ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ‘ಐಎಸ್‌ಐ’ ಬೆಂಬಲಿತ ಉಗ್ರ ಜಾಲ ಭೇದಿಸಿದ ಪೊಲೀಸರು : 7 ಮಂದಿ ಕುಖ್ಯಾತರ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ವಲಯ) ಪ್ರದೇಶದಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ (ISI) ಬೆಂಬಲದೊಂದಿಗೆ ರೂಪಿಸಲಾಗಿದ್ದ ಬೃಹತ್ ಅಂತಾರಾಷ್ಟ್ರೀಯ ಉಗ್ರ-ಅಪರಾಧ ಜಾಲವನ್ನು ದೆಹಲಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್ ಕಮ್ ಉಗ್ರ ಶಹಜಾದ್ ಭಟ್ಟಿ ಮತ್ತು ಆತನ ಸಹಚರ ಅಜ್ಮಲ್ ಗುಜ್ಜರ್ ನಡೆಸುತ್ತಿದ್ದ ಈ ಜಾಲದ 7 ಮಂದಿ ಸಕ್ರಿಯ ಸದಸ್ಯರನ್ನು ದೆಹಲಿ ಪೊಲೀಸ್ ವಿಶೇಷ ಘಟಕದ (Special Cell) ಪೂರ್ವ ವಲಯದ ತಂಡವು ಬಂಧಿಸಿದೆ.
ಈ ಸಮಯೋಚಿತ ಕಾರ್ಯಾಚರಣೆಯಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯಬೇಕಿದ್ದ ಸರಣಿ ಭಯೋತ್ಪಾದನಾ ದಾಳಿಗಳು ಹಾಗೂ ಭಾರತದೊಳಗೆ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಭಾರಿ ಸಂಚು ಬಯಲಾಗಿದೆ.
ಪಾಕಿಸ್ತಾನದಿಂದಲೇ ಕರಾರುಬಾಕ್ ಸ್ಕೆಚ್:
ಬಂಧಿತ ಉಗ್ರರ ಮಾಡ್ಯೂಲ್ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ನೇರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತದಲ್ಲಿ ಭಯೋತ್ಪಾದನಾ ದಾಳಿಗಳನ್ನು ನಡೆಸುವುದು, ಕೋಮು ಸೌಹಾರ್ದತೆ ಕೆಡಿಸುವುದು, ಜನರಲ್ಲಿ ಭೀತಿ ಮೂಡಿಸುವುದು, ಶಸ್ತ್ರಾಸ್ತ್ರ ಮತ್ತು ಹೆರಾಯಿನ್‌ನಂತಹ ಡ್ರಗ್ಸ್‌ಗಳನ್ನು ಅಕ್ರಮವಾಗಿ ಸಾಗಿಸುವುದು ಮತ್ತು ದಾಳಿ ನಡೆಸಬೇಕಾದ ಪ್ರಮುಖ ಗುರಿಗಳ ಬಗ್ಗೆ ಮಾಹಿತಿ ಕಲೆಹಾಕುವುದು ಇವರ ಮುಖ್ಯ ಕೆಲಸವಾಗಿತ್ತು. ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಪಂಜಾಬ್ ಗಡಿಯೊಳಗೆ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ತರಿಸಿಕೊಳ್ಳುತ್ತಿದ್ದ ಈ ಜಾಲ, ನಂತರ ಅವುಗಳನ್ನು ದೆಹಲಿ-ಎನ್‌ಸಿಆರ್‌ನ ವಿವಿಧ ಭಾಗಗಳಿಗೆ ರವಾನಿಸುತ್ತಿತ್ತು.

ಧಾರ್ಮಿಕ ಮುಖಂಡರು, ಸಾರ್ವಜನಿಕ ಸ್ಥಳಗಳೇ ಇವರ ಟಾರ್ಗೆಟ್:
ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಶಹಜಾದ್ ಭಟ್ಟಿ ಮತ್ತು ಅಜ್ಮಲ್ ಗುಜ್ಜರ್ ನಿರ್ದೇಶನದಂತೆ ಈ ಉಗ್ರರು ದೆಹಲಿಯ ಜನನಿಬಿಡ ಸಾರ್ವಜನಿಕ ಪ್ರದೇಶಗಳು, ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಪ್ರಸಿದ್ಧ ಧಾರ್ಮಿಕ ಮುಖಂಡರ ನೆಲೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಇವುಗಳ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಪಾಕಿಸ್ತಾನದಲ್ಲಿದ್ದ ತಮ್ಮ ಹ್ಯಾಂಡ್ಲರ್‌ಗಳಿಗೆ ಕಳುಹಿಸಿಕೊಟ್ಟಿದ್ದರು. ರಾಜಧಾನಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿ, ಕೋಮು ಸಂಘರ್ಷ ಉಂಟುಮಾಡುವುದೇ ಇವರ ಮೂಲ ಉದ್ದೇಶವಾಗಿತ್ತು. ಖಚಿತ ಮಾಹಿತಿ ಮೇರೆಗೆ ತಾಂತ್ರಿಕ ಕಣ್ಗಾವಲು, ಮೊಬೈಲ್ ಡೇಟಾ ವಿಶ್ಲೇಷಣೆ ಮತ್ತು ತಳಮಟ್ಟದ ತನಿಖೆ ನಡೆಸಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಗಾಜಿಯಾಬಾದ್‌ನ ಲೋನಿ ನಿವಾಸಿ ಅನಸ್ ಅಲಿಯಾಸ್ ಅನಸ್ ತ್ಯಾಗಿ (26) ಎಂಬಾತ ಮೇಲೆ ಮೂರು ಕ್ರಿಮಿನಲ್ ಪ್ರಕರಣಗಳಿವೆ. ಮತ್ತು ನವೆಂಬರ್ 2025 ರಿಂದ ಪಾಕಿಸ್ತಾನದಲ್ಲಿರುವ ಅಜ್ಮಲ್ ಗುಜ್ಜರ್ ಮತ್ತು ಶಹಜಾದ್ ಭಟ್ಟಿ ಜೊತೆಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದ. ಗಾಜಿಯಾಬಾದ್‌ನ ಲೋನಿ ನಿವಾಸಿಯಾದ ಮೋಹಿತ್ ಅಲಿಯಾಸ್ ಯೋಗಿ (26) ಅಜ್ಮಲ್ ಗುಜ್ಜರ್ ಜೊತೆ ನೇರ ಸಂಪರ್ಕದಲ್ಲಿದ್ದ. ಗಾಜಿಯಾಬಾದ್‌ನ ಟೆಕ್ನೋ ಸಿಟಿ ನಿವಾಸಿ ದೀಪಕ ಅಲಿಯಾಸ್ ದೀಪಕ ಅಗ್ರೋಲಾ ಮೇಲೆ ಕೊಲೆ, ದರೋಡೆ, ಕೊಲೆ ಯತ್ನ ಮತ್ತು ಗ್ಯಾಂಗ್‌ಸ್ಟರ್ಸ್ ಕಾಯ್ದೆಯಡಿಯಲ್ಲಿ ನಿಬಂಧನೆಗಳು ಸೇರಿದಂತೆ 23 ಪ್ರಕರಣಗಳಿವೆ. ಲೋನಿ ನಿವಾಸಿ ಆರಿಫ್ ಅಲಿಯಾಸ್ ಪ್ರಧಾನ್ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣಗಳಿವೆ.
ಪಂಜಾಬ್‌ನ ಫತೇಘರ್ ಸಾಹಿಬ್ ನಿವಾಸಿ ಕರಣವೀರ ಸಿಂಗ್ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಟೆಕ್ನೋ ಸಿಟಿ ನಿವಾಸಿ ಜತನ್ ಮೇಲೆ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಗಾಜಿಯಾಬಾದ್‌ನ ಲೋನಿ ನಿವಾಸಿ ಸಬೀರ್ ಮತ್ತೊಬ್ಬ ಬಂಧಿತನಾಗಿದ್ದಾನೆ.

ಪ್ರಮುಖ ಸುದ್ದಿ :-   ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

ವಶಪಡಿಸಿಕೊಂಡ ಮಾರಕಾಸ್ತ್ರಗಳು:
ಬಂಧಿತರಿಂದ ಪೊಲೀಸರು 5 ಅತ್ಯಾಧುನಿಕ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ಗಳು, 41 ಜೀವಂತ ಗುಂಡುಗಳು, 7 ಮೊಬೈಲ್ ಫೋನ್‌ಗಳು (ಶಹಜಾದ್ ಭಟ್ಟಿ ಮತ್ತು ಅಜ್ಮಲ್ ಗುಜ್ಜರ್ ಜೊತೆಗಿನ ಚಾಟ್‌ಗಳು ಮತ್ತು ಧ್ವನಿ ಸಂದೇಶಗಳನ್ನು ಒಳಗೊಂಡಿವೆ), ಒಂದು ಸ್ಕಾರ್ಪಿಯೋ ಕಾರು ಮತ್ತು ಶಸ್ತ್ರಾಸ್ತ್ರ-ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ವರ್ಗಾಯಿಸಲು ಬಳಸುತ್ತಿದ್ದ ಹಲವು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರಿಗೆ ಆಮಿಷ:
ಪಾಕಿಸ್ತಾನ ಮೂಲದ ಉಗ್ರರು ಭಾರತೀಯ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುವ ಆಮಿಷ ಮತ್ತು ಭಾರಿ ಹಣದ ಆಫರ್ ನೀಡಿ ಯುವಕರನ್ನು ಅಪರಾಧ ಲೋಕಕ್ಕೆ ಎಳೆಯುತ್ತಿದ್ದರು. ಮೊದಲು ಸಾಮಾನ್ಯ ಅಪರಾಧಗಳಿಗೆ ಬಳಸಿಕೊಳ್ಳುತ್ತಿದ್ದ ಯುವಕರನ್ನು, ನಂತರ ಶಸ್ತ್ರಾಸ್ತ್ರ ಸರಬರಾಜು, ಡ್ರಗ್ಸ್ ಸ್ಮಗ್ಲಿಂಗ್ ಮತ್ತು ದೇಶದ್ರೋಹಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.

ಯಮುನಾ ವಿಹಾರ್‌ನ ಭಾಗೀರಥಿ ನೀರು ಸಂಸ್ಕರಣಾ ಘಟಕದ ಬಳಿ ಮೋಹಿತ್ ಸಿಕ್ಕಿಬಿದ್ದಾಗ ಈ ಜಾಲದ ಮೊದಲ ಸುಳಿವು ಸಿಕ್ಕಿತು. ಆತನ ಬಳಿಯಿದ್ದ ಪಿಸ್ತೂಲ್ ಮತ್ತು ಮೊಬೈಲ್ ತನಿಖೆ ನಡೆಸಿದಾಗ ಅಜ್ಮಲ್ ಗುಜ್ಜರ್ ಜೊತೆಗಿನ ಸಂಪರ್ಕ ಬಯಲಿಗೆ ಬಂತು. ನಂತರ ವಿಚಾರಣೆಯ ವೇಳೆ, ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಂಜಾಬ್‌ಗೆ ಬರುತ್ತಿದ್ದ ಶಸ್ತ್ರಾಸ್ತ್ರಗಳನ್ನು ರಿಸೀವ್ ಮಾಡಲು ಅನಾಸ್ ಮತ್ತು ಕರಣವೀರ ಸಿಂಗ್ ಅಲ್ಲಿಗೆ ಹೋಗುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಆಘಾತಕಾರಿ ಸಂಗತಿಯೆಂದರೆ, ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ ಅಗ್ರೋಲಾ ಜೈಲಿನ ಒಳಗಿದ್ದೂ ಮೊಬೈಲ್ ಬಳಸಿ ಅನಾಸ್ ಮೂಲಕ ಅಜ್ಮಲ್ ಗುಜ್ಜರ್‌ನನ್ನು ಸಂಪರ್ಕಿಸಿದ್ದಲ್ಲದೆ, ಶಸ್ತ್ರಾಸ್ತ್ರಗಳ ಸಾಗಣೆಗೆ ಜೈಲಿನಿಂದಲೇ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಆರಿಫ್, ಯುಪಿಐ (UPI) ಖಾತೆಗಳ ಮೂಲಕ ಸುಮಾರು 1 ಲಕ್ಷ ರೂ. ಪಾವತಿಸಿ ಅಜ್ಮಲ್‌ನಿಂದ ಅತ್ಯಾಧುನಿಕ ಜಿಗಾನಾ (Jigana) ಪಿಸ್ತೂಲ್ ಖರೀದಿಸಿದ್ದ. ಇತ್ತೀಚೆಗೆ ಈ ಜಾಲವು ಹೆರಾಯಿನ್ ಮತ್ತು ‘ಚಿಟ್ಟಾ’ ಡ್ರಗ್ಸ್ ದಂಧೆಗೂ ವಿಸ್ತರಿಸಿತ್ತು.
ಪ್ರಸ್ತುತ ಈ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳು, ಡ್ರಗ್ಸ್ ನೆಟ್‌ವರ್ಕ್ ಮತ್ತು ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement