ಕೇವಲ ಒಂದೇ ತಿಂಗಳಲ್ಲಿ 215ರಿಂದ 20 ಸ್ಥಾನಕ್ಕೆ ಕುಸಿದ ಟಿಎಂಸಿ : ಮಮತಾ ರಾಜಕೀಯ ಸಾಮ್ರಾಜ್ಯದ ದಿಢೀರ್‌ ಮಹಾಪತನ !

ಪ್ರತಿರೋಧ, ಧೀಮಂತಿಕೆ ಮತ್ತು ಬಂಗಾಳದ ರಾಜಕೀಯ ನಾಡಿಮಿಡಿತವನ್ನು ಸರಿಯಾಗಿ ಅರಿತು ಯಶಸ್ಸು ಸಾಧಿಸಿದ್ದ ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದಲ್ಲಿ, ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರದ ಒಂದು ತಿಂಗಳು ಭಾರಿ ರಾಜಕೀಯ ಭೂಕಂಪವನ್ನೇ ಸೃಷ್ಟಿಸಿದೆ.
ಕೇವಲ ಒಂದು ತಿಂಗಳ ಹಿಂದೆಯಷ್ಟೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಅವಿಭಜಿತ ನಾಯಕಿಯಾಗಿ, ಭಾರಿ ಶಾಸಕರ ಬಲದೊಂದಿಗೆ ಅಧಿಪತ್ಯ ಸ್ಥಾಪಿಸಿದ್ದ ಮಮತಾ ಬ್ಯಾನರ್ಜಿ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅನುಭವಿಸಿದ ಹೀನಾಯ ಸೋಲು ಪಶ್ಚಿಮ ಬಂಗಾಳದ್ದಷ್ಟೇ ಅಲ್ಲ, ಅವರ ಪಕ್ಷದ ರಾಜಕೀಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ.
ಮಮತಾ ಬ್ಯಾನರ್ಜಿಗೆ ವೈಯಕ್ತಿಕ ಮತ್ತು ರಾಜಕೀಯ ಹಿನ್ನಡೆ:
ಈ ಬಾರಿಯ ಸೋಲು ಮಮತಾ ಬ್ಯಾನರ್ಜಿ ಅವರಿಗೆ ವೈಯಕ್ತಿಕವಾಗಿ ದೊಡ್ಡ ಹೊಡೆತ ನೀಡಿದೆ. ತಮ್ಮ ರಾಜಕೀಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ‘ಭವಾನಿಪುರ’ ಕ್ಷೇತ್ರದಲ್ಲೇ ಅವರು ಒಂದುಕಾಲದ ತಮ್ಮ ಪರಮಾಪ್ತರಾಗಿದ್ದ, ಈಗ ತಮ್ಮ ಪರಮ ರಾಜಕೀಯ ವೈರಿ ಮತ್ತು ರಾಜಕೀಯ ಜಿದ್ದಾಜಿದ್ದಿನ ನಾಯಕ ಸುವೇಂದು ಅಧಿಕಾರೀ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಾರೆ. ಈ ಚುನಾವಣಾ ಫಲಿತಾಂಶದಿಂದಾಗಿ 294 ಸೀಟುಗಳ ಬಂಗಾಳ ವಿಧಾನಸಭೆಯಲ್ಲಿ 2021ರಲ್ಲಿ 215 ಶಾಸಕರನ್ನು ಹೊಂದಿದ್ದ ಟಿಎಂಸಿಯ ಬಲ, ಈಗ ಕೇವಲ 80 ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ಅವರ ಪಕ್ಷವೂ ಇಬ್ಭಾಗದತ್ತ ಸಾಗಿದೆ.
ಪಕ್ಷದಲ್ಲಿ ಎದುರಾದ ಬಂಡಾಯದ ಬಿರುಗಾಳಿ:
ಕೇವಲ ಚುನಾವಣಾ ಸೋಲಷ್ಟೇ ಅಲ್ಲದೆ, 1998ರಲ್ಲಿ ಮಮತಾ ಸ್ಥಾಪಿಸಿದ ಟಿಎಂಸಿ ಪಕ್ಷಕ್ಕೆ ಈಗ ಅಸ್ತಿತ್ವದ ಬಿಕ್ಕಟ್ಟು ಎದುರಾಗಿದೆ. ಬುಧವಾರ ಪಕ್ಷದ ಬಂಡಾಯ ಶಾಸಕರ ಗುಂಪೊಂದು ಒಟ್ಟು 58 ಶಾಸಕರ ಬೆಂಬಲ ಪತ್ರವನ್ನು ವಿಧಾನಸಭೆ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಸಲ್ಲಿಸಿದೆ. ಇವರೆಲ್ಲರೂ ಪಕ್ಷದಿಂದ ಉಚ್ಚಾಟಿತಗೊಂಡಿರುವ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಬೆಂಬಲಿಸಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕು ಮಂಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಇನ್ನೂ ಇಬ್ಬರು ಶಾಸಕರ ಬೆಂಬಲವಿದೆ ಎಂದು ರಿತಬ್ರತ ಆಪ್ತರು ಹೇಳಿಕೊಂಡಿದ್ದಾರೆ. ಅಂದರೆ ಮೂಲ ಟಿಎಂಸಿಯ ಬಲ  80 ಸ್ಥಾನದಿಂದ 20 ಸ್ಥಾನಕ್ಕೆ ಕುಸಿದಂತಾಯಿತು.
ಸ್ಪೀಕರ್ ಈ ಬಂಡಾಯ ಬಣಕ್ಕೆ ಮನ್ನಣೆ ನೀಡಿರುವುದು ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತ ತಂದಿದೆ. ಇದರರ್ಥ, ವಿಧಾನಸಭೆಯಲ್ಲಿ ಟಿಎಂಸಿಯ ಮೂರನೇ ಎರಡರಷ್ಟು ಶಾಸಕರು ಮಮತಾ ಅವರ ನಾಯಕತ್ವದಿಂದ ದೂರ ಸರಿದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ರಿತಬ್ರತ ಬ್ಯಾನರ್ಜಿ ಮತ್ತು ಶಾಸಕ ಸಂದೀಪನ್ ಸಹಾ ಅವರನ್ನು ಟಿಎಂಸಿ ಉಚ್ಚಾಟಿಸಿತ್ತು. ಆದರೆ, ಈಗ ಅದೇ ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರನ್ನೇ ವಿಪಕ್ಷದ ನಾಯಕನನ್ನಾಗಿ ಮಾಡಿ ಎಂದು ಟಿಎಂಸಿಯ 58 ಶಾಸಕರು ವಿಧಾನಸಭೆ ಸ್ಪೀಕರ್‌ಗೆ ತಮ್ಮ ಬೆಂಬಲ ಪತ್ರವನ್ನು ನೀಡಿದ ನಂತರವೇ ಸ್ಪೀಕರ್‌ ಅವರು ರಿತಬ್ರತ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿದ್ದಾರೆ…!
ಅಧಿಕಾರದ ಉತ್ತುಂಗದಿಂದ ಪತನದತ್ತ:
ಟಿಎಂಸಿ ಪಕ್ಷದ ಇತಿಹಾಸವನ್ನು ಗಮನಿಸಿದರೆ, 2011ರಲ್ಲಿ ಐತಿಹಾಸಿಕ ಎಡರಂಗದ (Left Front) 34 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ 184 ಸೀಟುಗಳೊಂದಿಗೆ ಮಮತಾ ಅಧಿಕಾರಕ್ಕೆ ಬಂದಿದ್ದರು. 2016ರಲ್ಲಿ 211 ಸೀಟುಗಳು ಹಾಗೂ 2021ರಲ್ಲಿ ಬರೋಬ್ಬರಿ 215 ಸೀಟುಗಳನ್ನು ಗೆದ್ದು ಯಶಸ್ಸಿನ ಉತ್ತುಂಗಕ್ಕೇರಿದ್ದರು. ಆದರೆ ಈಗಿನ ಕುಸಿತ ಅಷ್ಟೇ ವೇಗವಾಗಿದೆ. ಕಳೆದ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಮಮತಾ ಎದುರಿಸದ ಸವಾಲು ಇದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ರಾಜಕೀಯ ವಿಶ್ಲೇಷಕ ಶುಭಮಯ ಮೈತ್ರಾ, “ಚುನಾವಣಾ ಸೋಲಿನ ನಂತರ ಪಕ್ಷ ಹೀಗೆ ವಿಭಜನೆಯಾಗುವುದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ, 2011ರಲ್ಲಿ ಎಡರಂಗವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಈ ಪಕ್ಷದ ಮುಖ್ಯ ಉದ್ದೇಶವಾಗಿತ್ತು. ಅದು ಈಡೇರಿದ ನಂತರ ಪಕ್ಷಕ್ಕೆ ಯಾವುದೇ ಸದೃಢ ಸೈದ್ಧಾಂತಿಕ ತಳಹದಿ ಅಥವಾ ರಾಜ್ಯದ ಅಭಿವೃದ್ಧಿ ಬಗ್ಗೆ ದೀರ್ಘಕಾಲೀನ ದೂರದೃಷ್ಟಿ ಇರಲಿಲ್ಲ. ಹೀಗಾಗಿ ಶಾಸಕರಿಗೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟರೆ ಪಕ್ಷದಲ್ಲಿ ಉಳಿಯಲು ಬೇರೆ ಕಾರಣಗಳಿರಲಿಲ್ಲ” ಎಂದು ವಿಶ್ಲೇಷಿಸಿದ್ದಾರೆ.
ಮಮತಾ ತಂತ್ರ ಮತ್ತು ಬಿಜೆಪಿಯ ಪ್ರತಿತಂತ್ರ :
ಪಕ್ಷದ ಮೇಲಿನ ಹಿಡಿತವನ್ನು ಮರಳಿ ಪಡೆಯಲು ಮಮತಾ ಬ್ಯಾನರ್ಜಿ ಅವರು ಪಕ್ಷದ ಹಲವು ಪ್ರಮುಖ ಸಮಿತಿಗಳು ಮತ್ತು ಮೋರ್ಚಾಗಳನ್ನು ವಿಸರ್ಜಿಸಿದ್ದಾರೆ. ಇದು ಪಕ್ಷ ಇಭ್ಭಾಗವಾಗುವುದನ್ನು ತಡೆಯಲು ಅವರು ನಡೆಸಿರುವ ಕೊನೆಯ ಪ್ರಯತ್ನ ಎನ್ನಲಾಗಿದೆ. ಅಲ್ಲದೆ, ತಮ್ಮ ಪಕ್ಷವನ್ನು ಒಡೆಯಲು ಬಿಜೆಪಿ ‘ಹಣ, ಬಂಧನ ಮತ್ತು ಬೆದರಿಕೆ’ ತಂತ್ರಗಳನ್ನು ಬಳಸುತ್ತಿದೆ ಎಂದು ಮಮತಾ ಆರೋಪ ಮಾಡಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಈ ಬಂಡಾಯ ಶಾಸಕರನ್ನು ತಕ್ಷಣವೇ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಆತುರದಲ್ಲಿಲ್ಲ. ವಿಶ್ಲೇಷಕರ ಪ್ರಕಾರ, ಇಲ್ಲಿ ಮಹಾರಾಷ್ಟ್ರದ ‘ಏಕನಾಥ ಶಿಂಧೆ ಮಾದರಿ’ಯನ್ನು ಅನುಸರಿಸಲಾಗುತ್ತಿದೆ. ಅಂದರೆ, ಬಂಡಾಯ ಬಣವನ್ನು ನೇರವಾಗಿ ಬಿಜೆಪಿಯಲ್ಲಿ ವಿಲೀನಗೊಳಿಸುವ ಬದಲು, ಅವರನ್ನು ಪ್ರತ್ಯೇಕ ರಾಜಕೀಯ ಶಕ್ತಿಯಾಗಿ ಬೆಳೆಸಿ ಮಮತಾ ಅವರ ಶಕ್ತಿಯನ್ನು ಕುಂದಿಸುವುದು ಬಿಜೆಪಿಯ ರಾಜಕೀಯ ತಂತ್ರವಾಗಿದೆ.
ಆದರೆ, ಮಮತಾ ಬ್ಯಾನರ್ಜಿ ಅವರ ರಾಜಕೀಯ ಅಧ್ಯಾಯ ಮುಗಿಯಿತು ಎಂದು ಈಗಲೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಯಾಕೆಂದರೆ ಶೂನ್ಯದಿಂದ ಎದ್ದು ಬಂದು ಕಮ್ಯುನಿಸ್ಟ್ ಆಡಳಿತವನ್ನು ಉರುಳಿಸಿದ ಇತಿಹಾಸ ಅವರದ್ದಾಗಿದೆ. ವಿಶೇಷವೆಂದರೆ, ಈಗ ಬಂಡಾಯ ಎದ್ದಿರುವ ಶಾಸಕರು ಕೂಡ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಒಪ್ಪಿಕೊಂಡಿದ್ದಾರೆ. ಅವರ ಹೋರಾಟ ಪ್ರಸ್ತುತ ಇರುವ ಪಕ್ಷದ ಆಡಳಿತ ಶೈಲಿ ಮತ್ತು ಮಮತಾ ಅವರ ಸೋದರಸಳ ಅಭಿಷೇಕ ಬ್ಯಾನರ್ಜಿ ವಿರುದ್ಧವೇ ಹೊರತು, ನೇರವಾಗಿ ಮಮತಾ ವಿರುದ್ಧ ಅಲ್ಲ ಎಂದು ಬಂಡಾಯ ಶಾಸಕರು ಅನೇಕ ಸಲ ಹೇಳಿದ್ದಾರೆ. ಆದರೆ ಇದು ಬಂಡಾಯ ಶಾಸಕರ ಒಂದು ರಾಜಕೀಯ ತಂತ್ರಗಾರಿಕೆಯೇ ? ಈಗಲೇ ಖಚಿತವಾಗಿ ಹೇಳುವುದು ಕಷ್ಟ.
ಮುಂದೇನು?:
ಪ್ರಸ್ತುತ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರು ತಮಗೆ ಎದುರಾಗಿರುವ ಈ ಆಪತ್ತನ್ನು ಹೇಗೆ ಅವಕಾಶವನ್ನಾಗಿ ಬದಲಾಯಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ತಾವು ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾದರೆ, ತಳಮಟ್ಟದ ಕಾರ್ಯಕರ್ತರ ಬೆಂಬಲದೊಂದಿಗೆ ಅವರು ಮತ್ತೆ ಪುಟಿದೇಳಬಹುದು. ಇಲ್ಲದಿದ್ದರೆ, ಇದು ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಎಡರಂಗದ ಪತನದ ನಂತರ ಮತ್ತೊಂದು ದೊಡ್ಡ ರಾಜಕೀಯ ಸಾಮ್ರಾಜ್ಯದ ಪತನಕ್ಕೆ ನಾಂದಿಯಾಗಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement