
ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗಿನ ಆಂತರಿಕ ಬಂಡಾಯ ಬುಧವಾರ ನಿರ್ಣಾಯಕ ತಿರುವು ಪಡೆದುಕೊಂಡಿದೆ. ಟಿಎಂಸಿಯಿಂದ ಉಚ್ಚಾಟಿತರಾಗಿರುವ ಶಾಸಕ ರಿತಬ್ರತ ಬ್ಯಾನರ್ಜಿ ಅವರಿಗೆ ಪಕ್ಷದ 58 ಭಿನ್ನಮತೀಯ ಶಾಸಕರು ಬೆಂಬಲ ಘೋಷಿಸಿದ್ದು, ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಕುರಿತ ತಮ್ಮ ನಿರ್ಧಾರವನ್ನು ಪತ್ರಕ್ಕೆ ಸಹಿ ಹಾಕುವ ಮೂಲಕ ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ರಥೀಂದ್ರ ಬೋಸ್ ಅವರಿಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಅಧಿಕಾರ ರಚನೆಯನ್ನೇ ಮರುರೂಪಿಸಬಹುದಾದ ಈ ನಾಟಕೀಯ ಬೆಳವಣಿಗೆಯಲ್ಲಿ, ಮಮತಾ ಬ್ಯಾನರ್ಜಿಯವರಟಿಎಂಸಿಯಿಂದ ಉಚ್ಚಾಟಿತಗೊಂಡ ಬಂಡಾಯ ಶಾಸಕ ರಿತಬ್ರತ ಬ್ಯಾನರ್ಜಿ, ಸಹ ಬಂಡಾಯ ಶಾಸಕ ಸಂದೀಪನ್ ಸಹಾ ಮತ್ತು ಹಲವು ಭಿನ್ನಮತೀಯ ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಿ, 58 ಶಾಸಕರು ಸಹಿ ಮಾಡಿರುವ ಬೆಂಬಲ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿತಬ್ರತ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ, ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಶಿಯುಲಿ ಸಹಾ ಅವರನ್ನು ಉಪನಾಯಕರನ್ನಾಗಿ ಹಾಗೂ ರಘುನಾಥ್‌ಗಂಜ್ ಶಾಸಕ ಅಖ್ರುಜ್ಜಮಾನ್ ಅವರನ್ನು ಮುಖ್ಯ ಸಚೇತಕರನ್ನಾಗಿ (ಚೀಫ್ ವಿಪ್)ಅದರಲ್ಲಿ ಹೆಸರಿಸಲಾಗಿದೆ.
ವಿಧಾನಸಭೆಯಲ್ಲಿ ನಡೆದ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಯಾವುದೇ ಶಾಸಕರು, ಮಂಗಳವಾರ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಕೇಂದ್ರ ಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ ಎಂಬುದು ಗಮನಾರ್ಹ. ಇನ್ನೊಂದೆಡೆ, ಟಿಎಂಸಿ ಸುಪ್ರಿಮೋ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿರುವ ಶೋವಂದೇಬ್ ಚಟ್ಟೋಪಾಧ್ಯಾಯ, ನಯನಾ ಬಂದ್ಯೋಪಾಧ್ಯಾಯ, ಮದನ್ ಮಿತ್ರಾ ಮತ್ತು ಕುನಾಲ್ ಘೋಷ್ ಅವರಂತಹ ಪ್ರಮುಖ ನಾಯಕರು ಬುಧವಾರ ವಿಧಾನಸಭೆಯಲ್ಲಿ ನಡೆದ ಭಿನ್ನಮತೀಯರ ಸಭೆಯಿಂದ ದೂರ ಉಳಿದಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆಯ ಲೆಕ್ಕಾಚಾರ
ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಬಂಡಾಯ ಬಣಕ್ಕೆ ಶಾಸಕಾಂಗ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಶಾಸಕರ ಬೆಂಬಲದ ಅಗತ್ಯವಿದೆ. ವಿಧಾನಸಭೆಯಲ್ಲಿ ಟಿಎಂಸಿ ಒಟ್ಟು 80 ಶಾಸಕರನ್ನು ಹೊಂದಿದ್ದು, ಈ ನಿಯಮದ ಪ್ರಕಾರ ಬಂಡಾಯ ಬಣಕ್ಕೆ 54 ಶಾಸಕರ ಬಲ ಬೇಕಾಗುತ್ತದೆ. ಸದ್ಯ ಬಂಡಾಯ ಬಣ ತಮಗೆ 58 ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸುತ್ತಿರುವುದರಿಂದ, ಅವರು ಕನಿಷ್ಠ ಸಂಖ್ಯೆಯ ಗಡಿಯನ್ನು ಸುಲಭವಾಗಿ ದಾಟಿದಂತಾಗಿದೆ. ಸ್ಪೀಕರ್ ಈ ವಾದವನ್ನು ಪುರಸ್ಕರಿಸಿದರೆ, ಸದನದಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳಲು ಬಂಡಾಯಗಾರರ ಹಕ್ಕು ಬಲಗೊಳ್ಳಲಿದೆ.
ಮಮತಾ ನಾಯಕತ್ವಕ್ಕೆ ಸವಾಲಿಲ್ಲ, ಅಭಿಷೇಕ ವಿರುದ್ಧ ಅಸಮಾಧಾನ?
ರಾಜಕೀಯವಾಗಿ ಒಂದು ಪ್ರಮುಖ ತಂತ್ರಗಾರಿಕೆಯಾಗಿ, ಸ್ಪೀಕರ್ ಅವರಿಗೆ ಸಲ್ಲಿಸಲಾದ ಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ‘ಪಕ್ಷದ ಅಧ್ಯಕ್ಷೆ’ (ಚೇರ್‌ಪರ್ಸನ್) ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಬಂಡಾಯಗಾರರು ತಮ್ಮ ಹೋರಾಟವು ಟಿಎಂಸಿ ಸುಪ್ರೀಮೋ ವಿರುದ್ಧವಲ್ಲ, ಬದಲಿಗೆ ಪ್ರಸ್ತುತ ಇರುವ ಶಾಸಕಾಂಗ ಪಕ್ಷದ ನಾಯಕತ್ವದ ವಿರುದ್ಧ ಮಾತ್ರ ಎಂಬುದನ್ನು ಬಿಂಬಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಶಾಸಕಾಂಗ ಪಕ್ಷದ ವ್ಯವಹಾರಗಳನ್ನು ನಿರ್ಧರಿಸುವಲ್ಲಿ ಅಭಿಷೇಕ ಬ್ಯಾನರ್ಜಿ ಅವರ ಅಧಿಕಾರ ಅಥವಾ ಮಧ್ಯಪ್ರವೇಶವನ್ನು ತಾವು ಒಪ್ಪುವುದಿಲ್ಲ ಎಂಬುದನ್ನು ಶಾಸಕರು ಸ್ಪಷ್ಟಪಡಿಸಿದ್ದಾರೆ ಎಂದು ಬಂಡಾಯ ಬಣದ ಮೂಲಗಳು ತಿಳಿಸಿವೆ.
“ಇದು ಬೆನ್ನಿಗೆ ಚೂರಿ ಹಾಕುವ ಕೆಲಸ”: ಟಿಎಂಸಿ ಆಕ್ರೋಶ
ಆದರೆ, ಭಿನ್ನಮತೀಯರ ಈ ಕ್ರಮವನ್ನು ಟಿಎಂಸಿ ನಾಯಕತ್ವವು ತೀವ್ರವಾಗಿ ಖಂಡಿಸಿದ್ದು, ಇದೊಂದು “ವಿಶ್ವಾಸದ್ರೋಹದ ಕೆಲಸ” ಎಂದು ತಳ್ಳಿಹಾಕಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಪಕ್ಷದ ನಾಯಕ ಹಾಗೂ ಶಾಸಕ ಕುನಾಲ್ ಘೋಷ್, “ಅವರಿಗೆ (ಬಂಡಾಯ ಶಾಸಕರಿಗೆ) ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಅವರು ಪಕ್ಷದ ಬೆನ್ನಿಗೆ ಇರಿಯುವ ಕೆಲಸ ಮಾಡಿದ್ದಾರೆ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯ ಶಾಸಕರು ಮತ್ತು ಅವರ ಬೆಂಬಲಿಗರನ್ನು “ದ್ರೋಹಿಗಳು” ಎಂದು ಕರೆದ ಅವರು, ಪಕ್ಷವು ಈ ಬಿಕ್ಕಟ್ಟಿನಿಂದ ಹೊರಬರಲಿದ್ದು, ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಒಗ್ಗಟ್ಟಾಗಿ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಕ್ಕಟ್ಟಿನ ಹಿನ್ನೆಲೆ ಏನು?
ಬುಧವಾರದ ಈ ಬೃಹತ್ ಬೆಳವಣಿಗೆಗೆ ಮೇ 6 ರಂದು ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆದ ನೂತನ ಶಾಸಕರ ಸಭೆಯೇ ಮೂಲ ಕಾರಣವಾಗಿದೆ. ಆ ಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಉಪನಾಯಕ ಮತ್ತು ಮುಖ್ಯ ಸಚೇತಕರ ಹೆಸರನ್ನು ಅಂತಿಮಗೊಳಿಸುವ ಅಧಿಕಾರವನ್ನು ಶಾಸಕರು ಪಕ್ಷದ ನಾಯಕತ್ವಕ್ಕೆ ನೀಡಿದ್ದರು ಎನ್ನಲಾಗಿದೆ.
ಅದರಂತೆ, ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ, ನಯನಾ ಬಂದ್ಯೋಪಾಧ್ಯಾಯ ಮತ್ತು ಆಶಿಮಾ ಪಾತ್ರ ಅವರನ್ನು ಉಪನಾಯಕರನ್ನಾಗಿ ಹಾಗೂ ಫಿರ್ಹಾದ್ ಹಕೀಮ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವುದಾಗಿ ಟಿಎಂಸಿ ವಿಧಾನಸಭೆಯ ಸಚಿವಾಲಯಕ್ಕೆ ಪತ್ರ ಮುಖೇನ ತಿಳಿಸಿತ್ತು. ಆದರೆ, ಇಂತಹ ಪದಾಧಿಕಾರಿಗಳನ್ನು ಶಾಸಕಾಂಗ ಪಕ್ಷದ ಅಧಿಕೃತ ಸಭೆಯಲ್ಲೇ ಆಯ್ಕೆ ಮಾಡಬೇಕು ಎಂಬ ಕಾರ್ಯವಿಧಾನದ ನಿಯಮಗಳನ್ನು ಉಲ್ಲೇಖಿಸಿ ಅಸೆಂಬ್ಲಿ ಸಚಿವಾಲಯವು ಆ ಪತ್ರದ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ನಡುವೆ, ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಲಾದ ಪತ್ರಕ್ಕೆ ತಾವು ಹಾಕಿದ್ದ ಸಹಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಭಿನ್ನಮತೀಯ ಶಾಸಕರು ಆರೋಪಿಸಿದಾಗ ವಿವಾದ ಮತ್ತಷ್ಟು ತಾರಕಕ್ಕೇರಿತು. ಆದರೆ ಪಕ್ಷದ ನಾಯಕತ್ವವು ಈ ಆರೋಪವನ್ನು ತಿರಸ್ಕರಿಸಿತಲ್ಲದೆ, ಚುನಾವಣಾ ಹಿನ್ನಡೆಯ ನಂತರ ಬಂಡಾಯಗಾರರು ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಯಾಗಿ ಆರೋಪಿಸಿತು. ಈ ಮುಖಾಮುಖಿ ಸಂಘರ್ಷದ ತೀವ್ರತೆ ಹೆಚ್ಚಾಗಿ, ಈ ವಾರದ ಆರಂಭದಲ್ಲಿ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
ಬದಲಾಗುತ್ತಿರುವ ರಾಜಕೀಯ ಚಿತ್ರಣ
ವಿಪರ್ಯಾಸವೆಂದರೆ, ಪಕ್ಷದಿಂದ ಉಚ್ಚಾಟನೆಗೊಂಡ ರಿತಬ್ರತ ಬ್ಯಾನರ್ಜಿ ಅವರೇ ಈಗ ಈ ಬಂಡಾಯದ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಅವರ ಪಕ್ಷದ ಆರಂಭದ ದಿನಗಳಿಂದಲೂ ಅತ್ಯಂತ ನಿಕಟವರ್ತಿಯಾಗಿದ್ದ ಹಿರಿಯ ನಾಯಕ ಜಾವೇದ್ ಖಾನ್ ಅವರು ಬಂಡಾಯ ಬಣಕ್ಕೆ ಸೇರ್ಪಡೆಯಾಗಿರುವುದು ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆಯಾಗಿದೆ.
ಈ ಬೆಳವಣಿಗೆಗಳು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನದ ಮೇಲಿನ ನಿಯಂತ್ರಣದ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎತ್ತಿವೆ. ನಿಯಮಾವಳಿಗಳ ಪ್ರಕಾರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕು ಮಂಡಿಸಲು ಕೇವಲ 30 ಶಾಸಕರ ಬೆಂಬಲ ಸಾಕಾಗುತ್ತದೆ. ಆದರೆ ಈಗ ನಡೆಯುತ್ತಿರುವ ನಿಜವಾದ ಹೋರಾಟ ಆ ಸ್ಥಾನಕ್ಕಲ್ಲ, ಬದಲಿಗೆ ಸಮಗ್ರ “ಶಾಸಕಾಂಗ ಪಕ್ಷದ” ಅಸ್ತಿತ್ವ ಮತ್ತು ಕಾನೂನುಬದ್ಧತೆಯ ಸಿಂಧುತ್ವ ಯಾರಿಗಿದೆ ಎಂಬುದರ ಮೇಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ