
ಭಾರತೀಯ ಕ್ರಿಕೆಟ್ನ ದಿಗ್ಗಜ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ, ವಿಕೆಟ್ಕೀಪರ್-ಬ್ಯಾಟರ್ ಅನ್ವಯ ದ್ರಾವಿಡ್ ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಪ್ರಕಟಿಸಲಾದ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಎಸ್. ಶ್ರೀಧರನ್ ನೇತೃತ್ವದ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯು ಗುರುವಾರ ಈ ಸರಣಿಗಾಗಿ ಏಕದಿನ ಮತ್ತು ಟೆಸ್ಟ್ (ಮಲ್ಟಿ-ಡೇ) ತಂಡಗಳನ್ನು ಪ್ರಕಟಿಸಿದೆ. ಜುಲೈ 4, 2026 ರಿಂದ ಶ್ರೀಲಂಕಾದ ಹಂಬನ್ತೋಟದಲ್ಲಿ ಸರಣಿ ಆರಂಭವಾಗಲಿದ್ದು, ಸರಣಿಯು ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಮಲ್ಟಿ-ಡೇ ಪಂದ್ಯಗಳನ್ನು ಒಳಗೊಂಡಿರಲಿದೆ.
ಹದಿನೇಳು ವರ್ಷದ ಬಲಗೈ ಬ್ಯಾಟರ್ ಆಗಿರುವ ಅನ್ವಯ ದ್ರಾವಿಡ್, ದೇಶೀಯ ವಯೋಮಿತಿ ಕ್ರಿಕೆಟ್ನಲ್ಲಿ ಸತತವಾಗಿ ತೋರಿದ ಅದ್ಭುತ ಪ್ರದರ್ಶನಕ್ಕಾಗಿ ಈಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಕಟಿಸಲಾಗಿರುವ 15 ಸದಸ್ಯರ ಏಕದಿನ ತಂಡದಲ್ಲಿ ರಜತ್ ಬಘೇಲ್ ಅವರೊಂದಿಗೆ ಅನ್ವಯ್ ದ್ರಾವಿಡ್ ಎರಡನೇ ವಿಕೆಟ್ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಯಶವರ್ಧನ ಸಿಂಗ್ ಚೌಹಾಣ ತಂಡದ ನಾಐಕರಾಗಿದ್ದು, ಲಕ್ಷ್ಯ ರೈಚಂದಾನಿ ಉಪನಾಯಕರಾಗಿದ್ದಾರೆ. ಅನ್ವಯ ಅವರ ಅಣ್ಣ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದಾರಾದರೂ, ದ್ರಾವಿಡ್ ಸಹೋದರರಲ್ಲಿ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿಗೆ ಕರೆ ಪಡೆದ ಹೆಗ್ಗಳಿಕೆ ಈಗ ಅನ್ವಯ ಅವರದ್ದಾಗಿದೆ.

ವಿನೂ ಮಂಕಡ್ ಟ್ರೋಫಿಯಲ್ಲಿ ಮಿಂಚಿದ್ದ ಅನ್ವಯ
ಇತ್ತೀಚೆಗೆ ನಡೆದ ದೇಶೀಯ ಕ್ರಿಕೆಟ್ನ ವಿನೂ ಮಂಕಡ್ ಟ್ರೋಫಿಯಲ್ಲಿ ಅನ್ವಯ ದ್ರಾವಿಡ್ ಕರ್ನಾಟಕ ಅಂಡರ್-19 ತಂಡವನ್ನು ನಾಯಕನಾಗಿ ಮುನ್ನಡೆಸಿ ಕ್ವಾರ್ಟರ್ ಫೈನಲ್ವರೆಗೆ ತಲುಪಿಸಿದ್ದರು. ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಆಡಿದ್ದ ಅವರು 6 ಇನ್ನಿಂಗ್ಸ್ಗಳಿಂದ ಒಟ್ಟು 220 ರನ್ ಗಳಿಸಿದ್ದರು. ಹಿಮಾಚಲ ಪ್ರದೇಶ ವಿರುದ್ಧದ ತೀವ್ರ ಒತ್ತಡದ ರನ್ ಚೇಸಿಂಗ್ ವೇಳೆ ಅವರು ಆಡಿದ್ದ ಅಜೇಯ 82 ರನ್ಗಳ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಕ್ರಿಕೆಟ್ ವಲಯದ ಗಮನ ಸೆಳೆದಿತ್ತು. ಇದಕ್ಕೂ ಮುನ್ನ, ಅಂಡರ್-16 ವಿಜಯ ಮರ್ಚೆಂಟ್ ಟ್ರೋಫಿಯಲ್ಲೂ ಅನ್ವಯ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು.
ಭವಿಷ್ಯದ ವಿಶ್ವಕಪ್ಗೆ ಬುನಾದಿ
ರಾಷ್ಟ್ರೀಯ ಆಯ್ಕೆಗಾರರು ಈ ಶ್ರೀಲಂಕಾ ಪ್ರವಾಸವನ್ನು ಮುಂದಿನ ಅಂಡರ್-19 ವಿಶ್ವಕಪ್ನ ದೃಷ್ಟಿಕೋನದಲ್ಲಿ ಪರಿಗಣಿಸಿದ್ದಾರೆ. ಸದ್ಯದ ವಯಸ್ಸಿನ ಲೆಕ್ಕಾಚಾರದ ಪ್ರಕಾರ, ಅನ್ವಯ ದ್ರಾವಿಡ್ ಇನ್ನು ಎರಡು ವರ್ಷಗಳ ನಂತರ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಆಡಲು ಅರ್ಹರಾಗಿದ್ದಾರೆ. ಹಾಗಾಗಿ, ಉಪಖಂಡದ ಪಿಚ್ಗಳಲ್ಲಿ ಈಗ ಸಿಗುತ್ತಿರುವ ಈ ಎಕ್ಸ್ಪೋಷರ್ ಅವರ ಬೆಳವಣಿಗೆಗೆ ಅತ್ಯಂತ ಪ್ರಮುಖವಾಗಿದೆ.
ಭಾರತೀಯ ಕಿರಿಯರ ತಂಡವು ಜೂನ್ ಕೊನೆಯ ವಾರದಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಮೊದಲು ಏಕದಿನ ಸರಣಿ ಮುಗಿಯಲಿದ್ದು, ಆ ಬಳಿಕ ಪ್ರತ್ಯೇಕವಾಗಿ ಪ್ರಕಟಿಸಲಾಗಿರುವ ತಂಡವು ಮಲ್ಟಿ-ಡೇ ರೆಡ್-ಬಾಲ್ ಪಂದ್ಯಗಳನ್ನು ಆಡಲಿದೆ.
ಭಾರತ ಅಂಡರ್-19 ಏಕದಿನ ತಂಡ: ಯಶವರ್ಧನ ಸಿಂಗ್ ಚೌಹಾಣ (ನಾಯಕ), ಸಾಗರ ವೀರ್ಕ್, ಲಕ್ಷ್ಯ ರೈಚಂದಾನಿ (ಉಪನಾಯಕ), ವಿನೀತ್ ವಿ.ಕೆ, ಅರ್ಜುನ ರಜಪೂತ, ಕುಶಾಗ್ರ ಓಜಾ, ರಜತ ಬಘೇಲ್ (ವಿಕೆಟ್ಕೀಪರ್), ಅನ್ವಯ ದ್ರಾವಿಡ್ (ವಿಕೆಟ್ಕೀಪರ್), ಅನ್ಮೋಲಜೀತ್ ಸಿಂಗ್, ವುಟ್ಕುರಿ ಯಶಸ್ವಿ ಗೌಡ, ರೋಹಿತ್ ಯಾದವ್, ಶಾವಿನ್ ವಿ, ಕಾವ್ಯ ಪರೇಶ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್.


ನಿಮ್ಮ ಕಾಮೆಂಟ್ ಬರೆಯಿರಿ