
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಧಾರಾಶಿವ್ ಕ್ಷೇತ್ರದ ಸಂಸದ ಓಮ್ರಾಜೆ ನಿಂಬಾಳ್ಕರ್ ಅವರು ಉದ್ಧವ್ ಬಣವನ್ನು ತೊರೆದು, ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ತಮ್ಮ ಗೋವರ್ಧನವಾಡಿಯ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ನಿಂಬಾಳ್ಕರ್, “ಇನ್ನು ಮುಂದೆ ತಾವು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನಾಯಕತ್ವದಲ್ಲಿ ಶಿವಸೇನೆಯ ಭಾಗವಾಗಿ ಕೆಲಸ ಮಾಡುವುದಾಗಿ” ಘೋಷಿಸಿದರು. ತಮ್ಮ ಲೋಕಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಬೆಂಬಲಿಗರ ಅಭಿಪ್ರಾಯಗಳನ್ನು ಪಡೆದ ನಂತರವೇ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
‘ಆಪರೇಷನ್ ಟೈಗರ್’
ಓಮ್ರಾಜೆ ನಿಂಬಾಳ್ಕರ್ ಅವರ ಈ ನಡೆ ಬೆನ್ನಲ್ಲೇ, ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ “ಆಪರೇಷನ್ ಟೈಗರ್” ಸದ್ದು ಮತ್ತೆ ಜೋರಾಗಿದೆ. ಶಿವಸೇನೆ (ಯುಬಿಟಿ) ಪಕ್ಷದ ಹಲವು ಸಂಸದರು ಶೀಘ್ರದಲ್ಲೇ ಉದ್ಧವ್ ಬಣಕ್ಕೆ ಕೈಕೊಟ್ಟು ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ ಎಂಬ ವದಂತಿಗಳಿಗೆ ಈಗ ಮತ್ತಷ್ಟು ರೆಕ್ಕೆಪುಕ್ಕೆ ಬಂದಂತಾಗಿದೆ.
ಲೋಕಸಭಾ ಸ್ಪೀಕರ್‌ಗೆ ಬಂಡಾಯ ಸಂಸದರ ಪತ್ರ:
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಉದ್ಧವ್ ಠಾಕ್ರೆ ಅವರ ಶಿವಸೇನೆಯ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ದೆಹಲಿಯಲ್ಲಿ ನಡೆದ ಸಂಸದೀಯ ಸಭೆಗೆ ಗೈರುಹಾಜರಾಗಿದ್ದರು.
ಅಷ್ಟೇ ಅಲ್ಲದೆ, ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಮಗೆ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ಪತ್ರ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಈ ಸಂಸದರು ಶೀಘ್ರದಲ್ಲೇ ಅಧಿಕೃತವಾಗಿ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳಲಿದ್ದಾರೆ. ಆ ಮೂಲಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದು ಉದ್ಧವ್ ಠಾಕ್ರೆ ಬಣವನ್ನು ಅಸ್ತಿತ್ವದ ಸಂಕಷ್ಟಕ್ಕೆ ದೂಡಿದ್ದು, ಕಾನೂನು ಹೋರಾಟದ ಎಚ್ಚರಿಕೆಗಳಿಗೂ ಕಾರಣವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ