ಅಮೋನಿಯಾ ಅನಿಲ ಸೋರಿಕೆ : 7 ಕಾರ್ಮಿಕರ ಸಾವು, 67 ಜನರು ಆಸ್ಪತ್ರೆಗೆ ದಾಖಲು

ಚೆನ್ನೈ : ತಮಿಳುನಾಡಿನ ಪೆರಿಯಪಾಳ್ಯಂ ಬಳಿಯ ಮಂಜಂಗಾರಣೈ (ಕಣ್ಣಿಗೈಪೇರ್ ಗ್ರಾಮ)ನಲ್ಲಿರುವ ಸೀಫುಡ್ (ಸಮುದ್ರ ಆಹಾರ) ಸಂಸ್ಕರಣಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಅಮೋನಿಯಾ ಅನಿಲ ಸೋರಿಕೆ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 67 ಕಾರ್ಮಿಕರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ ಸೋರಿಕೆಯ ವಿಷಯ ತಿಳಿಯುತ್ತಿದ್ದಂತೆ ತಿರುವಳ್ಳೂರು ಜಿಲ್ಲಾಧಿಕಾರಿ ಕಚೇರಿಯು ಅರಕ್ಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 4ನೇ ಬೆಟಾಲಿಯನ್ ಪ್ರಧಾನ ಕಚೇರಿಗೆ ಮಾಹಿತಿ ನೀಡಿತು. ಎನ್‌ಡಿಆರ್‌ಎಫ್‌ನ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (CBRN) ರಕ್ಷಣಾ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ವಿಶೇಷ ತಂಡವನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು. ಚೆನ್ನೈನಿಂದ ಆಗಮಿಸಿದ 30 ಸಿಬ್ಬಂದಿಗಳ ಈ ವಿಶೇಷ ತಂಡವು ವೈಯಕ್ತಿಕ ರಕ್ಷಣಾ ಸಾಧನಗಳು (PPE), ಅನಿಲ ಪತ್ತೆ ಹಚ್ಚುವ ಉಪಕರಣಗಳು ಮತ್ತು CBRN ರಕ್ಷಣಾ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.
ಘಟನೆಯ ಕುರಿತು ಮಾಹಿತಿ ನೀಡಿರುವ ತಿರುವಳ್ಳೂರು ಜಿಲ್ಲಾಧಿಕಾರಿ ಎಸ್. ಕವಿತಾ, “ಬಾಧಿತ 67 ಕಾರ್ಮಿಕರನ್ನು ತಕ್ಷಣವೇ ಸ್ಥಳೀಯ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 46 ಜನರಿಗೆ ವೆಲ್ಸ್ ಆಸ್ಪತ್ರೆಯಲ್ಲಿ ಮತ್ತು 21 ಜನರಿಗೆ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಒಂಬತ್ತು ರೋಗಿಗಳನ್ನು ಆಂಬ್ಯುಲೆನ್ಸ್ ಮೂಲಕ ಚೆನ್ನೈನ ಸರ್ಕಾರಿ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ,” ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಖುದ್ದಾಗಿ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ. ಇನ್ನು ಗ್ಯಾಸ್ ಲೀಕ್ ಆಗಲು ಕಾರಣವಾದ ವಾಲ್ವ್ ವೈಫಲ್ಯದ ನಿಖರ ಕಾರಣ ಮತ್ತು ರಫ್ತು ಘಟಕದಲ್ಲಿ ಸುರಕ್ಷತಾ ಲೋಪಗಳಿವೆಯೇ ಎಂಬುದರ ಕುರಿತು ಔಪಚಾರಿಕ ತನಿಖೆಗೆ ಆದೇಶಿಸಲಾಗಿದೆ.
ಮಹಿಳಾ ಕಾರ್ಮಿಕರೇ ಹೆಚ್ಚು:
ಖಾಸಗಿ ಆಸ್ಪತ್ರೆಯೊಂದರ ಹಿರಿಯ ವೈದ್ಯರು ರೋಗಿಗಳ ಪರಿಸ್ಥಿತಿಯ ಬಗ್ಗೆ ವಿವರಿಸಿ, “ನಮ್ಮ ಆಸ್ಪತ್ರೆಗೆ ಒಟ್ಟು 44 ರೋಗಿಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ 43 ಯುವತಿಯರು ಮತ್ತು ಒಬ್ಬ ಪುರುಷರಾಗಿದ್ದಾರೆ. ಇವರಲ್ಲಿ 15 ರಿಂದ 16 ರೋಗಿಗಳಿಗೆ ಇಂಟ್ಯೂಬೇಷನ್ (ಕೃತಕ ಉಸಿರಾಟ) ಮಾಡಲಾಗಿದ್ದು, 11 ರೋಗಿಗಳು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಬಾಧಿತ ಕಾರ್ಮಿಕರೆಲ್ಲರೂ 24 ರಿಂದ 25 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಅವರ ನಾಡಿಮಿಡಿತವನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ, ಆದರೆ ಅವರ ರಕ್ತದೊತ್ತಡ (ಬಿಪಿ) ಇನ್ನು ಅತ್ಯಂತ ಕಡಿಮೆಯಿದೆ. ಅವರು ವಯಸ್ಸಿನಲ್ಲಿ ಚಿಕ್ಕವರಾಗಿರುವುದರಿಂದ ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆ ನಮಗಿದೆ. ಉತ್ತಮ ಚಿಕಿತ್ಸೆಗಾಗಿ ನಾಲ್ಕೈದು ಗಂಭೀರ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ,” ಎಂದು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement