ನವದೆಹಲಿ: ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು 2025ರ ಮೇ ತಿಂಗಳಲ್ಲಿ ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ ಹುತಾತ್ಮರಾದ ಆರು ಭಾರತೀಯ ಯೋಧರ ಹೆಸರುಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಮೊದಲ ಬಾರಿಗೆ ಅಧಿಕೃತವಾಗಿ ಪ್ರಕಟಿಸಿದೆ.
ಈ ಆರು ಯೋಧರ ಪೈಕಿ ಐವರು ಭಾರತೀಯ ಸೇನೆಗೆ ಹಾಗೂ ಒಬ್ಬರು ಭಾರತೀಯ ವಾಯುಪಡೆಗೆ ಸೇರಿದವರಾಗಿದ್ದಾರೆ. ಅವರ ಹೆಸರುಗಳನ್ನು ʼರಾಷ್ಟ್ರೀಯ ಯುದ್ಧ ಸ್ಮಾರಕ (National War Memorial)ʼದ ವೆಬ್‌ಸೈಟ್‌ನ ‘ರೋಲ್ ಆಫ್ ಆನರ್’ (Roll of Honour) ವಿಭಾಗದಲ್ಲಿ ಪ್ರಕಟಿಸಲಾಗಿದ್ದು, ಶೀಘ್ರದಲ್ಲೇ ನವದೆಹಲಿಯಲ್ಲಿರುವ ಯುದ್ಧ ಸ್ಮಾರಕದ ಗ್ರಾನೈಟ್ ಗೋಡೆಗಳ ಮೇಲೂ ಕೆತ್ತಲಾಗುತ್ತದೆ.
ಹುತಾತ್ಮ ಯೋಧರ ಸಂಪೂರ್ಣ ಪಟ್ಟಿ
ರೋಲ್ ಆಫ್ ಆನರ್‌ನಲ್ಲಿ ಪ್ರಕಟಿಸಲಾದ ಯೋಧರ ಹೆಸರುಗಳು ಇಂತಿವೆ:
ಸುಬೇದಾರ್ ಮೇಜರ್ ಪವನಕುಮಾರ – ಹೆಡ್‌ಕ್ವಾರ್ಟರ್ಸ್ 10 ಇನ್‌ಫ್ಯಾಂಟ್ರಿ
ರೈಫಲ್‌ಮನ್ ಸುನೀಲಕುಮಾರ – ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್
ಲಾನ್ಸ್ ನಾಯಕ್ ದಿನೇಶಕುಮಾರ – 5 ಫೀಲ್ಡ್ ರೆಜಿಮೆಂಟ್
ಅಗ್ನಿವೀರ್ ಮೂಡ್ ಮುರಳಿ ನಾಯಕ್ – 851 ಲೈಟ್ ರೆಜಿಮೆಂಟ್
ಹವೀಲ್ದಾರ್ ಸುನಿಲಕುಮಾರ ಸಿಂಗ್ – 237 ಫೀಲ್ಡ್ ವರ್ಕ್‌ಶಾಪ್
ಸಾರ್ಜೆಂಟ್ ಸುರೇಂದ್ರಕುಮಾರ – 39 ವಿಂಗ್, ಭಾರತೀಯ ವಾಯುಪಡೆ
ಆಪರೇಷನ್ ಸಿಂಧೂರ ಬಳಿಕ ನಾಲ್ಕು ದಿನಗಳ ಸಂಘರ್ಷದಲ್ಲಿ ಕೆಲವು ಯೋಧರು ಹುತಾತ್ಮರಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದರೂ, ಇದುವರೆಗೆ ಕೇಂದ್ರ ಸರ್ಕಾರ ಅವರ ಹೆಸರುಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿರಲಿಲ್ಲ. ಇದೀಗ ರಾಷ್ಟ್ರೀಯ ಯುದ್ಧ ಸ್ಮಾರಕದ ‘ರೋಲ್ ಆಫ್ ಆನರ್’ ವಿಭಾಗದಲ್ಲಿ ಹೆಸರುಗಳನ್ನು ಪ್ರಕಟಿಸುವ ಮೂಲಕ ಆಪರೇಷನ್ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಸರ್ಕಾರ ಅಧಿಕೃತ ಗೌರವ ಸಲ್ಲಿಸಿದೆ.
‘ತ್ಯಾಗ ಚಕ್ರ’ದಲ್ಲಿ ಶಾಶ್ವತ ಸ್ಥಾನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ‘ತ್ಯಾಗ ಚಕ್ರ’ (Tyag Chakra) 16 ವೃತ್ತಾಕಾರದ ಗ್ರಾನೈಟ್ ಗೋಡೆಗಳನ್ನು ಹೊಂದಿದ್ದು, ಸ್ವಾತಂತ್ರ್ಯಾನಂತರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಹೆಸರುಗಳನ್ನು ಅದರಲ್ಲಿ ಕೆತ್ತಲಾಗಿದೆ. ಪ್ರತಿಯೊಂದು ಗ್ರಾನೈಟ್ ಕಲ್ಲಿನ ಮೇಲೂ ಹುತಾತ್ಮ ಯೋಧರ ಹೆಸರು, ಹುದ್ದೆ ಹಾಗೂ ರೆಜಿಮೆಂಟ್ ವಿವರಗಳನ್ನು ದಾಖಲಿಸಲಾಗಿದ್ದು, ಅವರ ತ್ಯಾಗಕ್ಕೆ ಶಾಶ್ವತ ಗೌರವ ಸಲ್ಲಿಸಲಾಗುತ್ತದೆ.
ರೈಫಲ್‌ಮನ್ ಸುನಿಲಕುಮಾರಗೆ ವೀರ ಚಕ್ರ
ಆಪರೇಷನ್ ಸಿಂಧೂರದಲ್ಲಿ ಶೌರ್ಯ ಮೆರೆದ ರೈಫಲ್‌ಮನ್ ಸುನಿಪಕುಮಾರ ಅವರಿಗೆ ಭಾರತದ ಮೂರನೇ ಅತ್ಯುನ್ನತ ಯುದ್ಧ ಶೌರ್ಯ ಪ್ರಶಸ್ತಿಯಾದ ‘ವೀರ ಚಕ್ರ’ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ. ಇದೇ ವೇಳೆ ಭಾರತೀಯ ವಾಯುಪಡೆಯ ಸಾರ್ಜೆಂಟ್ ಸುರೇಂದ್ರಕುಮಾರ ಅವರಿಗೆ ‘ವಾಯು ಪದಕ’ ನೀಡಿ ಗೌರವಿಸಲಾಗಿದೆ.
ಜೂನ್ 8ರಂದು ನಡೆದ ರಕ್ಷಣಾ ಗೌರವ ಸಮಾರಂಭದಲ್ಲಿ (Defence Investiture Ceremony) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರೈಫಲ್‌ಮನ್ ಸುನಿಲ್ ಕುಮಾರ್ ಅವರಿಗೆ ಮರಣೋತ್ತರ ವೀರ ಚಕ್ರ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಅವರ ತಾಯಿ ಸುಧೇಶಕುಮಾರಿ ಹಾಗೂ ತಂದೆ ಯಶ್ಪಾಲ ಸ್ವೀಕರಿಸಿದರು.
ಯೋಧರ ತ್ಯಾಗಕ್ಕೆ ಸರ್ಕಾರದ ಗೌರವ
ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಯೋಧರ ಶೌರ್ಯ ಮತ್ತು ತ್ಯಾಗವನ್ನು ದಾಖಲಿಸಿ ಅವರಿಗೆ ಗೌರವ ಸಲ್ಲಿಸುವ ಪ್ರಯತ್ನಗಳ ಭಾಗವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೇಶದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಮಹತ್ವದ ಅಧ್ಯಾಯವಾಗಿ ಪರಿಗಣಿಸಲ್ಪಡುತ್ತಿದೆ.
ಆಪರೇಷನ್ ಸಿಂಧೂರ್
2025ರ ಮೇ 7ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತ ಆಪರೇಷನ್ ಸಿಂಧೂರ್ ಆರಂಭಿಸಿತು. ಈ ಕಾರ್ಯಾಚರಣೆಯಡಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿದ್ದ ಉಗ್ರರ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ, ಗಡಿ ದಾಟಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಂಘಟನೆಗಳಿಗೆ ಸಂಬಂಧಿಸಿದ ಉಗ್ರರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಯಶಸ್ವಿ ಕಾರ್ಯಾಚರಣೆ ನಡೆಸಿದ್ದವು.


ನಿಮ್ಮ ಕಾಮೆಂಟ್ ಬರೆಯಿರಿ