ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ : ಸಿಎಂ ಯೋಗಿ ಆದಿತ್ಯನಾಥಗೆ ತನಿಖಾ ವರದಿ ಹಸ್ತಾಂತರಿಸಿದ ಎಸ್‌ಐಟಿ

 ಲಕ್ನೋ/ಅಯೋಧ್ಯೆ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆ ಹರಿದುಬರುತ್ತಿರುವ ಬೆನ್ನಲ್ಲೇ, ಕಾಣಿಕೆ ಹಣ ಮತ್ತು ಆಭರಣಗಳ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT)ವು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಎಸ್‌ಐಟಿ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕಡೆಗೆ ಎಲ್ಲರ ಕಣ್ಣು ನೆಟ್ಟಿದೆ.
ಶ್ರೀರಾಮ ಜನ್ಮಭೂಮಿ ಮಂದಿರ ಟ್ರಸ್ಟ್‌ನ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಮೂರು ಸದಸ್ಯರ ಎಸ್‌ಐಟಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಲಕ್ನೋ ವಿಭಾಗೀಯ ಆಯುಕ್ತ ವಿಜಯ ವಿಶ್ವಾಸ ಪಂತ್, ಐಜಿ (ರೇಂಜ್) ಕಿರಣ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಇದ್ದಾರೆ. ಸಮಿತಿಯು ಕೇವಲ 6 ದಿನಗಳ ಅವಧಿಯಲ್ಲಿ 60 ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ತನಿಖೆ ನಡೆಸಿದ್ದು, ಬರೋಬ್ಬರಿ 150 ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಎಸ್‌ಐಟಿ  ಪ್ರಾಥಮಿಕ ವರದಿಯನ್ನು ಹಸ್ತಾಂತರಿಸಿದೆ.
ಎಸ್‌ಐಟಿ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ರಾಮಮಂದಿರದ ಕಾಣಿಕೆ ನಿರ್ವಹಣೆಯಲ್ಲಿನ ಗಂಭೀರ ವ್ಯವಸ್ಥಿತ ಲೋಪದೋಷಗಳನ್ನು ಉಲ್ಲೇಖಿಸಲಾಗಿದೆ. ಕಾಣಿಕೆ ಪೆಟ್ಟಿಗೆಗಳಿಂದ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹೊರತೆಗೆಯುವ ಪ್ರಕ್ರಿಯೆ, ಅವುಗಳನ್ನು ಎಣಿಕಾ ಕೇಂದ್ರಕ್ಕೆ ಸಾಗಿಸುವ ವಿಧಾನ ಮತ್ತು ಎಣಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ದೋಷಗಳು ಕಂಡುಬಂದಿವೆ ಎಂದು ವರದಿ ಹೇಳಿದೆ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ತಕ್ಷಣವೇ ಪ್ರಮುಖ ಸುಧಾರಣೆಗಳು ಮತ್ತು ಕಟ್ಟುನಿಟ್ಟಿನ ಕಣ್ಗಾವಲು ಅಗತ್ಯವಿದೆ ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಕಾಣಿಕೆ ಹಣವನ್ನು ಬ್ಯಾಂಕ್‌ಗಳಿಗೆ ಸಾಗಿಸುವ ಯಾಂತ್ರಿಕ ವ್ಯವಸ್ಥೆಯಲ್ಲೂ ದೋಷಗಳಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ನಿಗದಿತ ನಿಯಮಗಳ ಪ್ರಕಾರ, ನಗದನ್ನು ‘ಡಬಲ್-ಲಾಕ್’ (ಎರಡು ಬೀಗಗಳ) ವ್ಯವಸ್ಥೆಯಲ್ಲಿ ಇಡಬೇಕು ಮತ್ತು ಅದರ ಎರಡು ಕೀಗಳನ್ನು ಇಬ್ಬರು ಪ್ರತ್ಯೇಕ ವ್ಯಕ್ತಿಗಳು ಹೊಂದಿರಬೇಕು. ಆದರೆ, ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಾಥಮಿಕ ವರದಿಯಲ್ಲಿ ಟ್ರಸ್ಟ್‌ನ ಯಾವುದೇ ಹಿರಿಯ ಪದಾಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಟ್ರಸ್ಟ್‌ನ ಕೆಲವು ಸಿಬ್ಬಂದಿ, ಎಸ್‌ಬಿಐ (SBI) ಬ್ಯಾಂಕ್ ಸಿಬ್ಬಂದಿ ಮತ್ತು ನಗದು ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಖಾಸಗಿ ಸಂಸ್ಥೆಗಳ ನೌಕರರ ಅಕ್ರಮಗಳನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ ಎನ್ನಲಾಗಿದೆ.
ಅಯೋಧ್ಯೆ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಆದೇಶ:
ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳ ಕಾಣಿಕೆ ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ, ಟ್ರಸ್ಟ್ ಅಧಿಕಾರಿಗಳು ಮತ್ತು ಮಂದಿರದ ಪದಾಧಿಕಾರಿಗಳು ಅಯೋಧ್ಯೆಯನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಎಸ್‌ಐಟಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಭಾನುವಾರ ತನಿಖಾ ತಂಡ ಲಕ್ನೋಗೆ ಹೊರಡುವ ಮುನ್ನವೇ ಈ ನಿರ್ದೇಶನ ನೀಡಿದೆ. ಸದ್ಯಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕಾರಿಗಳು ಹಾಗೂ ಕಾಣಿಕೆ ಕಳ್ಳತನದ ಆರೋಪ ಎದುರಿಸುತ್ತಿರುವ ನೌಕರರು ಜಿಲ್ಲೆಯನ್ನು ದಾಟುವಂತಿಲ್ಲ. ಒಟ್ಟು 150 ಜನರನ್ನು ವಿಚಾರಣೆ ನಡೆಸಲಾಗಿದೆ. ಮುಂದಿನ 15 ದಿನಗಳಲ್ಲಿ ಎಸ್‌ಐಟಿ ತನ್ನ ಸಮಗ್ರ ಅಂತಿಮ ವರದಿಯನ್ನು ಸಲ್ಲಿಸಬೇಕಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement