲುಕಿಸಿದರು. ಪಾಟೀದಾರ್ ಸಿಕ್ಸರ್ ಸಿಡಿಸಲು ಹೋಗಿ ಡೀಪ್ ಮಿಡ್‌ವಿಕೆಟ್‌ನಲ್ಲಿ ರಾಬಾಡಾಗೆ ಕ್ಯಾಚ್ ನೀಡಿದರು. ಇದೇ ಓವರ್‌ನಲ್ಲಿ ಇಡೀ ಸೀಸನ್‌ನಲ್ಲಿ ಆರ್‌ಸಿಬಿಯ ಬಿಕ್ಕಟ್ಟಿನ ರಕ್ಷಕನಾಗಿದ್ದ ಕೃನಾಲ್ ಪಾಂಡ್ಯ (1 ರನ್) ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಕೊನೆಯವರೆಗೂ ನಿಂತು ಪಂದ್ಯ ಮುಗಿಸಿದ ‘ ಕೊಹ್ಲಿ’
ಒಂದೇ ಓವರ್‌ನಲ್ಲಿ 2 ವಿಕೆಟ್ ಬಿದ್ದರೂ ವಿರಾಟ್ ಕೊಹ್ಲಿ ಧೃತಿಗೆಡಲಿಲ್ಲ. ಟಿಮ್ ಡೇವಿಡ್ ಜೊತೆಗೂಡಿದ ಕೊಹ್ಲಿ ಗುಜರಾತ್ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ.
ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ ತಮ್ಮ ಬಿರುಸಿನ ಅರ್ಧಶತಕ ಪೂರೈಸಿದರು. ಇದು 2016ರ ಫೈನಲ್ ಬಳಿಕ ಪ್ಲೇ-ಆಫ್ಸ್ ಪಂದ್ಯವೊಂದರಲ್ಲಿ ಕೊಹ್ಲಿ ಬಾರಿಸಿದ ಮೊದಲ ಅರ್ಧಶತಕವಾಗಿದೆ ಹಾಗೂ ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಫಿಫ್ಟಿ ಕೂಡ ಹೌದು.
ಜಯದ ಸಮೀಪವಿದ್ದಾಗ ಟಿಮ್ ಡೇವಿಡ್ (ಆರ್‌ಸಿಬಿಯ 5ನೇ ವಿಕೆಟ್) ಔಟಾದರೂ, ಅಷ್ಟರಲ್ಲೇ ಪಂದ್ಯ ಆರ್‌ಸಿಬಿ ವಶವಾಗಿತ್ತು. ಕೊನೆಯಲ್ಲಿ ತೀವ್ರವಾದ ಸ್ನಾಯು ಸೆಳೆತದ (Cramps) ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದು ತಂಡವನ್ನು ಜಯದ ದಡ ಸೇರಿಸಿದರು.
ಆಡುವ ಬಳಗದಲ್ಲಿದ್ದ ಆಟಗಾರರು:
ಆರ್‌ಸಿಬಿ (ಬದಲಾವಣೆ ಇಲ್ಲ): ವಿರಾಟ ಕೊಹ್ಲಿ, ವೆಂಕಟೇಶ ಅಯ್ಯರ್, ದೇವದತ್ತ ಪಡಿಕ್ಕಲ್, ರಜತ ಪಾಟೀದಾರ್ (ನಾಯಕ), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಭುವನೇಶ್ವರಕುಮಾರ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್.
ಗುಜರಾತ್ ಟೈಟನ್ಸ್: ಆರ್. ಸಾಯಿ ಕಿಶೋರ್ ಬದಲಿಗೆ ಅನ್‌ಕ್ಯಾಪ್ಡ್ ವೇಗಿ ಅರ್ಷದ್ ಖಾನ್‌ಗೆ ಅವಕಾಶ ನೀಡಲಾಗಿತ್ತು.
ಗ್ರೂಪ್ ಹಂತದಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದ ಆರ್‌ಸಿಬಿ, ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ತಂಡವನ್ನು 92 ರನ್‌ಗಳಿಂದ ಮಣಿಸಿತ್ತು. ಈಗ ಫೈನಲ್‌ನಲ್ಲೂ ಅದೇ ಗುಜರಾತ್ ತಂಡವನ್ನು ಮಣಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement