ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು(Wild Elephant) ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಪರದಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಅರೆಕೊಪ್ಪ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಅರಸಿ ವನ್ಯಜೀವಿಗಳು ನಾಡಿಗೆ ಬರುವುದು ಸಾಮಾನ್ಯ ಎಂಬಂತಾಗಿದೆ.
ಅದೇ ರೀತಿ ಮುಗ್ಗೂರು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದವನ್ಯ ಜೀವಿ ಧಾಮದ ಗಡಿ ಪ್ರದೇಶದಲ್ಲಿ ಹಾಕಲಾಗಿದ್ದ ರೈಲ್ವೆ ಬ್ಯಾರಿಕೇಡ್ನ (Railway Barricade) ಮಧ್ಯೆ ಸಿಲುಕಿಕೊಂಡಿದೆ. ರೈಲ್ವೆ ಬ್ಯಾರಿಕೇಡ್ಗೆ ಜಾನುವಾರುಗಳು ಹೋಗಲು ಸಣ್ಣ ಜಾಗವನ್ನು ಬಿಡಲಾಗಿತ್ತು. ಅದರ ಮೂಲಕ ದಾಟಲು ಪ್ರಯತ್ನಿಸಿದ ಆನೆ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಅದು ಮುಂದಕ್ಕೂ ಹೋಗಲಾಗದೆ ಹಿಂದಕ್ಕೂ ಹೋಗಲಾಗದೆ ನರಳಾಡಿದೆ. ಬೆಳಿಗ್ಗೆ ಆನೆ ಸಿಲುಕಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ನಂತರ ಆನೆಗೆ ಯಾವುದೇ ಗಾಯಗಳಾಗದಂತೆ ಬ್ಯಾರಿಕೇಡ್ನಿಂದ ಸುರಕ್ಷಿತವಾಗಿ ಹೊರತೆಗೆಯಲು ಕಟರ್ಗಳ ಬಳಸಿ ಬ್ಯಾರಿಕೇಡ್ ತುಂಡರಿಸಿ ಆನೆಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದಾರೆ. ನಂತರ ಆನೆಯನ್ನು ಯಶಸ್ವಿಯಾಗಿ ಮರಳಿ ಕಾಡಿಗೆ ಕಳುಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ