329 ಜೀವ ಬಲಿ ಪಡೆದ ಕನಿಷ್ಕ ವಿಮಾನ ದುರಂತ : 40 ವರ್ಷಗಳ ಬಳಿಕ ಇದಕ್ಕೆ ಖಲಿಸ್ತಾನಿ ಉಗ್ರರೇ ಕಾರಣ ಎಂದು ಒಪ್ಪಿದ ಕೆನಡಾ

 ಒಟ್ಟಾವಾ : 1985ರಲ್ಲಿ 329 ಮಂದಿಯನ್ನು ಬಲಿ ಪಡೆದ ಐರ್ ಇಂಡಿಯಾ ಫ್ಲೈಟ್ 182 (ಎಂಪರರ್ ಕನಿಷ್ಕ) ವಿಮಾನ ಸ್ಫೋಟ ಪ್ರಕರಣದಲ್ಲಿ ಕೆನಡಾ ಮೂಲದ ಖಲಿಸ್ತಾನಿ ಉಗ್ರರೇ ಹೊಣೆಗಾರರು ಎಂದು ಕೆನಡಾದ ಭದ್ರತಾ ಗುಪ್ತಚರ ಸಂಸ್ಥೆ (CSIS) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಭಾರತೀಯ ಮೂಲದ ಕೆನಡಾ ನಾಗರಿಕರಾಗಿದ್ದು, ಅಟ್ಲಾಂಟಿಕ್ ಮಹಾಸಾಗರದಿಂದ ಕೇವಲ 131 ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲಾಗಿತ್ತು.
ಈ ಮೂಲಕ ಐರ್ ಇಂಡಿಯಾ ವಿಮಾನ ಸ್ಫೋಟವನ್ನು ಕೆನಡಾದಲ್ಲಿದ್ದ ಖಲಿಸ್ತಾನಿ ಉಗ್ರಗಾಮಿಗಳೇ ಸಂಚು ರೂಪಿಸಿ ನಡೆಸಿದ್ದರು ಎಂಬ ಭಾರತದ ಬಹುಕಾಲದ ನಿಲುವಿಗೆ ಕೆನಡಾದ ಅಧಿಕಾರಿಗಳಿಂದಲೇ ಅಧಿಕೃತ ದೃಢೀಕರಣ ದೊರೆತಂತಾಗಿದೆ. ಈ ಭೀಕರ ಘಟನೆಯನ್ನು ಕೆನಡಾದ ಇತಿಹಾಸದಲ್ಲೇ ನಡೆದ ಅತ್ಯಂತ ಮಾರಣಾಂತಿಕ ಉಗ್ರ ದಾಳಿ ಎಂದು ಬಣ್ಣಿಸಿರುವ ಕೆನಡಾದ ಭದ್ರತಾ ಗುಪ್ತಚರ ಸಂಸ್ಥೆ (CSIS), ಇದು ದೇಶದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಮಹತ್ವದ ತಿರುವು ನೀಡಿದ ಘಟನೆಯಾಗಿದೆ ಎಂದು ಹೇಳಿದೆ.
ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, “1985ರ ಜೂನ್ 23ರಂದು ಕೆನಡಾ ಮೂಲದ ಖಲಿಸ್ತಾನಿ ಉಗ್ರಗಾಮಿಗಳು ವಿಮಾನದಲ್ಲಿ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಅವರಲ್ಲಿ ಬಹುತೇಕರು ಕೆನಡಾ ನಾಗರಿಕರಾಗಿದ್ದರು. ಇದು ಇಂದಿಗೂ ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಉಗ್ರ ದಾಳಿಯಾಗಿದ್ದು, ನಮ್ಮ ರಾಷ್ಟ್ರೀಯ ಭದ್ರತಾ ಸಮುದಾಯಕ್ಕೆ ನಿರ್ಣಾಯಕ ಘಟ್ಟವಾಗಿದೆ” ಎಂದು ಸಂಸ್ಥೆ ತಿಳಿಸಿದೆ.
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿ, “ಐರ್ ಇಂಡಿಯಾ ವಿಮಾನ ಸ್ಫೋಟವು ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಉಗ್ರ ದಾಳಿಯಾಗಿದೆ. ಕೆನಡಾ ಎಲ್ಲ ರೀತಿಯ ಭಯೋತ್ಪಾದನೆಗೆ ವಿರೋಧವಾಗಿ ದೃಢವಾಗಿ ನಿಂತಿದೆ ” ಎಂದು ಹೇಳಿದ್ದಾರೆ.
2005ರಲ್ಲಿ ಕೆನಡಾ ಸರ್ಕಾರ ಜೂನ್ 23ನ್ನು ‘ಭಯೋತ್ಪಾದನೆಯ ಸಂತ್ರಸ್ತರ ರಾಷ್ಟ್ರೀಯ ಸ್ಮರಣಾ ದಿನ’ ಎಂದು ಅಧಿಕೃತವಾಗಿ ಘೋಷಿಸಿತ್ತು.
ಟೊರೊಂಟೊದಿಂದ ಮುಂಬೈಗೆ ಬರುತ್ತಿದ್ದ ವೇಳೆ ಸ್ಫೋಟ
‘ಎಂಪರರ್ ಕನಿಷ್ಕ’ ಎಂದು ಕರೆಯಲ್ಪಡುತ್ತಿದ್ದ ಬೋಯಿಂಗ್ 747 ವಿಮಾನವು ಟೊರೊಂಟೊದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಸಂಘಟನೆಯ ಸದಸ್ಯನೊಬ್ಬ ವಿಮಾನದ ಲಗೇಜ್ ವಿಭಾಗದಲ್ಲಿ ಬಾಂಬ್ ಇಟ್ಟಿದ್ದ. ವಿಮಾನವು ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣವನ್ನು ತಲುಪಲು ಸುಮಾರು 45 ನಿಮಿಷಗಳು ಬಾಕಿ ಇರುವಾಗ ಮಧ್ಯ ಗಗನದಲ್ಲೇ ಬಾಂಬ್ ಸ್ಫೋಟಗೊಂಡು ವಿಮಾನ ಸಂಪೂರ್ಣವಾಗಿ ನಾಶವಾಗಿತ್ತು.
ಭಾರತದ ದೃಷ್ಟಿಯಲ್ಲಿ ಈ ಒಪ್ಪಿಗೆಯ ಮಹತ್ವ
ಆ ಸಮಯದಲ್ಲಿ ಈ ದಾಳಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆದೇಶಿಸಿದ್ದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೆ ಪ್ರತೀಕಾರವೆಂದು ಪರಿಗಣಿಸಲಾಗಿತ್ತು. ಈ ಸೇನಾ ಕಾರ್ಯಾಚರಣೆಯ ಉದ್ದೇಶ ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಆಶ್ರಯ ಪಡೆದಿದ್ದ ಶಸ್ತ್ರಸಜ್ಜಿತ ಸಿಖ್ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಅವರ ಬೆಂಬಲಿಗರನ್ನು ತೆರವುಗೊಳಿಸುವುದಾಗಿತ್ತು.
ಆದರೆ 2010ರಲ್ಲಿ ಕೆನಡಾದ ಸುಪ್ರೀಂ ಕೋರ್ಟ್ ಮಾಜಿ  ನ್ಯಾಯಮೂರ್ತಿ ಜಾನ್ ಮೇಜರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ತನಿಖೆಯು, ಈ ಪ್ರಕರಣದ ತನಿಖೆಯಲ್ಲಿ ಭದ್ರತಾ ಸಂಸ್ಥೆಗಳು ಸರಣಿ ಪ್ರಮಾದಗಳನ್ನು ಎಸಗಿದ್ದವು ಎಂದು ವರದಿ ನೀಡಿತ್ತು. ಇದಲ್ಲದೆ, ಈ ಪ್ರಕರಣವನ್ನು “ಭಾರತದ ಆಂತರಿಕ ಸಮಸ್ಯೆ” ಎಂಬ ದೃಷ್ಟಿಯಿಂದ ನೋಡಲಾಗಿದ್ದರಿಂದ ತನಿಖೆಗೆ ಅಗತ್ಯವಿದ್ದ ತುರ್ತು ಆದ್ಯತೆ ಸಿಗಲಿಲ್ಲ ಎಂಬ ಸಂಗತಿಯನ್ನೂ ವರದಿ ಉಲ್ಲೇಖಿಸಿತ್ತು.
2010ರ ಜೂನ್ 23ರಂದು ಅಂದಿನ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರು, ಐರ್ ಇಂಡಿಯಾ ವಿಮಾನ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳ ಮುಂದೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದರು. ದುರಂತ ಸಂಭವಿಸಲು ಕಾರಣವಾದ ಆಡಳಿತಾತ್ಮಕ ವೈಫಲ್ಯಗಳು ಹಾಗೂ ನಂತರ ಮೃತರ ಕುಟುಂಬಗಳೊಂದಿಗೆ ಕೆನಡಾ ಆಡಳಿತ ತೋರಿದ ನಿರ್ಲಕ್ಷ್ಯ ಮತ್ತು ಅವಮಾನಕಾರಿ ವರ್ತನೆಗಾಗಿ ಅವರು ವಿಷಾದ ವ್ಯಕ್ತಪಡಿಸಿದ್ದರು.
ಭಾರತ–ಕೆನಡಾ ಸಂಬಂಧಗಳಲ್ಲಿ ಹೊಸ ಬೆಳವಣಿಗೆ
2023ರಲ್ಲಿ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀವ್ರ ಹದಗೆಟ್ಟಿದ್ದವು.
ಖಲಿಸ್ತಾನಿ ಉಗ್ರರಿಗೆ ಕೆನಡಾ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ನಿರಂತರವಾಗಿ ಒತ್ತಾಯಿಸುತ್ತಿದ್ದು, ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಭಾರತ ವಿರೋಧಿ ಚಟುವಟಿಕೆಗಳು ಹಾಗೂ ಹಿಂಸಾಚಾರವನ್ನು ನಡೆಸಲಾಗುತ್ತಿದೆ ಎಂದು ಹಲವು ಬಾರಿ ಆತಂಕ ವ್ಯಕ್ತಪಡಿಸಿತ್ತು.
2025ರ ಮಾರ್ಚ್‌ನಲ್ಲಿ ಮಾರ್ಕ್ ಕಾರ್ನಿ ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ಪುನಶ್ಚೇತನಗೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಈ ಬೆಳವಣಿಗೆಗಳು ಭಾರತ–ಕೆನಡಾ ಸಂಬಂಧಗಳ ಮರುಸ್ಥಾಪನೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement