
ಬೆಂಗಳೂರು: ರಾಜ್ಯಕ್ಕೆ ಜೂನ್ 4 ರಂದೇ ಮುಂಗಾರು ಪ್ರವೇಶಿಸಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬರಗಾಲದ ಆತಂಕ ಶುರುವಾಗಿದೆ.
ಜೂನ್ 4 ರಿಂದ 15 ರವರೆಗಿನ ಅವಧಿಯಲ್ಲಿ ಕೇವಲ 19 ಮಿ.ಮೀ ಮಳೆಯಾಗಿದ್ದು, ವಾಡಿಕೆಯ 53 ಮಿ.ಮೀ ಗೆ ಹೋಲಿಸಿದರೆ ಇದು ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಜಾಗತಿಕ ಹವಾಮಾನ ಬದಲಾವಣೆ ಹಾಗೂ ‘ಎಲ್ ನಿನೋ’ ಪರಿಣಾಮದಿಂದಾಗಿ ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಿರುವುದು ಈ ಮಳೆ ಅಭಾವಕ್ಕೆ ಮುಖ್ಯ ಕಾರಣ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ರಾಜ್ಯದ ಪ್ರಮುಖ ಜಲಮೂಲಗಳಾಗಿರುವ ಕರಾವಳಿ, ಮಲೆನಾಡು ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲೇ ಈವರೆಗೆ ಭಾರಿ ಮಳೆಯ ಕೊರತೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ನೀಡಿದ ಮಾಹಿತಿಯಂತೆ ಜೂನ್ 1ರಿಂದ ಜೂನ್ 18ರ ವರೆಗೆ ರಾಜ್ಯದ 12 ಜಿಲ್ಲೆಗಳಲ್ಲಿ ತೀವ್ರ ಮಳೆಯ ಕೊರತೆ ಎದುರಾಗಿದೆ. ಎರಡು ಜಿಲ್ಲೆಗಳಲ್ಲಿ ಅತಿ ತೀವ್ರ ಮಳೆಯ ಕೊರತೆ ಎದುರಾಗಿದೆ. 12 ಜಿಲ್ಲೆಗಳಲ್ಲಿ ಬಹುತೇಕ ವಾಡಿಕೆಯಷ್ಟು ಮಳೆಯಾಗಿದ್ದರೆ 5 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಕರಾವಳಿ ಭಾಗ: ವಾಡಿಕೆಯಂತೆ 312.6 ಮಿ.ಮೀ ಮಳೆಯಾಗಬೇಕಿದ್ದ ಜಾಗದಲ್ಲಿ ಕೇವಲ 184.7 ಮಿ.ಮೀ ಮಳೆಯಾಗಿದ್ದು, ಶೇ. 41 ರಷ್ಟು ಭಾರಿ ಕೊರತೆ ಎದುರಾಗಿದೆ. ಇದು ಮೀನುಗಾರರು ಹಾಗೂ ತೀರ ಪ್ರದೇಶದ ಕೃಷಿಕರ ನಿದ್ದೆಗೆಡಿಸಿದೆ.
ಕಾವೇರಿ ಜಲಾನಯನ ಪ್ರದೇಶ: ಇಲ್ಲಿಯೂ ಸಹ ಶೇ. 36 ರಷ್ಟು ಮಳೆ ಕೊರತೆ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರು ಹಾಗೂ ಜಲಾಶಯಗಳ ಸಂಗ್ರಹ ಮಟ್ಟದ ಮೇಲೆ ಇದು ನೇರ ಪರಿಣಾಮ ಬೀರಲಿದೆ.
ನದಿಗಳ ತವರು ‘ಮಲೆನಾಡಿಗೂ’ ತಪ್ಪದ ಸಂಕಷ್ಟ:
ರಾಜ್ಯದ ಜೀವನಾಡಿ ನದಿಗಳ ಉಗಮ ಸ್ಥಾನವಾದ ಮಲೆನಾಡಿನಲ್ಲಿ 132 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಸದ್ಯ 84.8 ಮಿ.ಮೀ ಮಾತ್ರ ಮಳೆಯಾಗಿದೆ. ಇದರಿಂದಾಗಿ ಜಲಾಶಯಗಳು ಹಾಗೂ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಕುಸಿಯಲಿದ್ದು, ಮುಂದಿನ ತಿಂಗಳುಗಳಲ್ಲಿ ಇದರ ತೀವ್ರತೆ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.
ಒಳನಾಡಿನಲ್ಲಿ ಸದ್ಯಕ್ಕೆ ಸಮಧಾನಕರ ಸ್ಥಿತಿ
ಕರಾವಳಿ ಮತ್ತು ಮಲೆನಾಡಿಗೆ ಹೋಲಿಸಿದರೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಪರಿಸ್ಥಿತಿ ಸದ್ಯಕ್ಕೆ ಬಹುತೇಕ ವಾಡಿಕೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 41.8 ಮಿ.ಮೀ ವಾಡಿಕೆ ಮಳೆಗೆ 40.8 ಮಿ.ಮೀ ಮಳೆಯಾಗಿದ್ದು, ಅತ್ಯಲ್ಪ ಕೊರತೆ ಕಂಡುಬಂದಿದೆ. ಇನ್ನು ಉತ್ತರ ಒಳನಾಡಿನಲ್ಲಿ 51.5 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು, 51.2 ಮಿ.ಮೀ ಮಳೆಯಾಗುವ ಮೂಲಕ ಬಹುತೇಕ ಸಹಜ ಸ್ಥಿತಿ ಮುಂದುವರಿದಿದೆ.
ಒಟ್ಟಾರೆಯಾಗಿ ಇಡೀ ರಾಜ್ಯದಲ್ಲಿ ಈ ಅವಧಿಗೆ 85.5 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 67.7 ಮಿ.ಮೀ ಮಳೆಯಾಗಿದ್ದು, ಸಮಗ್ರ ಕರ್ನಾಟಕದಲ್ಲಿ ಶೇ. 21 ರಷ್ಟು ಒಟ್ಟಾರೆ ಕೊರತೆ ಎದ್ದು ಕಾಣುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ