ಸೌದಿ ಅರೇಬಿಯಾ Vs ಯುಎಇ : ಕೇವಲ 5 ಎಸೆತಗಳಲ್ಲಿ ಪಂದ್ಯ ಗೆದ್ದ ಯುಎಇ…!

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ಎಸಿಸಿ ಮಹಿಳಾ ಪ್ರೀಮಿಯರ್ ಕಪ್ (ACC Women’s Premier Cup) ಟೂರ್ನಿಯ ತನ್ನ ಚೊಚ್ಚಲ ಪಂದ್ಯದಲ್ಲೇ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಮಹಿಳಾ ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಸೌದಿ ಅರೇಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ, ಇಶಾ ಓಜಾ ನೇತೃತ್ವದ ಯುಎಇ ತಂಡ ಟಿ20 ಏಷ್ಯಾ ಕಪ್ ಅರ್ಹತಾ ಸುತ್ತಿನ ಅಭಿಯಾನವನ್ನು ದಾಖಲೆಯೊಂದಿಗೆ ಆರಂಭಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ತಂಡ, ಯುಎಇ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 15.3 ಓವರ್‌ಗಳಲ್ಲಿ ಕೇವಲ 27 ರನ್‌ಗಳಿಗೆ ಆಲೌಟ್‌ ಆಯಿತು. ಯುಎಇ ಪರ ಸಂಘಟಿತ ಬೌಲಿಂಗ್ ಪ್ರದರ್ಶಿಸಿದ ಸುರಕ್ಷಾ ಕೊಟ್ಟೆ 5 ರನ್ ನೀಡಿ 3 ವಿಕೆಟ್ ಪಡೆದರೆ, ಹೀನಾ ಹೋತ್‌ಚಂದಾನಿ 4 ರನ್‌ಗಳಿಗೆ 3 ವಿಕೆಟ್ ಹಾಗೂ ನಾಯಕಿ ಇಶಾ ಓಜಾ 9 ರನ್ ನೀಡಿ 3 ವಿಕೆಟ್ ಕಡಿಯುವ ಮೂಲಕ ಸೌದಿ ಬ್ಯಾಟರ್‌ಗಳಿಗೆ ಯಾವುದೇ ರೀತಿಯ ಪ್ರತಿರೋಧ ಒಡ್ಡಲು ಅವಕಾಶ ನೀಡಲಿಲ್ಲ.
ಕೇವಲ ಐದು ಎಸೆತಗಳಲ್ಲಿ ಪಂದ್ಯ ಗೆದ್ದ ಯುಎಇ..!  
ಕೇವಲ 28 ರನ್‌ಗಳ ಅತ್ಯಲ್ಪ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ, ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 5 ಅಧಿಕೃತ (Legal) ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿ ಇತಿಹಾಸ ಬರೆಯಿತು. ಈ ಮೂಲಕ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ ಗುರಿ ತಲುಪಿದ ಅಪರೂಪದ ತಂಡಗಳ ಸಾಲಿಗೆ ಯುಎಇ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ರುವಾಂಡಾ, ಟಾಂಜಾನಿಯಾ ಮತ್ತು ಥೈಲ್ಯಾಂಡ್ ತಂಡಗಳು ಕೇವಲ 4 ಎಸೆತಗಳಲ್ಲಿ ಗುರಿ ತಲುಪಿ ಅತ್ಯಂತ ವೇಗದ ಜಯ ದಾಖಲಿಸಿದ ಕೀರ್ತಿ ಹೊಂದಿವೆ.
ಮಹಿಳಾ ಟಿ20ಯಲ್ಲಿ ಅತ್ಯಂತ ವೇಗದ ಜಯ ಸಾಧಿಸಿದ ತಂಡಗಳು (ಎಸೆತಗಳ ಆಧಾರದಲ್ಲಿ):
ರುವಾಂಡಾ – ಗುರಿ: 7 ರನ್ | ತೆಗೆದುಕೊಂಡ ಓವರ್‌ಗಳು: 0.4 ಓವರ್ | ಎದುರಾಳಿ: ಮಾಲಿ
ಟಾಂಜಾನಿಯಾ – ಗುರಿ: 12 ರನ್ | ತೆಗೆದುಕೊಂಡ ಓವರ್‌ಗಳು: 0.4 ಓವರ್ | ಎದುರಾಳಿ: ಮಾಲಿ
ಥೈಲ್ಯಾಂಡ್ – ಗುರಿ: 10 ರನ್ | ತೆಗೆದುಕೊಂಡ ಓವರ್‌ಗಳು: 0.4 ಓವರ್ | ಎದುರಾಳಿ: ಫಿಲಿಪೈನ್ಸ್
ನೇಪಾಳ – ಗುರಿ: 17 ರನ್ | ತೆಗೆದುಕೊಂಡ ಓವರ್‌ಗಳು: 0.5 ಓವರ್ | ಎದುರಾಳಿ: ಮಾಲ್ಡೀವ್ಸ್
ಯುಎಇ – ಗುರಿ: 28 ರನ್ | ತೆಗೆದುಕೊಂಡ ಓವರ್‌ಗಳು: 0.5 ಓವರ್ | ಎದುರಾಳಿ: ಸೌದಿ ಅರೇಬಿಯಾ
ನಾಲ್ಕು ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿತು:
ವಿಶೇಷವೆಂದರೆ, ಯುಎಇ ತಂಡವು ತನ್ನ ಹಿಂದಿನ ಅತ್ಯಂತ ವೇಗದ ಗೆಲುವನ್ನು ಇದೇ ಸೌದಿ ಅರೇಬಿಯಾ ವಿರುದ್ಧವೇ ದಾಖಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಒಮಾನ್‌ನಲ್ಲಿ ನಡೆದಿದ್ದ ಗಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಯುಎಇ ತಂಡ 2ನೇ ಓವರ್‌ನ ಕೊನೆಯ ಎಸೆತ ಬಾಕಿ ಇರುವಾಗ ಗೆದ್ದು ಬೀಗಿತ್ತು. ಆದರೆ, ಈ ಬಾರಿಯ ಮುಖಾಮುಖಿಯಲ್ಲಿ ಅದಕ್ಕಿಂತಲೂ ಅತ್ಯಂತ ವೇಗವಾಗಿ ಕೇವಲ 5 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿ ಹೊಸ ದಾಖಲೆ ಬರೆದಿದೆ.
ಐಸಿಸಿಯ ಅಸೋಸಿಯೇಟ್ ವರ್ಷದ ಕ್ರಿಕೆಟರ್ ಪ್ರಶಸ್ತಿಯನ್ನು ಸತತ ಎರಡು ಬಾರಿ ಮುಡಿಗೇರಿಸಿಕೊಂಡಿರುವ ಯುಎಇ ನಾಯಕಿ ಇಶಾ ಓಜಾ, ಈ ಪಂದ್ಯದಲ್ಲೂ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ಅವರು ಎದುರಿಸಿದ 5 ಎಸೆತಗಳಲ್ಲಿ ಅಜೇಯ 15 ರನ್ ಸಿಡಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ತೀರ್ಥಾ ಸತೀಶ ಕೇವಲ ಒಂದು ಎಸೆತವನ್ನು ಎದುರಿಸಿ ಬೌಂಡರಿ ಬಾರಿಸಿದರು. ಇನ್ನುಳಿದಂತೆ 10 ವೈಡ್ ಮತ್ತು ಒಂದು ನೋ-ಬಾಲ್ ಸೇರಿದಂತೆ ಒಟ್ಟು 11 ರನ್‌ಗಳು ಎಕ್ಸ್‌ಟ್ರಾ ರೂಪದಲ್ಲಿ ಬಂದವು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement