
ಕೇನ್ ವಿಲಿಯಮ್ಸನ್ ಅವರು ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಹೈ-ಪ್ರೊಫೈಲ್ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮಧ್ಯದಲ್ಲೇ 35 ವರ್ಷದ ವಿಲಿಯಮ್ಸನ್ ತಮ್ಮದೇ ಶೈಲಿಯಲ್ಲಿ ದಿಢೀರ್ ನಿರ್ಧಾರ ಪ್ರಕಟಿಸಿದ್ದಾರೆ. ಅವರು ತಕ್ಷಣದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಂದ ದೂರ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಇತಿಹಾಸವನ್ನು ಹೊಸದಾಗಿ ಬರೆದಿದ್ದ ಅವರ 16 ವರ್ಷಗಳ ಭವ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ದಿಢೀರ್ ತೆರೆ ಬಿದ್ದಿದೆ. ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದಿದ್ದ ವಿಲಿಯಮ್ಸನ್, ಕಳೆದ ವಾರ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಭಾರಿ ಸೋಲಿನ ಬಳಿಕ ಉಳಿದ ಮಾದರಿಗಳಿಗೂ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿರುವ ಭಾವುಕ ಪ್ರಕಟಣೆಯಲ್ಲಿ ಮಾತನಾಡಿರುವ ವಿಲಿಯಮ್ಸನ್, “ನಾನು ಈ ಬಗ್ಗೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ, ಆದರೆ ಕಳೆದ ಕೆಲವು ದಿನಗಳಲ್ಲಿ ಈಗ ಸರಿಯಾದ ಸಮಯ ಎಂಬುದು ಸ್ಪಷ್ಟವಾಯಿತು. ನಾನು ಯಾವಾಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ಗಾಗಿ ಬಲವಾದ ಹಸಿವು ಮತ್ತು ಪ್ರೇರಣೆಯನ್ನು ಹೊಂದಿದ್ದೆ. ನ್ಯೂಜಿಲೆಂಡ್ಗಾಗಿ ಆಡಿದ ಪ್ರತಿ ಪಂದ್ಯದಲ್ಲೂ ನನ್ನ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಇದಕ್ಕಿಂತ ಕಡಿಮೆ ಸಮರ್ಪಣಾ ಮನೋಭಾವದಿಂದ ಮುಂದುವರಿಯುವುದು ಸರಿಯಲ್ಲ. ನನ್ನ ಸ್ವಂತ ಇಚ್ಛೆಯಂತೆ ಗೌರವಯುತವಾಗಿ ವಿದಾಯ ಹೇಳುತ್ತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ವಿಲಿಯಮ್ಸನ್ ಬ್ಲಾಕ್ ಕ್ಯಾಪ್ಸ್ (ನ್ಯೂಜಿಲೆಂಡ್) ಇತಿಹಾಸದಲ್ಲೇ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ನಿರ್ಗಮಿಸುತ್ತಿದ್ದಾರೆ. 2010 ರಲ್ಲಿ ಪದಾರ್ಪಣೆ ಮಾಡಿದ ನಂತರ 378 ಪಂದ್ಯಗಳಿಂದ ಅವರು 48 ಶತಕಗಳು ಮತ್ತು 6 ದ್ವಿಶತಕಗಳನ್ನೊಳಗೊಂಡಂತೆ ಒಟ್ಟು 19,346 ರನ್ಗಳ ಬೃಹತ್ ಎತ್ತರದಶಿಖರವನ್ನೇ ನಿರ್ಮಿಸಿದ್ದಾರೆ.
ಪ್ರಮುಖವಾಗಿ, ಅವರ ಈ ನಿರ್ಗಮನವು ಆಧುನಿಕ ಕ್ರಿಕೆಟ್ನ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಅವರನ್ನೊಳಗೊಂಡ ಪ್ರಸಿದ್ಧ ‘ಫ್ಯಾಬ್ ಫೋರ್’ (Fab Four) ಕೂಟದಲ್ಲಿ ಬಿದ್ದ ಮೊದಲ ವಿಕೆಟ್ ಆಗಿದೆ. ವಿರಾಟ್ ಕೊಹ್ಲಿ ಈಗಾಗಲೇ ಟಿ20ಐ ಹಾಗೂ ಟೆಸ್ಟ್ನಿಂದ ದೂರ ಉಳಿದಿದ್ದರೂ ಈ ಗಣ್ಯ ಗುಂಪಿನಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಮಾದರಿಗಳಿಂದ ಸಂಪೂರ್ಣವಾಗಿ ನಿವೃತ್ತಿ ಘೋಷಿಸಿದ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ಜಾಗತಿಕ ಕ್ರಿಕೆಟ್ ಈಗ ಅವರ ಸಾಂಪ್ರದಾಯಿಕ ಕ್ಲಾಸಿಕಲ್ ತಂತ್ರಗಾರಿಕೆಯ ಬ್ಯಾಟಿಂಗ್ ಕೊರತೆಯನ್ನು ಎದುರಿಸಲಿದೆ.
ಅವರ ರನ್ಗಳ ಅಂಕಿ-ಅಂಶಗಳ ಆಚೆಗೂ, ಅವರ ನಾಯಕತ್ವ ಮತ್ತು ಶಾಂತ ಸ್ವಭಾವ ಜಗತ್ತಿನಾದ್ಯಂತ ಪ್ರಶಂಸಿಸಲ್ಪಟ್ಟಿದೆ. 2016 ರಿಂದ 2024 ರವರೆಗೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದ ಅವರು, ತಂಡವನ್ನು ಎರಡು ಐಸಿಸಿ ವಿಶ್ವಕಪ್ ಫೈನಲ್ಸ್, ಮೂರು ಸೆಮಿಫೈನಲ್ಸ್ಗೆ ತಲುಪಿಸಿದ್ದರು. ಅಲ್ಲದೆ, 2021 ರಲ್ಲಿ ಭಾರತದ ವಿರುದ್ಧ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಗೆಲ್ಲಿಸಿಕೊಡುವ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದರು.
ಎಲ್ಲರ ಪ್ರೀತಿಯ ಕುವರ; ಕ್ರೀಡಾ ಸ್ಫೂರ್ತಿಯ ಸಂಕೇತ
ವಿಲಿಯಮ್ಸನ್ ಅವರ ಪರಂಪರೆ ಕೇವಲ ರನ್ ಮತ್ತು ರೆಕಾರ್ಡ್ಗಳಿಗೆ ಸೀಮಿತವಾಗಿಲ್ಲ. ಅವರು ಯಾವಾಗಲೂ ಕ್ರಿಕೆಟ್ ಅನ್ನು ಸರಿಯಾದ ಹಾದಿಯಲ್ಲೇ ಆಡಿದರು. ಮೈದಾನದಲ್ಲಿ ಎಂದೂ ಯಾವುದೇ ಆಟಗಾರನ ಜೊತೆ ಗಲಾಟೆ ಅಥವಾ ವಿವಾದಕ್ಕೆ ಇಳಿಯದೆ ಸೌಮ್ಯತೆಯಿಂದಲೇ ಪಂದ್ಯಗಳನ್ನು ಗೆದ್ದರು.
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ 2019 ರ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಬೌಂಡರಿ ಕೌಂಟ್ ನಿಯಮದ ಆಧಾರದ ಮೇಲೆ ಅನುಭವಿಸಿದ ಅತ್ಯಂತ ನೋವಿನ ಸೋಲು. ಇಡೀ ಕ್ರಿಕೆಟ್ ಜಗತ್ತೇ ಆ ವಿವಾದಾತ್ಮಕ ನಿಯಮದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾಗ, ವಿಲಿಯಮ್ಸನ್ ಮಾತ್ರ ಶಾಂತವಾಗಿ ನಿಂತಿದ್ದರು. ಸಾರ್ವಜನಿಕ ಚರ್ಚೆಗಳನ್ನು ಬೆಂಬಲಿಸದೆ ಅಥವಾ ಒಂದು ಸಣ್ಣ ದೂರು ಸಹ ನೀಡದೆ ಆ ನೋವನ್ನು ನಗುಮುಖದಿಂದಲೇ ಸ್ವೀಕರಿಸಿದ್ದರು.
ಅವರ ಈ ಅಪರೂಪದ ಗಾಂಭೀರ್ಯ ಮತ್ತು ಸೌಮ್ಯತೆಯೇ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿತು. ಇದರೊಂದಿಗೆ ಅವರಿಗೆ ಕಾಫಿ ತಯಾರಿಸುವ (ಬ್ಯಾರಿಸ್ಟಾ ಲೆವೆಲ್ ಬ್ರೂಯಿಂಗ್) ಹವ್ಯಾಸ ಮತ್ತು ಅವರ ಸಾಕುನಾಯಿಗಳ ಮೇಲಿನ ಅಪಾರ ಪ್ರೀತಿ ಅಭಿಮಾನಿಗಳಲ್ಲಿ ಸದಾ ಚರ್ಚೆಯ ವಿಷಯವಾಗಿರುತ್ತಿತ್ತು.
ನ್ಯೂಜಿಲೆಂಡ್ ಜೆರ್ಸಿಯನ್ನು ಅವರು ಕಪಾಟಿನಲ್ಲಿ ಎತ್ತಿಟ್ಟಿರಬಹುದು, ಆದರೆ ಅವರ ಕ್ರಿಕೆಟ್ ಮಿದುಳು ಇನ್ನೂ ನಿಂತಿಲ್ಲ. ಈ ಬ್ಯಾಟಿಂಗ್ ದಂತಕಥೆ ಜಾಗತಿಕ ಟಿ20 ಲೀಗ್ಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಆದರೆ, ಅವರ ಅತ್ಯಂತ ಆಸಕ್ತಿದಾಯಕ ಮುಂದಿನ ಇನ್ನಿಂಗ್ಸ್ ಭಾರತದಲ್ಲಿ ಆರಂಭವಾಗಲಿದೆ.
ಐಪಿಎಲ್ 2026 ರ ಸೀಸನ್ಗಿಂತ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿಗೆ ಕಾರ್ಯತಂತ್ರದ ಸಲಹೆಗಾರರಾಗಿ (Strategic Advisor) ಸಹಿ ಹಾಕಿರುವ ವಿಲಿಯಮ್ಸನ್, ತಂಡದ ಮಾಲೀಕ ಸಂಜೀವ ಗೋಯೆಂಕಾ ಅವರೊಂದಿಗೆ ಉತ್ತಮ ವೃತ್ತಿಪರ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ತಂತ್ರಗಾರಿಕೆ ಮತ್ತು ಯುವ ಪ್ರತಿಭೆಗಳನ್ನು ಬೆಳೆಸುವ ಅದ್ಭುತ ಸಾಮರ್ಥ್ಯವನ್ನು ಗಮನಿಸಿರುವ ಆಂತರಿಕ ಮೂಲಗಳ ಪ್ರಕಾರ, ಈ ದಿಢೀರ್ ಅಂತಾರಾಷ್ಟ್ರೀಯ ನಿವೃತ್ತಿಯು ಸೂಪರ್ ಜೈಂಟ್ಸ್ ಕಾರ್ಪೊರೇಟ್ ಗ್ರೂಪ್ನಲ್ಲಿ ವಿಲಿಯಮ್ಸನ್ ಅವರಿಗೆ ವರ್ಷಪೂರ್ತಿ ಇರುವ ದೊಡ್ಡ ಜವಾಬ್ದಾರಿಯನ್ನು ವಹಿಸಲು ದಾರಿ ಮಾಡಿಕೊಟ್ಟಿದೆ. ಲಕ್ನೋದ ಎಲ್ಎಸ್ಜಿಯಿಂದ ಹಿಡಿದು ಸೌತ್ ಆಫ್ರಿಕಾ ಟಿ20 (SA20) ಲೀಗ್ನ ‘ಡರ್ಬನ್ ಸೂಪರ್ ಜೈಂಟ್ಸ್’ ವರೆಗಿನ ಫ್ರಾಂಚೈಸಿಗಳ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಮೂಲಕ ಅವರು ಮೈದಾನದ ದಂತಕಥೆಯಿಂದ ಜಾಗತಿಕ ಬೋರ್ಡ್ರೂಮ್ ಮಾಸ್ಟರ್ಮೈಂಡ್ ಆಗಿ ಬದಲಾಗುತ್ತಿದ್ದಾರೆ.
ಕೇನ್ ವಿಲಿಯಮ್ಸನ್ ವೃತ್ತಿಜೀವನದ ಪ್ರಮುಖ ಮೈಲಿಗಲ್ಲುಗಳು:
2010: ಅಹಮದಾಬಾದ್ನಲ್ಲಿ ಭಾರತದ ವಿರುದ್ಧ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೇ 115 ರನ್ ಗಳಿಸಿ, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಕೆಲವೇ ನ್ಯೂಜಿಲೆಂಡ್ ಆಟಗಾರರ ಪಟ್ಟಿಗೆ ಸೇರಿದರು.
2015: ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ‘ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಇನ್ ದಿ ವರ್ಲ್ಡ್’ ಪ್ರಶಸ್ತಿ ಪಡೆದರು.
2015-16, 2016-17, 2019, 2020: ನ್ಯೂಜಿಲೆಂಡ್ ಕ್ರಿಕೆಟ್ನ ಅತ್ಯುನ್ನತ ವೈಯಕ್ತಿಕ ಗೌರವವಾದ ‘ಸರ್ ರಿಚರ್ಡ್ ಹ್ಯಾಡ್ಲಿ ಪದಕ’ವನ್ನು ನಾಲ್ಕು ಬಾರಿ ಗೆದ್ದರು.
2016: ಎಲ್ಲಾ ಪ್ರಮುಖ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಅತ್ಯಂತ ವೇಗವಾಗಿ ಮತ್ತು ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು.
2018: ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ (ಕ್ರೀಡಾ ಸ್ಫೂರ್ತಿ) ಪ್ರಶಸ್ತಿ ಲಭಿಸಿತು.
2019: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ 578 ರನ್ ಗಳಿಸಿ ನ್ಯೂಜಿಲೆಂಡ್ ಅನ್ನು ಫೈನಲ್ಗೆ ಮುನ್ನಡೆಸಿದ್ದಕ್ಕಾಗಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಪಡೆದರು.
2019: ಐಸಿಸಿ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು.
2021: ಸೌತಾಂಪ್ಟನ್ನಲ್ಲಿ ನಡೆದ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತವನ್ನು 8 ವಿಕೆಟ್ಗಳಿಂದ ಸೋಲಿಸಿ ನ್ಯೂಜಿಲೆಂಡ್ಗೆ ಐತಿಹಾಸಿಕ ಟ್ರೋಫಿ ಗೆದ್ದುಕೊಟ್ಟರು.
2021: ಯುಎಇಯಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ಗೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದರು.
2022: ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಸೆಮಿಫೈನಲ್ಗೆ ತಂಡವನ್ನು ತಲುಪಿಸಿದರು.
2023: ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದರು.
ಟೆಸ್ಟ್ ಕ್ರಿಕೆಟ್ (ಅಪ್ರತಿಮ ಕ್ಲಾಸಿಕ್ ಇನ್ನಿಂಗ್ಸ್):
ಸಾಂಪ್ರದಾಯಿಕ ಬಿಳಿ ಉಡುಪಿನ ಟೆಸ್ಟ್ ಕ್ರಿಕೆಟ್ನಲ್ಲಿ ವಿಲಿಯಮ್ಸನ್ ನ್ಯೂಜಿಲೆಂಡ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಪಂದ್ಯಗಳು: 110 (195 ಇನ್ನಿಂಗ್ಸ್ಗಳು)
ಒಟ್ಟು ರನ್: 9,519
ಅತ್ಯುತ್ತಮ ಸ್ಕೋರ್: 251 ರನ್
ಬ್ಯಾಟಿಂಗ್ ಸರಾಸರಿ (Average): 54.06
ಶತಕಗಳು: 33 | ಅರ್ಧಶತಕಗಳು: 38
1,063 ಫೋರ್ಗಳು ಮತ್ತು 28 ಸಿಕ್ಸರ್ಗಳು
ಕ್ಯಾಚ್ಗಳು: 96
ಏಕದಿನ ಕ್ರಿಕೆಟ್ (ಒನ್ ಡೇ – ನಿಯಮಿತ ಓವರ್ಗಳ ಪಂದ್ಯ):
ಏಕದಿನ ಕ್ರಿಕೆಟ್ನಲ್ಲಿ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿ ನಿಂತು ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಪಂದ್ಯಗಳು: 175 (167 ಇನ್ನಿಂಗ್ಸ್ಗಳು)
ಒಟ್ಟು ರನ್: 6,818
ಅತ್ಯುತ್ತಮ ಸ್ಕೋರ್: 148 ರನ್
ಬ್ಯಾಟಿಂಗ್ ಸರಾಸರಿ (Average): 48.69
ಸ್ಟ್ರೈಕ್ ರೇಟ್ (Strike Rate): 81.59
ಶತಕಗಳು: 13 | ಅರ್ಧಶತಕಗಳು: 47
607 ಫೋರ್ಗಳು ಮತ್ತು 60 ಸಿಕ್ಸರ್ಗಳು
ಕ್ಯಾಚ್ಗಳು: 76
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್
ಯಾವುದೇ ಅಬ್ಬರವಿಲ್ಲದೆ, ಶಾಸ್ತ್ರೀಯ ಶೈಲಿಯ ಬ್ಯಾಟಿಂಗ್ ಮೂಲಕವೇ ಟಿ20 ಮಾದರಿಯಲ್ಲೂ ವಿಲಿಯಮ್ಸನ್ ಯಶಸ್ಸು ಕಂಡಿದ್ದಾರೆ.
ಪಂದ್ಯಗಳು: 93 (90 ಇನ್ನಿಂಗ್ಸ್ಗಳು)
ಒಟ್ಟು ರನ್: 2,575
ಅತ್ಯುತ್ತಮ ಸ್ಕೋರ್: 95 ರನ್
ಬ್ಯಾಟಿಂಗ್ ಸರಾಸರಿ (Average): 33.44
ಸ್ಟ್ರೈಕ್ ರೇಟ್ (Strike Rate): 123.08
ಅರ್ಧಶತಕಗಳು: 18
245 ಫೋರ್ಗಳು ಮತ್ತು 58 ಸಿಕ್ಸರ್ಗಳು
ಕ್ಯಾಚ್ಗಳು: 45
ಒಟ್ಟಾರೆ ಸಾಧನೆ (Summary):
ಕೇನ್ ವಿಲಿಯಮ್ಸನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 378 ಪಂದ್ಯಗಳನ್ನು ಆಡಿದ್ದು, 48 ಶತಕಗಳು ಹಾಗೂ 103 ಅರ್ಧಶತಕಗಳ ನೆರವಿನಿಂದ ಒಟ್ಟು 18,912 ರನ್ಗಳನ್ನು ಗಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ