
ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಉಂಟಾಗಿದ್ದ ಬಿರುಕು ಈಗ ಮರಳಿ ಸರಿಪಡಿಸಲಾಗದ ಹಂತಕ್ಕೆ ತಲುಪಿದೆ. ಟಿಎಂಸಿಯ ಸುಪ್ರಿಮೋ ಮಮತಾ ಬ್ಯಾನರ್ಜಿಗೆ ಮತ್ತೊಂದು ದೊಡ್ಡ ಆಘಾತದಲ್ಲಿ ಬಂಗಾಳ ವಿಧಾನಸಭೆಯ ಸ್ಪೀಕರ್ ರಥೀಂದ್ರ ಬೋಸ್ ಅವರು ಟಿಎಂಸಿಯ ಉಚ್ಚಾಟಿತ ಬಂಡಾಯ ಶಾಸಕ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕ ಎಂದು ಅಂಗೀಕರಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷಕ್ಕೆ ಮೀಸಲಾದ ಕೊಠಡಿಯ ಕೀಲಿಗಳನ್ನು ಸಹ ಅವರಿಗೆ ಹಸ್ತಾಂತರಿಸಲಾಗಿದೆ.
ರಾಜ್ಯ ಚುನಾವಣೆಯಲ್ಲಿನ ಸೋಲಿನ ಕೇವಲ ಒಂದು ತಿಂಗಳೊಳಗೆ ತೃಣಮೂಲ ಕಾಂಗ್ರೆಸ್ ಇಸ್ಪೀಟ್ ಎಲೆಗಳ ಮನೆಯಂತೆ ಕುಸಿಯುತ್ತಿರುವುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ಸ್ಪೀಕರ್ ನಿರ್ಧಾರ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ, ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದ ಪ್ರಮುಖ ನಾಯಕರಾದ ಫಿರ್ಹಾದ್ ಹಕೀಮ್ ಅವರು ಕೋಲ್ಕತ್ತಾ ಮಹಾನಗರ ಪಾಲಿಕೆಯ (KMC) ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದಕ್ಕೂ ಮುನ್ನ, ಟಿಎಂಸಿ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿ ತನ್ನೆಲ್ಲಾ ಸಮಿತಿಗಳು ಮತ್ತು ಮುಂಚೂಣಿ ಸಂಘಟನೆಗಳನ್ನು “ತಕ್ಷಣದಿಂದ ಜಾರಿಗೆ ಬರುವಂತೆ” ರದ್ದುಗೊಳಿಸಿತ್ತು.

ಮಮತಾ ಬ್ಯಾನರ್ಜಿಗೆ ‘ಮುಖ್ಯ ಸಲಹೆಗಾರ’ ಸ್ಥಾನ, ಅಭಿಷೇಕಗೆ ನೋ ಎಂಟ್ರಿ!
ರಾಜ್ಯ ರಾಜಕಾರಣದಲ್ಲಿ ಹೊಸ ಪರ್ವ ಆರಂಭವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ ರಿತಬ್ರತ ಬ್ಯಾನರ್ಜಿ (ಇವರನ್ನು ೆರಡು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು), ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಹೊಸ ಪಾತ್ರವೊಂದನ್ನು ನೀಡಿದ್ದಾರೆ. “ನಾವು ರಚಿಸಿರುವ ಈ ವಿರೋಧ ಪಕ್ಷದ ರಂಗಕ್ಕೆ ಮುಖ್ಯ ಸಲಹೆಗಾರರಾಗುವಂತೆ ಮಮತಾ ಬ್ಯಾನರ್ಜಿ ಅವರಲ್ಲಿ ವಿನಂತಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಇದು ಈ ಹಿಂದೆ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ಸಿಡಿದು ಬಂದಾಗ, ಬಂಡಾಯ ನಾಯಕರು ಶರದ್ ಪವಾರ್ ಅವರ ಮೇಲಿನ ನಿಷ್ಠೆಯನ್ನು ಮೌಖಿಕವಾಗಿ ಘೋಷಿಸಿದ್ದ ಘಟನೆಯನ್ನು ನೆನಪಿಸುವಂತಿದೆ.
ಇದೇ ವೇಳೆ, ಮಮತಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಅಭೀಷೇಕ ಬ್ಯಾನರ್ಜಿ ಅವರಿಗೆ ರಿತಬ್ರತ ಬ್ಯಾನರ್ಜಿ ನೋ ಎಂದಿದ್ದಾರೆ. “ಪಶ್ಚಿಮ ಬಂಗಾಳದ 18ನೇ ವಿಧಾನಸಭೆಯ ರಚನೆಗೂ ಅಭಿಷೇಕ ಬ್ಯಾನರ್ಜಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ವಿಧಾನಸಭೆಗೆ ಆಗಮಿಸಿದ್ದ ಅವರು, ತಮಗೆ ಪಕ್ಷದ ಒಟ್ಟು 80 ಶಾಸಕರ ಪೈಕಿ 59 ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದರು. ಅವರು ಸಲ್ಲಿಸಿದ ಪತ್ರದಲ್ಲಿ ತಮ್ಮದೇ “ನೈಜ” ತೃಣಮೂಲ ಕಾಂಗ್ರೆಸ್ ಎಂದು ಹೇಳಿಕೊಳ್ಳಲಾಗಿದ್ದು, ಕುತೂಹಲಕಾರಿ ಸಂಗತಿಯೆಂದರೆ ಮಮತಾ ಬ್ಯಾನರ್ಜಿ ಅವರೇ ಈ ಬಣದ ನಾಯಕಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರ ಮಾದರಿಯ ರಾಜಕೀಯ ಬಿಕ್ಕಟ್ಟು
ಬಂಗಾಳದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಒಡೆದು ನಂತರ ಉಂಟಾಗಿದ್ದ ಬೃಹತ್ ರಾಜಕೀಯ ಹೈಡ್ರಾಮಾವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತಿವೆ.
ಆದರೆ, ಈ ಇಡೀ ಒಡಕಿನ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. “ಇಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಟಿಎಂಸಿಯ ಮಾನವ್ ಜೈಸ್ವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಬಿಕ್ಕಟ್ಟಿಗೆ ಅಸಲಿ ಕಾರಣವೇನು?
ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಆಯ್ಕೆಯ ವಿಚಾರದಲ್ಲೇ ಪಕ್ಷದಲ್ಲಿ ಈ ಭಿನ್ನಮತ ಸ್ಫೋಟಗೊಂಡಿದೆ. ಮಮತಾ ಬ್ಯಾನರ್ಜಿ ಅವರು ಪಕ್ಷದ ಹಿರಿಯ ನಾಯಕ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಹೆಸರಿಸಿದ್ದರು.
ಆದರೆ, ಹಿಂದೆ ಸಿಪಿಎಂನಲ್ಲಿದ್ದು ನಂತರ ಟಿಎಂಸಿ ಸೇರಿದ್ದ ರಿತಬ್ರತ ಬ್ಯಾನರ್ಜಿ ಮತ್ತು ಅವರ ಆಪ್ತ ಸಂದೀಪನ್ ಸಹಾ, “ಚಟ್ಟೋಪಾಧ್ಯಾಯ ಅವರ ಹೆಸರನ್ನು ಬೆಂಬಲಿಸಿ ಸಲ್ಲಿಸಲಾದ ಪತ್ರದಲ್ಲಿದ್ದ ಶಾಸಕರ ಸಹಿಗಳು ನಕಲಿ (ಫೋರ್ಜರಿ)” ಎಂದು ಗಂಭೀರ ಆರೋಪ ಮಾಡಿದ್ದರು. ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಸಹಿ ನಕಲು ಪ್ರಕರಣದ ತನಿಖೆಯನ್ನು ಸದ್ಯ ರಾಜ್ಯದ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸುತ್ತಿದೆ.
ಚುನಾವಣಾ ಸೋಲಿನ ದಿನದಿಂದಲೇ ಟಿಎಂಸಿಯಲ್ಲಿ ಬಂಡಾಯದ ಮುನ್ಸೂಚನೆಗಳು ಕಾಣಿಸಿಕೊಂಡಿದ್ದವು. ಭ್ರಷ್ಟಾಚಾರ ಮತ್ತು ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ-ಕೊಲೆ ಪ್ರಕರಣವನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಖಂಡಿಸಿ ಪಕ್ಷದ ನಾಯಕರು ಒಬ್ಬರಾದ ಮೇಲೊಬ್ಬರಂತೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದರು. ಈ ಬಂಡಾಯ ನಾಯಕರಲ್ಲಿ ಹಲವರು ಕಳೆದ ವಾರ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಕರೆದಿದ್ದ ಪ್ರಮುಖ ಸಭೆಯಲ್ಲೂ ಭಾಗವಹಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.


ನಿಮ್ಮ ಕಾಮೆಂಟ್ ಬರೆಯಿರಿ