ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಸರ್ಕಾರಕ್ಕೆ 10 ಸಾವಿರಕ್ಕೂ ಅಧಿಕ ಪತ್ರ ಸಲ್ಲಿಕೆ

 ಶಿರಸಿ: ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಜನರು ಸೋಮವಾರ ಶಿರಸಿಯ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಸುಮಾರು 10 ಸಾವಿರಕ್ಕೂ ಅಧಿಕ ಪತ್ರಗಳನ್ನು ಸಲ್ಲಿಸಿದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಸೇರಿದ್ದ ಸಾವಿರಾರು ಜನರು ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿ  ಪತ್ರ ಚಳವಳಿಯಲ್ಲಿ ಭಾಗವಹಿಸಿ, ಪ್ರಸ್ತಾಪಿತ ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೆಜ್, ಸಾಗರದ ಅಣು ಸ್ಥಾವರ ವಿರೋಧಿಸಿ, ಪತ್ರ ಚಳವಳಿಯಲ್ಲಿ ಭಾಗವಹಿಸಿದ್ದರು.
ಸರ್ಕಾರವು ಪ್ರಸ್ತಾಪಿಸಿರುವ ನದಿ ತಿರುವು ಯೋಜನೆಗಳನ್ನು  ಕೈಬಿಡಬೇಕೆಂದು ಜಿಲ್ಲೆಯ ರೈತರು, ಮೀನುಗಾರರು, ವನವಾಸಿಗಳು ಹಾಗೂ ಎಲ್ಲ ನಾಗರಿಕರ ಪರವಾಗಿ ಈ ಮನವಿ ಮಾಡಿದ್ದೇವೆ. ಈಗಾಗಲೇ ಅನೇಕ ತಜ್ಞರು ಅಭಿಪ್ರಾಯ ನೀಡಿದ್ದು, ಪಟ್ಟಣದಹೊಳೆ, ಶಾಲ್ಮಲಾ ನದಿ ಮತ್ತು ಅವು ಸೇರುವ ಬೇಡ್ತಿ ನದಿ (ಗಂಗಾವಳಿ) ಪಶ್ಚಿಮಘಟ್ಟದ  ಅತ್ಯಂತ ಸೂಕ್ಷ್ಮಪರಿಸರದ ಪ್ರದೇಶವಾಗಿದೆ. ಈ ನದಿ ತಿರುವು ಯೋಜನೆಯಿಂದ ಇಲ್ಲಿನ ಜೀವ ವೈವಿಧ್ಯ, ನದಿತೀರದ ಅರಣ್ಯಗಳು ಹಾಗೂ ಕೃಷಿ ಭೂಮಿ ವ್ಯಾಪಕವಾಗಿ ನಾಶವಾಗುತ್ತವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನದಿಯ ಕೆಳಭಾಗದಲ್ಲಿ ನೀರಿನ ಹರಿವು ಕಡಿಮೆಯಾಗಿ ಕುಡಿಯುವ ಹಾಗೂ ಕೃಷಿನೀರಿನ ಕೊರತೆ ಉಂಟಾಗುತ್ತದೆ.  ಅಸಂಖ್ಯ ಜಲಚರಗಳು ನಾಶವಾಗುತ್ತವೆ.  ಭೂಕುಸಿತದಿಂದ ಅಪಾಯಕ್ಕೊಳಗಾಗಿರುವ ಪಶ್ಚಿಮ ಘಟ್ಟದ ಇಳಿಜಾರಾದ ಪ್ರದೇಶಗಳಲ್ಲಿ ಮತ್ತಷ್ಟು ಭೂಕುಸಿತಗಳು ಸಂಭವಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಇದರ ಬದಲಿಗೆ ಮಲೆನಾಡಿನ ಸಂರಕ್ಷಣೆಗೆ ಪೂರಕವಾಗಿ, ಸ್ಥಳೀಯರಿಗೆ ಕುಡಿಯುವ ಹಾಗೂ ಕೃಷಿ ನೀರು ಒದಗಿಸುವ  ಜಲ ನಿರ್ವಹಣಾ ಯೋಜನೆಗಳನ್ನು ಜಾರಿಗೆ ತನ್ನಿ. ಮಳೆನೀರು ಸಂಗ್ರಹಣೆ, ಸ್ಥಳೀಯ ಕೆರೆಗಳ ಪುನರುಜ್ಜೀವನ, ಜಲಾನಯನ ಪ್ರದೇಶ ಅಭಿವೃದ್ಧಿ ಮುಂತಾದ ಪರಿಸರಸ್ನೇಹಿ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಒತ್ತಾಯಿಸಿದರು.
ಪತ್ರ ಚಳವಳಿಯಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,  ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಜಿಲ್ಲೆಗೆ ಮಾರಕ ಯೋಜನೆಯಾಗಿದ್ದು, ಈಗಾಗಲೇ ಇದನ್ನು ವಿರೋಧಿಸಿ ಹೋರಾಟ ನಡೆಯುತ್ತಿದೆ. ಜಿಲ್ಲೆಯ ಜನರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ನದಿ ತಿರುವುದು ಯೋಜನೆ ಕೈಬಿಟ್ಟಿದ್ದೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೇಳುವವರೆಗೂ ನೆಮ್ಮದಿ ಇಲ್ಲ. ಗ್ರಾಮೀಣ ಜನರ ಜತೆ ನಗರದ ಜನತೆಯೂ ಹೋರಾಟಕ್ಕೆ ಕೈಜೋಡಿಸಬೇಕಿದೆ. ಮುಂಗಾರು ಕೈಕೊಟ್ಟ ಕಾರಣ ನದಿಗಳಲ್ಲಿ ನೀರು ಒಣಗಿದೆ‌‌. ಎಲ್ಲರೂ ಸಂಘಟನೆಗೆ ಬೆಂಬಲ ನೀಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿಯಾಗುತ್ತೇನೆ ಹಾಗೂ ಅಗತ್ಯ ಕಂಡರೆ ಸಂಸದರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಂಬಂಧಿಸಿದ ಸಚಿವರನ್ನು ಭೇಟಿಯಾಗ ಸಿದ್ಧ ಎಂದು ಹೇಳಿದರು.
ಅಘನಾಶಿನಿ-ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ,  25 ವರ್ಷದ ಹಿಂದೆ ಬೇಡ್ತಿ, ಅಘನಾಶಿನಿ ಅಣೆಕಟ್ಟು ವಿರೋಧಿ ಬೃಹತ್ ಪಾದಯಾತ್ರೆ ಮೂಲಕ ಯೋಜನೆ ನಿಲ್ಲಿಸಿದ್ದೇವೆ. ನೀರಿನ ಲಭ್ಯತೆ, ಪ್ರಯೋಜನ, ಕಟ್ಟು ಕಥೆ ಸೇರಿದ ಡಿಪಿಆರ್ ರದ್ದು ಮಾಡುವ ವರೆಗೂ  ಹೋರಾಟ ಮಾಡಬೇಕಿದೆ. ಈ ಯೋಜನೆ ಜಾರಿಯಾದರೆ ಘಟ್ಟದ ಮೇಲಿನ ಮತ್ತು ಘಟ್ಟದ ಕೆಳಗಿನ ಸುಮಾರು 3 ಲಕ್ಷ ಜನರು ನಿರಾಶ್ರಿತರಾಗಲಿದ್ದಾರೆ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್, ಸಿಗಂದೂರು ಬಳಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ. ಕೆಡಿಪಿ ಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ. ಯೋಜನೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಇನ್ನೊಮ್ಮೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರವನ್ನು ಭೇಟಿಯಾಗಿ ಯೋಜನೆ ಕೈಬಿಡುವಂತೆ ಆಗ್ರಹ ಮಾಡಲಾಗುತ್ತದೆ. ಕಾನೂನು ಹೋರಾಟಕ್ಕೂ ಚಿಂತನೆ ನಡೆಸಿದ್ದೇವೆ ಎಂದರು.
ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ,.ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ,  ವೇದಾ ಹೆಗಡೆ ನೀರ್ನಳ್ಳಿ ಮೊದಲಾದವರು ಮಾತನಾಡಿದರು. ಪತ್ರ ಚಳವಳಿಯಲ್ಲಿ  ಸಾವಿರಾರು ಜನರು ಪಾಲ್ಗೊಂಡಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement