ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆ : ಮಹಾಯುತಿ ಮೈತ್ರಿಕೂಟಕ್ಕೆ ಭರ್ಜರಿ ಜಯ ; ಒಂದೇ ಒಂದು ಸ್ಥಾನ ಗೆಲ್ಲದ ವಿಪಕ್ಷಗಳು…!

ಮುಂಬೈ: ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದೆ. ಒಟ್ಟು ಘೋಷಣೆಯಾದ 17 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಮೈತ್ರಿಕೂಟವು ಕೌನ್ಸಿಲ್‌ನಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಜೂನ್ 18 ರಂದು 17 ಸ್ಥಾನಗಳಿಗೆ ಮತದಾನ ನಡೆದಿತ್ತು. ಆದರೆ, ಮತದಾನಕ್ಕೂ ಮುನ್ನವೇ ಮಹಾಯುತಿ ಮೈತ್ರಿಕೂಟದ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ ಸಿಕ್ಕಂತಾಗಿತ್ತು.
ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 11 ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನುಳಿದಂತೆ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮೂರು ಸ್ಥಾನಗಳನ್ನು ಹಾಗೂ ಅಜಿತ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

ನಾಸಿಕ್‌ನಲ್ಲಿ ಮಹಾಯುತಿಗೆ ಆಘಾತ: ಬಂಡಾಯ ಅಭ್ಯರ್ಥಿ ಗೆಲುವು
ಮಹಾಯುತಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಕೈತಪ್ಪಿದ ಏಕೈಕ ಸ್ಥಾನವೆಂದರೆ ಅದು ನಾಸಿಕ್. ಇಲ್ಲಿ ಬಿಜೆಪಿ ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಯಾದ ಗೋಕುಲ ಗೀತೆ ಅವರು ಶಿವಸೇನೆಯ ಅಧಿಕೃತ ಅಭ್ಯರ್ಥಿ ನರೇಂದ್ರ ದರಾದೆ ಅವರನ್ನು ಸೋಲಿಸಿ ಅಚ್ಚರಿಯ ಜಯ ದಾಖಲಿಸಿದ್ದಾರೆ.
ಚುನಾವಣಾ ಅಧಿಕಾರಿಗಳ ಪ್ರಕಾರ, ಗೋಕುಲ ಗೀತೆ 357 ಮತಗಳನ್ನು ಪಡೆದರೆ, ನರೇಂದ್ರ ದರಾದೆ 248 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಆ ಮೂಲಕ ಗೀತೆ 109 ಮತಗಳ ಅಂತರದಿಂದ ಜಯಗಳಿಸಿದರು. ಆಡಳಿತ ಪಕ್ಷದ ಅಭ್ಯರ್ಥಿಯಾಗಿದ್ದರಿಂದ ದರಾದೆ ತೀವ್ರ ಪೈಪೋಟಿ ನೀಡಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು, ಆದರೆ ಫಲಿತಾಂಶ ಉಲ್ಟಾ ಆಗಿದೆ. ಉದ್ಧವ್ ಠಾಕ್ರೆ ಬಣದ (ಯುಬಿಟಿ) ಒಂಬತ್ತು ಲೋಕಸಭಾ ಸದಸ್ಯರ ಪೈಕಿ ಆರು ಮಂದಿ ಬಂಡಾಯ ಎದ್ದ ಬಳಿಕ ಶಿಂಧೆ ನೇತೃತ್ವದ ಶಿವಸೇನೆ ತೀವ್ರ ಸುದ್ದಿಯಲ್ಲಿದೆ. ಇವರಲ್ಲಿ ಇಬ್ಬರು ಈಗಾಗಲೇ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದರಾದೆ ಅವರು ಹಲವು ಚುನಾಯಿತ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರೂ ಸೋಲುಂಡಿದ್ದಾರೆ.
ಛತ್ರಪತಿ ಸಂಭಾಜಿನಗರ-ಜಾಲ್ನಾದಲ್ಲಿ ಬಿಜೆಪಿಗೆ ಏಕಪಕ್ಷೀಯ ಜಯ
ಛತ್ರಪತಿ ಸಂಭಾಜಿನಗರ-ಜಾಲ್ನಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸುಹಾಸ ಶಿರಸಾಟ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಅವರು 454 ಮತಗಳನ್ನು ಪಡೆದರೆ, ಶಿವಸೇನೆ (ಯುಬಿಟಿ) ಅಭ್ಯರ್ಥಿ ಗಣೇಶ ಲೋಖಂಡೆ ಕೇವಲ 134 ಮತಗಳನ್ನು ಪಡೆದು ತೃಪ್ತಿಪಡಬೇಕಾಯಿತು. ಇಲ್ಲಿ ಬಿಜೆಪಿ, ಶಿವಸೇನೆ (ಯುಬಿಟಿ) ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಶಿರಸಾಟ ಭಜರ್ರಿ ಜಯಗಳಿಸಿದರು. ಜಯಗಳಿಸಿದರು.

ಪ್ರಮುಖ ಸುದ್ದಿ :-   ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ : ಶಿಂಧೆ ಶಿವಸೇನೆಗೆ ಜಿಗಿದ ಸಂಸದ ಓಮ್ರಾಜೆ ನಿಂಬಾಳ್ಕರ್

ಜಯಗಳಿಸಿದ  ಅಭ್ಯರ್ಥಿಗಳು
ಥಾಣೆ : ರವೀಂದ್ರ ಪಾಠಕ್‌ (ಶಿವಸೇನೆ) – ಅವಿರೋಧ
ಯವತ್ಮಾಲ್ : ದುಶ್ಯಂತ ಚತುರ್ವೇದಿ (ಶಿವಸೇನೆ) – ಅವಿರೋಧ
ರಾಯಗಡ-ರತ್ನಗಿರಿ-ಸಿಂಧುದುರ್ಗ: ಅನಿಕೇತ ತತ್ಕರೆ (ಎನ್‌ಸಿಪಿ) – ಅವಿರೋಧ
ಪುಣೆ : ವಿಕ್ರಮ ಕಾಕಡೆ (NCP) – ಅವಿರೋಧ
ವಾರ್ಧಾ-ಗಡ್ಚಿರೋಲಿ-ಚಂದ್ರಾಪುರ : ಅರುಣ ಲಖಾನಿ (ಬಿಜೆಪಿ)- ಅವಿರೋಧ
ಅಹಲ್ಯಾನಗರ : ಪ್ರಜಕ್ತ ತಾನ್ಪುರೆ (ಬಿಜೆಪಿ) – ಅವಿರೋಧ
ಛತ್ರಪತಿ ಸಂಭಾಜಿನಗರ-ಜಲ್ನಾ : ಸುಹಾಸ್ ಶಿರಸಾಟ್‌ (ಬಿಜೆಪಿ)
ನಾಸಿಕ್ : ಗೋಕುಲ್ ಗೀತೆ (ಸ್ವತಂತ್ರ, ಬಿಜೆಪಿ ಬಂಡಾಯ)
ಭಂಡಾರ-ಗೊಂಡಿಯಾ : ಅವಿನಾಶ ಬ್ರಹ್ಮಂಕರ (ಬಿಜೆಪಿ)
ಸಾಂಗ್ಲಿ-ಸತಾರಾ : ಧೈರ್ಯಶೀಲ ಕದಮ್ (ಬಿಜೆಪಿ)
ಪರ್ಭಾನಿ-ಹಿಂಗೋಲಿ : ಸಯೀದ್ ಖಾನ್ (ಶಿವಸೇನೆ)
ಸೊಲ್ಲಾಪುರ : ರಾಜೇಂದ್ರ ರಾವುತ್ (ಬಿಜೆಪಿ)
ಧಾರಾಶಿವ-ಲಾತೂರು-ಬೀಡ್‌: ಬಸವರಾಜ ಪಾಟೀಲ (ಬಿಜೆಪಿ)
ನಾಗ್ಪುರ : ರಾಜೀವ ಪೋತದಾರ್ (ಬಿಜೆಪಿ)
ಜಲಗಾಂವ್ : ನಂದಕಿಶೋರ ಮಹಾಜನ್ (ಬಿಜೆಪಿ)
ಅಮರಾವತಿ – ಪ್ರವೀಣ ಪೋತೆ (ಬಿಜೆಪಿ)
ನಾಂದೇಡ್ – ಅಮರ ರಾಜೂರ್ಕರ್ (ಬಿಜೆಪಿ)

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement