
ನವದೆಹಲಿ: ಪಂಜಾಬ್ನ ಮೊಹಾಲಿಯಲ್ಲಿ ಅತ್ಯಂತ ಭೀಕರ ಮತ್ತು ನಡುಕ ತರಿಸುವ ಘಟನೆಯೊಂದು ನಡೆದಿದೆ. ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಆಕೆಯ ಮಾಜಿ ಪ್ರಿಯಕರ ಎಂದು ನಂಬಲಾದ ಸಹೋದ್ಯೋಗಿ ಕಚೇರಿಯ ಒಳಗಡೆಯೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಯುವತಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿಯೂ ಸಹ ತನ್ನದೇ ಗಂಟಲಿಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಕೊಲೆಯಾದ ಯುವತಿಯನ್ನು ಡಿಂಪಲ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪಟಿಯಾಲ ನಿವಾಸಿಗಳಾಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಈ ಇಡೀ ಕೃತ್ಯವು ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುರುವಾರ ಸಂಜೆ ಸುಮಾರು 7:40 ರ ಸುಮಾರಿಗೆ ಆರೋಪಿ ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಕಚೇರಿಯೊಳಗೆ ಪ್ರವೇಶಿಸಿದ್ದಾನೆ. ಆ ಸಮಯದಲ್ಲಿ ಡಿಂಪಲ್ ತನ್ನ ಡೆಸ್ಕ್ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಳು. ಹಿಂದಿನಿಂದ ಬಂದ ಆರೋಪಿ, ಆಕೆಗೆ ದಿಢೀರನೆ ಚಾಕುವಿನಿಂದ ಇರಿಯಲು ಪ್ರಾರಂಭಿಸಿದ್ದಾನೆ.
ದಾಳಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಯುವತಿ ಓಡಲು ಯತ್ನಿಸಿದ್ದಾಳೆ. ಆದರೆ ಬೆನ್ನಟ್ಟಿದ ಹ್ಯಾರಿ, ಕಚೇರಿಯ ಮುಖ್ಯ ದ್ವಾರದ ಬಳಿ ಆಕೆಯ ಕೂದಲನ್ನು ಹಿಡಿದು ಎಳೆದೊಯ್ದು ಮನಬಂದಂತೆ ಇರಿದಿದ್ದಾನೆ. ಈ ವೇಳೆ ಕಚೇರಿಯಲ್ಲಿದ್ದ ನಾಲ್ಕೈದು ಜನ ಸಹೋದ್ಯೋಗಿಗಳು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದರೂ ಆರೋಪಿಯ ಅಟ್ಟಹಾಸವನ್ನು ತಡೆಯಲು ಸಾಧ್ಯವಾಗಿಲ್ಲ. ಕೊನೆಗೆ ಡಿಂಪಲ್ ಪ್ರಜ್ಞಾಹೀನಳಾಗಿ ಬಿದ್ದರೂ ಬಿಡದ ಹ್ಯಾರಿ, ಆಕೆಯ ದೇಹಕ್ಕೆ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಗಂಟಲು ಸೀಳಿಕೊಂಡು ಆತ್ಮಹತ್ಯೆಗೆ ಯತ್ನ!
ಡಿಂಪಲ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದ ತಕ್ಷಣ, ಹರ್ವಿಂದರ್ ಮಾನ್ ಕಚೇರಿಯ ಒಳಗಿನ ಕೋಣೆಗೆ ತೆರಳಿದ್ದಾನೆ. ಅಲ್ಲಿ ತನ್ನದೇ ಚಾಕುವಿನಿಂದ ತನ್ನ ಗಂಟಲಿಗೆ 30 ಕ್ಕೂ ಹೆಚ್ಚು ಬಾರಿ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಹೋದ್ಯೋಗಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಇಬ್ಬರನ್ನೂ ಹತ್ತಿರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಡಿಂಪಲ್ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡಿರುವ ಆರೋಪಿ ಆರೋಪಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕೊಲೆಗೆ ಕಾರಣವೇನು?
ಪೊಲೀಸ್ ಮೂಲಗಳ ಪ್ರಕಾರ, ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಮತ್ತು ಡಿಂಪಲ್ ಕಳೆದ ಮೂರು ವರ್ಷಗಳಿಂದ ಪ್ಯಾಕರ್ಸ್ ಮತ್ತು ಮೂವರ್ಸ್ ಸೇವೆ ಒದಗಿಸುವ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅವರಿಬ್ಬರ ನಡುವೆ ಸ್ನೇಹ ಉಂಟಾಗಿ, ಅದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. ಆದರೆ, ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬ್ರೇಕಪ್ ಆಗಿತ್ತು.
ಆದರೆ, ಆರೋಪಿ ಮತ್ತೆ ಆಕೆಯೊಂದಿಗೆ ಪ್ರೇಮ ಸಂಬಂಧ ಮುಂದುವರಿಸಲು ಬಯಸಿದ್ದ. ಇದಕ್ಕೆ ಡಿಂಪಲ್ ನಿರಾಕರಿಸಿದ್ದರಿಂದ ಆತ ತೀವ್ರ ಮಾನಸಿಕ ಖಿನ್ನತೆ ಮತ್ತು ಆಕ್ರೋಶಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಘಟನೆ ನಡೆದ ಗುರುವಾರವೂ ಸಹ ಇಬ್ಬರ ನಡುವೆ ಇದೇ ವಿಷಯವಾಗಿ ಕಚೇರಿಯಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಇದಾದ ಬೆನ್ನಲ್ಲೇ ಈ ಭೀಕರ ಹತ್ಯೆ ನಡೆದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವಿಧಿವಿಜ್ಞಾನ (Forensic) ಪ್ರಯೋಗಾಲಯದ ತಂಡವು ಕಚೇರಿಯಿಂದ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಕೊಲೆಯ ಹಿಂದಿನ ನಿಖರವಾದ ಕಾರಣ ಮತ್ತು ಇಬ್ಬರ ನಡುವಿನ ಸಂಬಂಧದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಇಬ್ಬರ ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಇಡೀ ಕೃತ್ಯ ಕಚೇರಿಯ ಒಳಗೇ ನಡೆದಿರುವುದು ಮೊಹಾಲಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ