ಬೀದರ : ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು ; ಕಿರುಕುಳ ಕಾರಣ ಎಂದು ಪೋಷಕರ ಆರೋಪ

ಬೀದರ : ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೀದರಿನಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಗೆ ಶಾಲೆಯವರ ಮಾನಸಿಕ ಕಿರುಕುಳ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೀದರಿನ ಪ್ರತಾಪ ನಗರದ ಬಳಿಯಿರುವ ಖಾಸಗಿ ಶಾಲೆಯೊಂದರಲ್ಲಿ ಬುಧವಾರ (ಜೂನ್ 10)ರಂದು ಈ ಘಟನೆ ಸಂಭವಿಸಿದೆ. ಶಾಂತಿನಗರದ ನಿವಾಸಿಯಾದ ಸಮೀರ್ (15) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಸಮೀರ್‌  ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವ್ಯಾಸಂಗ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈತ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಸಮೀರ್ ಸಾವಿಗೆ ಶಾಲಾ ಸಿಬ್ಬಂದಿಯ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಆತನ ಪೋಷಕರು ಮತ್ತು ಸಂಬಂಧಿಕರು ಆರೋಪ ಮಾಡಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿಯವರು ಸಮೀರ್‌ಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲೇಬೇಕೆಂದು ನಿರಂತರವಾಗಿ ತೀವ್ರ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಮಗ ಮೃತಪಟ್ಟ ವಿಷಯವನ್ನು ತಡವಾಗಿ ತಿಳಿಸಿದ್ದರಿಂದ ಹಾಗೂ ತಾವು ಬರುವುದಕ್ಕಿಂತ ಮುಂಚೆಯೇ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಓದಿನ ಒತ್ತಡ ಅಷ್ಟೇ ಅಲ್ಲದೆ, ಸಮೀರ್‌ನ ಕೈಯಿಂದ ಇತರೆ ಕೆಲಸಗಳನ್ನು ಬಲವಂತವಾಗಿ ಮಾಡಿಸುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ನಿರಂತರ ಕಿರುಕುಳಗಳಿಂದ ತೀವ್ರ ಬೇಸತ್ತಿದ್ದ ಸಮೀರ್, ಮಾನಸಿಕ ನೆಮ್ಮದಿ ಕಳೆದುಕೊಂಡು ಈ ನಿರ್ಧಾರಕ್ಕೆ ಮುಂದಾಗಿದ್ದಾನೆ ಎಂದು ಅವರು ಕಣ್ಣೀರು ಹಾಕಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ : ಹಿರಿಯ ಪತ್ರಕರ್ತ ಪಿ.ಎಸ್.ಸದಾನಂದ ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement