
ಪಾಟ್ನಾ: ಬಿಹಾರದ ಆಡಳಿತಾರೂಢ ಅಂಗಪಕ್ಷವಾದ ಜನತಾ ದಳ (ಯುನೈಟೆಡ್) ಪಕ್ಷವು 2026ರ ಬಿಹಾರ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಹಾಗೂ ಒಂದು ಸ್ಥಾನದ ಉಪಚುನಾವಣೆಗೆ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಜೆಡಿಯು ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಉಮೇಶ ಸಿಂಗ್ ಕುಶ್ವಾಹಾ ಅವರ ಸಹಿ ಇರುವ ಅಧಿಕೃತ ಅಧಿಸೂಚನೆಯ ಮೂಲಕ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಬಿಹಾರ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗಾಗಿ ಜೆಡಿಯು ಪಕ್ಷವು ರಾಜ್ಯದ ವಿವಿಧ ವಲಯಗಳನ್ನು ಪ್ರತಿನಿಧಿಸುವ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಟ್ನಾ ಜಿಲ್ಲೆಯಿಂದ ಮಾಜಿ ಮುಖ್ಯಮಂತ್ರಿ ನಿಶಾಂತಕುಮಾರ ಅವರಿಗೆ ಟಿಕೆಟ್ ನೀಡಲಾಗಿದೆ. ಮಧುಬನಿ ಕ್ಷೇತ್ರದಿಂದ ಭಾರತಿ ಮೆಹ್ತಾ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪಶ್ಚಿಮ ಚಂಪಾರಣ್ನಿಂದ ಶಿವಾನಿದೇವಿ ಪ್ರಜಾಪತಿ ಅವರನ್ನು ಮೂರನೇ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದೆ.
ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಪಕ್ಷವು ಈ ಆಯ್ಕೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಕಳೆದ ತಿಂಗಳು (ಮೇ 7 ರಂದು) ಬಿಹಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಿಶಾಂತಕುಮಾರ ಅವರಿಗೆ ಪ್ರಸ್ತುತ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ಉಪಚುನಾವಣೆಗೆ ಲಲನ್ ಪ್ರಸಾದ ಅವರಿಗೆ ಟಿಕೆಟ್
ವಿಧಾನ ಪರಿಷತ್ತಿನ ತೆರವಾದ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಜೆಡಿಯು ಪಕ್ಷವು ಶೇಖಪುರ ನಿವಾಸಿಯಾದ ಲಲನ್ ಪ್ರಸಾದ ಅವರಾವರಿಗೆ ಟಿಕೆಟ್ ನೀಡಿದೆ.
ಮಹಿಳಾ ಪ್ರಾತಿನಿಧ್ಯ
ಜೆಡಿಯು ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯ ಪ್ರಮುಖ ಆಕರ್ಷಣೆಯೆಂದರೆ ರಾಜಕೀಯದಲ್ಲಿ ಮಹಿಳಾ ಸಹಭಾಗಿತ್ವಕ್ಕೆ ನೀಡಿರುವ ಹೆಚ್ಚಿನ ಆದ್ಯತೆ. ಭಾರತಿ ಮೆಹ್ತಾ ಮತ್ತು ಶಿವಾನಿದೇವಿ ಪ್ರಜಾಪತಿ ಅವರನ್ನು ಕಣಕ್ಕಿಳಿಸುವ ಮೂಲಕ, ತನ್ನ ರಾಜಕೀಯ ಚೌಕಟ್ಟಿನಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ಸ್ಪಷ್ಟ ಸಂದೇಶವನ್ನು ಪಕ್ಷ ನೀಡಿದೆ. ಇದರೊಂದಿಗೆ ಬಿಹಾರದಲ್ಲಿ ಜೆಡಿಯುನ ಸಾಂಪ್ರದಾಯಿಕ ಚುನಾವಣಾ ತಂತ್ರಗಾರಿಕೆಯ ಭಾಗವಾಗಿರುವ ವಿವಿಧ ಸಾಮಾಜಿಕ ವರ್ಗಗಳು ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಈ ಆಯ್ಕೆಯಲ್ಲಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.



ನಿಮ್ಮ ಕಾಮೆಂಟ್ ಬರೆಯಿರಿ