1917ರಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ₹35 ಸಾವಿರ ಸಾಲ ನೀಡಿದ್ದ ಮಧ್ಯಪ್ರದೇಶ ಕುಟುಂಬ :109 ವರ್ಷದ ಹಿಂದಿನ ಸಾಲಕ್ಕೆ ಬ್ರಿಟನ್‌ನಿಂದ ಬಂತು ಸ್ಪಂದನೆ !

ಸೀಹೋರ್: 109 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರದ ಇಂಡಿಯನ್ ವಾರ್ ಲೋನ್ ಯೋಜನೆಯಲ್ಲಿ ₹35,000 ಹೂಡಿಕೆ ಮಾಡಿದ್ದ ಕುಟುಂಬವೊಂದರ ಕೈಯಲ್ಲಿ ಆ ವ್ಯವಹಾರದ ಮೂಲ ಪ್ರಮಾಣಪತ್ರ ಇಂದಿಗೂ ಉಳಿದಿದೆ. ಆದರೆ ನಂತರದ ಆ ಹಣದ ವಿಚಾರ ಏನಾಯಿತು ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಮಧ್ಯಪ್ರದೇಶದ ಸೀಹೋರ್ ನಿವಾಸಿ 63 ವರ್ಷದ ವಿವೇಕ ರುಥಿಯಾ ಅವರು ತಮ್ಮ ತಾತ ಸೇಠ್ ಜುಮ್ಮಾ ಲಾಲ ರುಥಿಯಾ ಅವರ ಹೆಸರಿನಲ್ಲಿರುವ ಈ ಐತಿಹಾಸಿಕ ದಾಖಲೆಗಳನ್ನು ಆಧಾರವಾಗಿಸಿಕೊಂಡು ಬ್ರಿಟನ್‌ನ ಡೆಬ್ಟ್‌ ಮ್ಯಾನೇಜ್‌ಮೆಂಟ್ ಆಫೀಸ್‌ (DMO) ಅನ್ನು ಸಂಪರ್ಕಿಸಿದ್ದು, ಇದೀಗ ಅಲ್ಲಿಂದ ಪ್ರತಿಕ್ರಿಯೆಯೂ ಬಂದಿದೆ.
ರುಥಿಯಾ ಕುಟುಂಬದ ಪ್ರಶ್ನೆ ಈಗ ಕೇವಲ ಹಣವನ್ನು ಮರಳಿ ಪಡೆಯುವುದಕ್ಕೆ ಸೀಮಿತವಾಗಿಲ್ಲ. 1917ರಲ್ಲಿ ನೀಡಿದ್ದ ₹35,000 ಸಾಲ ಮರುಪಾವತಿಯಾಗಿತ್ತೇ? ಆಗಿದ್ದರೆ ಯಾವಾಗ, ಹೇಗೆ ಮತ್ತು ಯಾರಿಗೆ ಪಾವತಿಸಲಾಯಿತು? ಅಥವಾ ಬೇರೆ ರೀತಿಯಲ್ಲಿ ಇತ್ಯರ್ಥಪಡಿಸಲಾಯಿತೇ? ಈ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಬ್ರಿಟಿಷ್ ಸರ್ಕಾರದ ಬಳಿ ಇನ್ನೂ ಇವೆಯೇ? ಎಂಬುದನ್ನು ಕುಟುಂಬ ತಿಳಿದುಕೊಳ್ಳಲು ಬಯಸಿದೆ.
1917ರಲ್ಲಿ ಶೇ.5.5ರ ಬಡ್ಡಿಗೆ ಹೂಡಿಕೆ
ದಾಖಲೆಗಳ ಪ್ರಕಾರ, 1917ರ ಜೂನ್ 4ರಂದು ಸೇಠ್ ಜುಮ್ಮಾ ಲಾಲ ಅವರು ಬ್ರಿಟಿಷ್ ಸರ್ಕಾರದ ಇಂಡಿಯನ್ ವಾರ್ ಲೋನ್ ಯೋಜನೆಯಲ್ಲಿ ₹35,000 ಹೂಡಿಕೆ ಮಾಡಿದ್ದರು. ಈ ಸಾಲಕ್ಕೆ ವಾರ್ಷಿಕ ಶೇ.5.5ರಷ್ಟು ಬಡ್ಡಿ ನಿಗದಿಪಡಿಸಲಾಗಿತ್ತು. ಅಂದಿನ ಭೋಪಾಲ್ ರಾಜಕೀಯ ಏಜೆಂಟ್ ಡಬ್ಲ್ಯೂ.ಎಸ್. ಡೇವಿಸ್ ಈ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು.
ಸಾಲ ನೀಡಿದ ಸುಮಾರು 20 ವರ್ಷಗಳ ಬಳಿಕ, 1937ರಲ್ಲಿ ಸೇಠ್ ಜುಮ್ಮಾ ಲಾಲ ನಿಧನರಾದರು. ಕಾಲಕ್ರಮೇಣ ಈ ಹಳೆಯ ಹೂಡಿಕೆಯ ವಿಚಾರ ಕುಟುಂಬದ ನೆನಪಿನಿಂದಲೂ ಮರೆಯಾಗಿತ್ತು. ಆದರೆ ಇತ್ತೀಚೆಗೆ ಜುಮ್ಮಾ ಲಾಲ ಅವರ ಮಗ ನಿಧನರಾದ ಬಳಿಕ ಕುಟುಂಬವು ಹಳೆಯ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಪತ್ರಗಳು, ಉಯಿಲು ಮತ್ತು ಯುದ್ಧ ಸಾಲದ ಪ್ರಮಾಣಪತ್ರ ಪತ್ತೆಯಾಯಿತು. ಇದರಿಂದ 109 ವರ್ಷಗಳ ಹಿಂದಿನ ಈ  ಇಂಡಿಯನ್ ವಾರ್ ಲೋನ್ ಯೋಜನೆಯ ಹಣಕಾಸು ವ್ಯವಹಾರದ ಕುರಿತು ಕುಟುಂಬದಲ್ಲಿ ಮತ್ತೆ ಕುತೂಹಲ ಮೂಡಿತು.
2026ರ ಫೆಬ್ರವರಿಯಲ್ಲಿ ನೋಟಿಸ್
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಜುಮ್ಮಾ ಲಾಲ ಅವರ ಮೊಮ್ಮಗ ವಿವೇಕ್ ರುಥಿಯಾ ಅವರು, ಈ ಸಾಲದ ಮರುಪಾವತಿ ಕುರಿತು ಸ್ಪಷ್ಟತೆ ನೀಡುವಂತೆ ತಮ್ಮ ವಕೀಲರ ಮೂಲಕ 2026ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರಕ್ಕೆ ಕಾನೂನು ನೋಟಿಸ್ ಕಳುಹಿಸಿದರು.
ಕುಟುಂಬದ ವಾದದ ಪ್ರಕಾರ, ಇದು ಕೇವಲ ಹಣಕಾಸಿನ ವಿಚಾರವಲ್ಲ; ಐತಿಹಾಸಿಕ ಜವಾಬ್ದಾರಿ ಮತ್ತು ಗೌರವದ ಪ್ರಶ್ನೆಯೂ ಹೌದು. ಬ್ರಿಟಿಷ್ ಸರ್ಕಾರ ಈ ಸಾಲವನ್ನು ಈಗಾಗಲೇ ಮರುಪಾವತಿಸಿದ್ದರೆ ಅದರ ದಾಖಲೆಗಳನ್ನು ತೋರಿಸಬೇಕು. ಮರುಪಾವತಿಯಾಗಿಲ್ಲವೆಂದಾದರೆ, ಅದಕ್ಕೆ ಸಂಬಂಧಿಸಿದ ಹಕ್ಕು ಮತ್ತು ಬಾಧ್ಯತೆಗಳ ಕುರಿತು ನ್ಯಾಯಸಮ್ಮತ ಪರಿಹಾರ ದೊರೆಯಬೇಕು ಎಂಬುದು ಕುಟುಂಬದ ಒತ್ತಾಯ.
ಆದರೆ ಸಾಲ ಮರುಪಾವತಿಯಾಗಿದೆಯೇ ಇಲ್ಲವೇ ಎಂಬುದನ್ನು ಕೇವಲ ಪ್ರಮಾಣಪತ್ರವೊಂದರ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಒಂದು ವೇಳೆ ಅಧಿಕೃತ ದಾಖಲೆಗಳಲ್ಲಿ ಮರುಪಾವತಿ ನಡೆದಿರುವುದು ಕಂಡುಬಂದರೆ, ಯಾವಾಗ ಮತ್ತು ಯಾವ ರೀತಿಯಲ್ಲಿ ಹಣ ಪಾವತಿಸಲಾಯಿತು ಎಂಬ ಸಂಪೂರ್ಣ ವಿವರ ತಿಳಿದುಕೊಳ್ಳುವುದು ಕುಟುಂಬದ ಉದ್ದೇಶವಾಗಿದೆ. ಮರುಪಾವತಿಯ ದಾಖಲೆಗಳು ಪತ್ತೆಯಾಗದಿದ್ದರೆ, ಈ ಸಾಲಕ್ಕೆ ಸಂಬಂಧಿಸಿದ ಯಾವುದೇ ಕಾನೂನು ಬಾಧ್ಯತೆ ಇಂದಿಗೂ ಉಳಿದಿದೆಯೇ ಎಂಬುದನ್ನು ಸಂಬಂಧಿತ ಕಾನೂನು ಚೌಕಟ್ಟಿನಡಿ ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ.
ಬ್ರಿಟನ್‌ನ ಐತಿಹಾಸಿಕ ಯುದ್ಧ ಸಾಲದ ಹಿನ್ನೆಲೆ
ರುಥಿಯಾ ಕುಟುಂಬದ ಬೇಡಿಕೆಯನ್ನು ಬ್ರಿಟನ್‌ನ ಪ್ರಥಮ ವಿಶ್ವಯುದ್ಧದ ಕಾಲದ ಸರ್ಕಾರಿ ಸಾಲದ ಇತಿಹಾಸದ ಹಿನ್ನೆಲೆಯಲ್ಲಿ ನೋಡಬಹುದಾಗಿದೆ.
ಪ್ರಥಮ ವಿಶ್ವಯುದ್ಧ ಮತ್ತು ಅದರ ನಂತರದ ಕೆಲವು ಬಾಧ್ಯತೆಗಳಿಗೆ ಸಂಬಂಧಿಸಿದ ವಾರ್‌ ಲೋನ್‌ ಬಾಂಡ್ಸ್‌ (War Loan bonds‌)ಗಳಲ್ಲಿ ಸುಮಾರು £1.9 ಬಿಲಿಯನ್ ಮೊತ್ತವನ್ನು ಬ್ರಿಟಿಷ್ ಸರ್ಕಾರ 2015ರಲ್ಲಿ ಮರುಪಾವತಿಸಿತ್ತು. ಇದರಿಂದ ಆ ಐತಿಹಾಸಿಕ ಸರ್ಕಾರಿ ಸಾಲದ ಪ್ರಮುಖ ಕೆಟಗರಿಗೆ ಅಂತ್ಯ ಹಾಡಿತ್ತು.
ಅದರಂತೆ, ರುಥಿಯಾ ಕುಟುಂಬದ 1917ರ ಇಂಡಿಯನ್‌ ವಾರ್‌ ಲೋನ್‌ (Indian War Loan)ಪ್ರಮಾಣಪತ್ರದಲ್ಲಿರುವ ₹35,000 ಕೂಡ ಇಂದಿಗೂ ಬಾಕಿಯಿದೆ ಅಥವಾ ಮರುಪಾವತಿಯಾಗಿಲ್ಲ ಎಂದು ತಕ್ಷಣವೇ ನಿರ್ಧರಿಸಲು ಸಾಧ್ಯವಿಲ್ಲ.ಇದಕ್ಕಾಗಿ ಮೂಲ ಪ್ರಮಾಣಪತ್ರದಲ್ಲಿರುವ ಷರತ್ತುಗಳು, 1917ರ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಪಾವತಿ ಅಥವಾ ಮರುಪಾವತಿಯ ದಾಖಲೆಗಳು ಹಾಗೂ ಬ್ರಿಟಿಷ್ ಸರ್ಕಾರದ ಐತಿಹಾಸಿಕ ಹಣಕಾಸು ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ.
ದಾಖಲೆಗಳನ್ನು ಕಳುಹಿಸುವಂತೆ ಡಿಎಂಒ ಸೂಚನೆ
ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರದ ಡೆಬ್ಟ್‌ ಮ್ಯಾನೇಜ್‌ಮೆಂಟ್ ಆಫೀಸ್ (DMO) ರುಥಿಯಾ ಕುಟುಂಬದ ಮನವಿಗೆ ಸ್ಪಂದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಲು ಮೂಲ ಪತ್ರಗಳ ಡಿಜಿಟಲ್ ಅಥವಾ ಭೌತಿಕ ಪ್ರತಿಗಳನ್ನು ಸಲ್ಲಿಸುವಂತೆ ಕುಟುಂಬದ ವಕೀಲರನ್ನು ಕೋರಲಾಗಿದೆ.
ಹೀಗಾಗಿ, 109 ವರ್ಷಗಳ ಹಿಂದೆ ನೀಡಲಾಗಿದ್ದ ₹35,000ದ ಹಣದ ನಿಜವಾದ ಗತಿ ಏನಾಯಿತು ಎಂಬುದನ್ನು ಪತ್ತೆಹಚ್ಚುವ ರುಥಿಯಾ ಕುಟುಂಬದ ಪ್ರಯತ್ನ ಇದೀಗ ಅಧಿಕೃತ ದಾಖಲೆಗಳ ಪರಿಶೀಲನೆಯ ಹಂತಕ್ಕೆ ಬಂದಿದೆ. ಒಂದು ಶತಮಾನದ ಹಿಂದಿನ ಈ ಸಾಲದ ಪ್ರಮಾಣಪತ್ರದ ಕಥೆಗೆ ಉತ್ತರ ಸಿಗುವುದೇ ಎಂಬುದು ಮುಂದಿನ ದಾಖಲೆ ಪರಿಶೀಲನೆಯ ಮೇಲೆ ಅವಲಂಬಿತವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement