ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿದ್ದ ಒಡವೆ ಪ್ರದರ್ಶಿಸಿದ ಯೂಟ್ಯೂಬರ್ ; ಮನೆ ಹೊಕ್ಕು ಚಿನ್ನಾಭರಣ ಕದ್ದೊಯ್ದ ಕಳ್ಳರು !

ಶಿವಪುರಿ :  ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಲು ತಮ್ಮ ಮನೆಯ ಒಳಾಂಗಣ, ಮನೆಯೊಳಗಿನ ವಸ್ತುಗಳು ಹಾಗೂ ಸಂಪತ್ತನ್ನು ಪ್ರದರ್ಶಿಸುವವರಿಗೆ ಮಧ್ಯಪ್ರದೇಶದ ಈ ಘಟನೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ. ಯೂಟ್ಯೂಬರ್ ಒಬ್ಬರು ತಮ್ಮ ಮನೆಯ ಒಳಗಿನ ದೃಶ್ಯ ಹಾಗೂ ಒಡವೆ-ನಗದನ್ನು ವೀಡಿಯೊ ಮಾಡಿ ಶೇರ್ ಮಾಡಿದ ಕೆಲವೇ ದಿನಗಳಲ್ಲಿ, ಕಳ್ಳರು ಅವರ ಮನೆಗೇ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಪತ್ತು ಮತ್ತು ಮನೆಯ ಒಳಾಂಗಣವನ್ನು (ಇಂಟೀರಿಯರ್) ಪ್ರದರ್ಶಿಸುವುದರಿಂದ ಎದುರಾಗಬಹುದಾದ ಗಂಭೀರ ಅಪಾಯಗಳ ಕುರಿತು ಈ ಪ್ರಕರಣವು ಚರ್ಚೆಗೆ ಕಾರಣವಾಗಿದೆ.
.ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಮೋಹನಿ ಗ್ರಾಮದ ನಿವಾಸಿಯಾದ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ಶನಿವಾರ ಮುಂಜಾನೆ ನುಗ್ಗಿದ ಅಪರಿಚಿತ ಕಳ್ಳರು, ಇಡೀ ಕುಟುಂಬವನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಚನಾ ಗುರ್ಜರ್, “ಶನಿವಾರ ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ನಮ್ಮನ್ನು ಕೋಣೆಯೊಳಗೆ ಹಾಕಿ ಬೀಗ ಹಾಕಿದರು, ನಂತರ ಕಳವು ಮಾಡಿದ್ದಾರೆ. ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಾಗೂ ಒಂದು ಕಾರ್ಟನ್ ಎನರ್ಜಿ ಡ್ರಿಂಕ್ಸ್ ಅನ್ನು ಸಹ ಅವರು ಕದ್ದೊಯ್ದಿದ್ದಾರೆ. ತಮ್ಮ ಮುಖಗಳು ರೆಕಾರ್ಡ್ ಆಗಬಾರದು ಎಂಬ ಉದ್ದೇಶದಿಂದ ಕಳ್ಳರು ಲಾಠಿ (ಕೋಲು) ಬಳಸಿ ಸಿಸಿಟಿವಿ ಕ್ಯಾಮೆರಾಗಳ ಆಂಗಲ್ (ಕೋನ) ಅನ್ನು ತಿರುಗಿಸಿದ್ದಾರೆ” ಎಂದು ನರ್ವರ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮುಂಜಾನೆ 4 ಗಂಟೆಯ ಸುಮಾರಿಗೆ ಕುಟುಂಬಸ್ಥರು ಎಚ್ಚರಗೊಂಡಾಗ, ಕೋಣೆಯ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಬಾಗಿಲು ತೆರೆದು ಅವರನ್ನು ರಕ್ಷಿಸಿದ್ದಾರೆ.

ಘಟನೆಯನ್ನು ಖಚಿತಪಡಿಸಿರುವ ಶಿವಪುರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸಂಜೀವ ಮುಳೆ ಅವರು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ಕ್ಲಿಪ್‌ಗಳ ಪೈಕಿ ಒಂದರಲ್ಲಿ, ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಗುರುತು ಸಿಗದಂತೆ ತಪ್ಪಿಸಿಕೊಳ್ಳಲು ಕೋಲಿನ ಸಹಾಯದಿಂದ ಸಿಸಿಟಿವಿ ಕ್ಯಾಮೆರಾದ ಕೋನವನ್ನು ಬದಲಾಯಿಸುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಳ್ಳತನ ಮಾಡಿದ ಆರೋಪಿಗಳು ಅದೇ ಗ್ರಾಮದವರಾಗಿರಬಹುದು ಅಥವಾ ಅಕ್ಕಪಕ್ಕದ ಪ್ರದೇಶದವರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರಿಗೆ ಈ ಕುಟುಂಬದ ದಿನಚರಿ ಮತ್ತು ಮನೆಯ ಸಂಪೂರ್ಣ ಲೇಔಟ್ (ವಿನ್ಯಾಸ) ಮೊದಲೇ ತಿಳಿದಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ʼಸುಶಿಕ್ಷಿತರಲ್ಲೇ ಹೆಚ್ಚು ಕುಸಿತʼ : ಭಾರತದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣದ ಬಗ್ಗೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಆತಂಕ !

ಸಾಮಾಜಿಕ ಜಾಲತಾಣದ ಲಿಂಕ್!
ಈ ತನಿಖೆಯಲ್ಲಿ ಯೂಟ್ಯೂಬರ್ ಆಗಿರುವ ಗೃಹಿಣಿ ರಚನಾ ಗುರ್ಜರ್ ಅವರ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಪಾತ್ರದ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ (ಅನುಯಾಯಿಗಳನ್ನು) ಹೊಂದಿರುವ ರಚನಾ ಗುರ್ಜರ್, ಇತ್ತೀಚೆಗೆ ತಮ್ಮ ಮನೆಯ ವಿವಿಧ ಭಾಗಗಳು, ಆಭರಣಗಳು, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೋರಿಸುವ ವೀಡಿಯೊಗಳನ್ನು ಹಂಚಿಕೊಂಡಿದ್ದರು.
ಅವರ ಒಂದು ವೀಡಿಯೊದಲ್ಲಿ ಮನೆಯ ಒಳಗಿನ ವಿವಿಧ ರೂಮುಗಳನ್ನು ಚಿತ್ರೀಕರಿಸಲಾಗಿತ್ತು, ಹಾಗೂ ಇನ್ನೊಂದು ವೀಡಿಯೊದಲ್ಲಿ ಮೇಜಿನ ಮೇಲಿಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ಪ್ರದರ್ಶಿಸಲಾಗಿತ್ತು ಎಂದು ವರದಿಯಾಗಿದೆ. ಇಂತಹ ವೀಡಿಯೊಗಳು ಕಳ್ಳರಿಗೆ ಮನೆಯ ವಿನ್ಯಾಸ, ಅಲ್ಲಿರುವ ಬೆಲೆಬಾಳುವ ವಸ್ತುಗಳು ಮತ್ತು ಮನೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸಿರಬಹುದು, ಇದು ಅವರು ಕಳ್ಳತನದ ಯೋಜನೆ ರೂಪಿಸಲು ಸಹಾಯ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ಭಾವಿಸಿವೆ.
ಸದ್ಯಕ್ಕೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಿಗೂ ಮತ್ತು ಈ ಕಳ್ಳತನಕ್ಕೂ ನೇರ ಸಂಬಂಧ ಇರುವುದನ್ನು ತನಿಖಾಧಿಕಾರಿಗಳು ಇನ್ನು ದೃಢಪಡಿಸಬೇಕಾಗಿದೆಯಾದರೂ, ಈ ಘಟನೆಯು ವೈಯಕ್ತಿಕ ಸಂಪತ್ತು ಮತ್ತು ಮನೆಯ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದರಿಂದಾಗುವ ಸುರಕ್ಷತೆಯ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಜಾಗೃತಿ ಮೂಡಿಸಿದೆ. ಮುಖವಾಡ ಧರಿಸಿದ ಶಂಕಿತರನ್ನು ಗುರುತಿಸಲು ಪೊಲೀಸರು ಸದ್ಯ ಡಿಜಿಟಲ್ ಮತ್ತು ಸಿಸಿಟಿವಿ ಸಾಕ್ಷ್ಯಗಳನ್ನು ತೀವ್ರವಾಗಿ ವಿಶ್ಲೇಷಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement