ಸುಳ್ಯ : ʼಭಾರತದ ಬ್ರಿಜ್‌ ಮ್ಯಾನ್‌’ ಖ್ಯಾತಿಯ ಡಾ.ಗಿರೀಶ ಭಾರದ್ವಾಜ ಇನ್ನಿಲ್ಲ

ಮಂಗಳೂರು : ಪದ್ಮಶ್ರೀ ಪುರಸ್ಕೃತ, ‘ಭಾರತದ ಬ್ರಿಜ್‌ ಮ್ಯಾನ್‌’ ಎಂದೇ ಖ್ಯಾತರಾಗಿದ್ದ ಗಿರೀಶ ಭಾರದ್ವಾಜ (76) ಅವರು ಮಂಗಳವಾರ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾದ ಗ್ರಾಮೀಣ ಪ್ರದೇಶಗಳಲ್ಲಿ 150ಕ್ಕೂ ಹೆಚ್ಚು ಪರಿಸರ ಸ್ನೇಹಿ, ಕಡಿಮೆ ವೆಚ್ಚದ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದ ಗಿರೀಶ ಭಾರದ್ವಾಜ ಅವರು ಭಾರತದ ಗ್ರಾಮೀಣ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಕ್ಕೆ ಸದಾ ನೆನಪಿನಲ್ಲಿ ಉಳಿಯುತ್ತಾರೆ.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದ ಅವರು, 1970ರ ದಶಕದಲ್ಲಿ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗ ಮಾಡುವ ಕನಸು ಕಂಡಿದ್ದರು. ಆದರೆ ಕೃಷಿಕರಾಗಿದ್ದ ಅವರ ತಂದೆ, ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತೆ ಪ್ರೇರೇಪಿಸಿದ್ದರು. ಈ ಪ್ರೇರಣೆಯಿಂದ ಅವರು ‘ರೇಷನಲ್ ಎಂಜಿನಿಯರಿಂಗ್ ವರ್ಕ್ಸ್’ ಸಂಸ್ಥೆಯನ್ನು ಸ್ಥಾಪಿಸಿ ಸಾಮಾನ್ಯ ಫ್ಯಾಬ್ರಿಕೇಷನ್ ಕೆಲಸಗಳ ಜೊತೆಗೆ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಲು ಆರಂಭಿಸಿದರು. ನಂತರ ಸುಳ್ಯದಲ್ಲಿ ‘ಆಯಶ್ಶಿಲ್ಪ ಇಂಡಸ್ಟ್ರೀಸ್’ ಅನ್ನು ಸ್ಥಾಪಿಸಿದರು.

ಅರಂಬೂರು ಗ್ರಾಮದ ಸೇತುವೆಯಿಂದ ಆರಂಭವಾದ ಪಯಣ
1989ರಲ್ಲಿ ಸುಳ್ಯದ ಅರಂಬೂರಿನ ಪಯಸ್ವಿನಿ ನದಿಗೆ ಮೊದಲ ಬಾರಿಗೆ ಅವರು ನಿರ್ಮಿಸಿದ ತೂಗುಸೇತುವೆ ಅವರ ಬದುಕಿನ ಮಹತ್ತರ ತಿರುವಾಗಿತ್ತು. ಕೇವಲ ಸ್ಥಳೀಯ ಸಾಮಗ್ರಿ ಮತ್ತು ಸೀಮಿತ ಬಜೆಟ್‌ನಲ್ಲಿ ಅವರು ನಿರ್ಮಿಸಿದ ಆ ಸೇತುವೆ ಯಶಸ್ವಿಯಾದಾಗ, ಇಡೀ ದೇಶವೇ ಇವರ ಕಡೆ ತಿರುಗಿ ನೋಡುವಂತಾಯಿತು. ಅಲ್ಲಿಂದ ಆರಂಭವಾದ ಅವರ ಈ ಪಯಣ ನಿರಂತರವಾಗಿ ಸಾಗಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೂರದ ಗ್ರಾಮವಾದ ಅರಂಬೂರಿನ ನಿವಾಸಿಗಳು ತಮ್ಮ ಊರಿಗೆ ಕಾಲುಸೇತುವೆ ನಿರ್ಮಿಸುವಂತೆ ಭಾರದ್ವಾಜ ಅವರನ್ನು ಸಂಪರ್ಕಿಸಿದ್ದರು. ಸ್ಥಳಕ್ಕೆ ಹೋಗಿ ಅವರ ಸಂಕಷ್ಟವನ್ನು ಕಣ್ಣಾರೆ ಕಂಡು ಈ ಸವಾಲನ್ನು ಸ್ವೀಕರಿಸಿದರು. ಬೇರೆ ವಿಭಾಗಗಳ ಎಂಜಿನಿಯರ್ ಸ್ನೇಹಿತರ ನೆರವು ಹಾಗೂ ಸೇತುವೆ ನಿರ್ಮಾಣ ಕುರಿತ ಪುಸ್ತಕಗಳ ಅಧ್ಯಯನದ ಮೂಲಕ ಕಡಿಮೆ ವೆಚ್ಚದ ತೂಗು ಸೇತುವೆಯ ವಿನ್ಯಾಸವನ್ನು ಸಿದ್ಧಪಡಿಸಿದರು. ಇದು ಜನಸಹಭಾಗಿತ್ವದ ಯೋಜನೆಯಾಗಿದ್ದು, ಗ್ರಾಮಸ್ಥರು ‘ಶ್ರಮದಾನ’ವನ್ನೂ ಮಾಡಿದರು. ಕಾರ್ಮಿಕ ವೆಚ್ಚ ಹಾಗೂ ದೇಣಿಗೆಯಾಗಿ ದೊರೆತ ನಿರ್ಮಾಣ ಸಾಮಗ್ರಿಗಳನ್ನು ಹೊರತುಪಡಿಸಿದರೆ, ಈ ಯೋಜನೆಯ ವೆಚ್ಚ ₹2 ಲಕ್ಷಕ್ಕೂ ಕಡಿಮೆಯಿತ್ತು. 1989ರಲ್ಲಿ ಪೂರ್ಣಗೊಂಡ ಈ ಸೇತುವೆ ಗ್ರಾಮಸ್ಥರ ಬದುಕನ್ನೇ ಬದಲಾಯಿಸಿತು. ಇಲ್ಲಿಂದ ಇವರ ಪರಿಸರ ಸ್ನೇಹಿ ತೂಗು ಸೇತುವೆ ನಿರ್ಮಾಣದ ಪಯಣ ಆರಂಭವಾಯಿತು.

150ಕ್ಕೂ ಹೆಚ್ಚು ಸೇತುವೆಗಳು, ಸಾವಿರಾರು ಜನರ ಬದುಕಿನಲ್ಲಿ ಬದಲಾವಣೆ
ಗಿರೀಶ ಭಾರದ್ವಾಜ ಅವರು ಇದುವರೆಗೆ ನಿರ್ಮಿಸಿದ 150ಕ್ಕೂ ಹೆಚ್ಚು ತೂಗು ಸೇತುವೆಗಳು ಗ್ರಾಮೀಣ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಿದ್ದು, ಜನರಿಗೆ ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳಿಗೆ ತುರ್ತಾಗಿ ತಲುಪಲು ನೆರವಾಗಿವೆ.
2024ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ‘ಪ್ರೆಸ್ ಕ್ಲಬ್ ಗೆಸ್ಟ್‌ ಆಫ್ ದ ಮಂತ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ನಾನು ನಿರ್ಮಿಸಿದ ತೂಗು ಸೇತುವೆಗಳು ಜನರ ಬದುಕನ್ನು ಸುಗಮಗೊಳಿಸಿವೆ ಎಂದು ಜನರು ಹೇಳುತ್ತಲೇ ಇರುತ್ತಾರೆ. ಅಗತ್ಯ ಸೌಲಭ್ಯಗಳನ್ನು ತಲುಪಲು ಈ ಸೇತುವೆಗಳು ನೆರವಾಗಿವೆ ಎಂದು ಕೃತಜ್ಞತೆ ಸಲ್ಲಿಸುತ್ತಾರೆ. ಅಂತಹ ಕ್ಷಣಗಳಿಂದ ನನಗೆ ಸಿಗುವ ತೃಪ್ತಿಗೆ ಸಮನಾದದ್ದು ಮತ್ತೊಂದಿಲ್ಲ,” ಎಂದು ಹೇಳಿದ್ದರು.
ನಕ್ಸಲ್ ಪೀಡಿತ ಪ್ರದೇಶದಲ್ಲೂ ತೂಗು ಸೇತುವೆಯ ಹೆಜ್ಜೆ
ಒಡಿಶಾದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇತುವೆ ನಿರ್ಮಾಣ ಆರಂಭಿಸಿದಾಗ ಗ್ರಾಮಸ್ಥರು ಮೊದಲಿಗೆ ಅನುಮಾನದಿಂದ ನೋಡುತ್ತಿದ್ದರು. ಆದರೆ ನಿಗದಿತ ಸಮಯಕ್ಕಿಂತ ಮುಂಚೆಯೇ ಸೇತುವೆ ಪೂರ್ಣಗೊಂಡ ಬಳಿಕ ಇಡೀ ಗ್ರಾಮವೇ ಸಂಭ್ರಮಾಚರಣೆ ನಡೆಸುತ್ತಿತ್ತು.
“ಗ್ರಾಮಸ್ಥರ ಸಂಭ್ರಮ, ಇಂಜಿನಿಯರ್‌ಗಳ ತಂಡಕ್ಕೆ ಕಣ್ಣೀರಿನ ಬೀಳ್ಕೊಡುಗೆ ಹಾಗೂ ಇಂತಹ ಅನೇಕ ಅವಿಸ್ಮರಣೀಯ ಕ್ಷಣಗಳು ನನ್ನ ಜೀವನದ ಅತ್ಯಂತ ಅಮೂಲ್ಯ ನೆನಪುಗಳು,” ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದರು.
ಗ್ರಾಮೀಣ ಜನರ ಬದುಕನ್ನು ಸೇತುವೆಗಳ ಮೂಲಕ ಸಂಪರ್ಕಿಸಿ, ಸೇವೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದ ಗಿರೀಶ ಭಾರದ್ವಾಜ ಅವರ ನಿಧನದಿಂದ ಸಮಾಜಮುಖಿ ಇಂಜಿನಿಯರಿಂಗ್ ಕ್ಷೇತ್ರವು ಅಪರೂಪದ ಸಾಧಕನನ್ನು ಕಳೆದುಕೊಂಡಂತಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟದಲ್ಲಿ ಈವರೆಗೂ ಮುಂಗಾರು ನೀರಸ ; 17 ಜಿಲ್ಲೆಗಳು, 129 ತಾಲೂಕುಗಳಲ್ಲಿ ಮಳೆ ಕೊರತೆ

ಉತ್ತರಕನ್ನಡ ಜಿಲ್ಲೆಯಲ್ಲಿ ಗಿರೀಶ ಭಾರದ್ವಾಜ ನಿರ್ಮಿಸಿದ ತೂಗು ಸೇತುವೆಗಳು…
ಸಹಸ್ರಲಿಂಗ ತೂಗು ಸೇತುವೆ: ಶಿರಸಿ ಸಮೀಪದ ಪವಿತ್ರ ಶಾಲ್ಮಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ವರ್ಷಪೂರ್ತಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸಿದೆ.
ಶರಾವತಿ ತೂಗು ಸೇತುವೆ: ಹೊನ್ನಾವರ ಸಮೀಪದಲ್ಲಿರುವ ಈ ಸೇತುವೆಯನ್ನು ಸಂಶಿ, ಕುದ್ರುಗಿ ಅಥವಾ ನೇತಗೇರಿ ತೂಗು ಸೇತುವೆ ಎಂದೂ ಕರೆಯಲಾಗುತ್ತದೆ.
ಅಘನಾಶಿನಿ ಹಾಗೂ ಬೆಣ್ಣೆಹೊಳೆ ನದಿಗಳ ತೂಗು ಸೇತುವೆಗಳು: ಈ ಎರಡು ಪ್ರಮುಖ ನದಿಗಳನ್ನು ಹಿಂದೆ ದೋಣಿಗಳ ಮೂಲಕವೇ ದಾಟಬೇಕಾಗಿದ್ದ ಪರಿಸ್ಥಿತಿಯನ್ನು ನಿವಾರಿಸಿ, ಮೋರ್ಸೆ ಸೇರಿದಂತೆ ಹಲವಾರು ಪ್ರತ್ಯೇಕ ಗ್ರಾಮಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ.
ಡೋಂಗ್ರಿ ತೂಗು ಸೇತುವೆ: ಅಂಕೋಲಾ ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿರುವ ಡೋಂಗ್ರಿ ಗ್ರಾಮದಲ್ಲಿ ನಿರ್ಮಿಸಲಾದ ಮಹತ್ವದ ತೂಗು ಸೇತುವೆ.
ಸುಂಕಸಾಳ ತೂಗು ಸೇತುವೆ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಿದ ಮತ್ತೊಂದು ಪ್ರಮುಖ ತೂಗು ಸೇತುವೆ ಯೋಜನೆ.
ದಕ್ಷಿಣ ಕನ್ನಡದಲ್ಲಿ ನಿರ್ಮಿಸಿದ ತೂಗು ಸೇತುವೆಗಳು….
ಅರಂಬೂರು ತೂಗು ಸೇತುವೆ (ಪಯಸ್ವಿನಿ ನದಿ): 1989ರ ಆಗಸ್ಟ್‌ನಲ್ಲಿ ನಿರ್ಮಿಸಲಾದ ಈ ಸೇತುವೆಯು ಗಿರೀಶ ಭಾರದ್ವಾಜ ಅವರ ಮೊದಲ ತೂಗು ಸೇತುವೆಯಾಗಿದೆ. ಗ್ರಾಮಸ್ಥರ ಸಹಭಾಗಿತ್ವದ ನಿಧಿ ಸಂಗ್ರಹದ ಮೂಲಕ ನಿರ್ಮಿಸಲಾದ ಈ ಸೇತುವೆಯು ಅರಂಬೂರು, ಬದ್ದಡ್ಕ, ಕುಕ್ಕುಂಬಾಳ ಸೇರಿದಂತೆ ಎಂಟು ಗ್ರಾಮಗಳನ್ನು ಸುಳ್ಯದ ಮುಖ್ಯರಸ್ತೆಯೊಂದಿಗೆ ಸಂಪರ್ಕಿಸಿ ಗ್ರಾಮೀಣ ಜನರ ಬದುಕಿಗೆ ಹೊಸ ದಾರಿ ಕಲ್ಪಿಸಿತು.
ಮಂಡೇಕೋಲು ತೂಗು ಸೇತುವೆ: ಸುಳ್ಯ ತಾಲೂಕಿನ ಮಂಡೇಕೋಲಿನಲ್ಲಿ ನಿರ್ಮಿಸಲಾದ ಈ ಸೇತುವೆಯು ಭಾರದ್ವಾಜ ಅವರ ‘ಆಯಶ್ಶಿಲ್ಪ’ ತಂಡ ನಿರ್ಮಿಸಿದ 100ನೇ ತೂಗು ಸೇತುವೆಯಾಗಿ ವಿಶೇಷವಾಗಿ ಗುರುತಿಸಿಕೊಂಡಿದೆ.
ಕುಪ್ಪೆಪದವು ತೂಗು ಸೇತುವೆ: ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ನಿರ್ಮಿಸಲಾದ ಈ ಸೇತುವೆಯು ಅವರ 127ನೇ ಸೇತುವೆ ಯೋಜನೆಯಾಗಿದೆ.
ಮೊಗ್ರ (ಕಮಿಲ–ಮೊಗ್ರ) ಉಕ್ಕಿನ ಪಾದಚಾರಿ ಸೇತುವೆ: 2021ರಲ್ಲಿ ಗುತಿಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ನಿರ್ಮಿಸಲಾಯಿತು. ಗಿರೀಶ ಭಾರದ್ವಾಜ ಅವರು ತಮ್ಮ ಪುತ್ರ ಪತಂಜಲಿ ಭಾರದ್ವಾಜ ಜೊತೆ ಸೇರಿ ಈ ಸೇತುವೆ ನಿರ್ಮಿಸಿದ್ದು, ಸುಮಾರು 80 ಕುಟುಂಬಗಳಿಗೆ ಶಾಲೆಗಳು ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸುಗಮ ಸಂಪರ್ಕ ಕಲ್ಪಿಸಿದೆ.

ಪ್ರಮುಖ ಸುದ್ದಿ :-   ರಾಮ ಮಂದಿರ ಟ್ರಸ್ಟ್‌ನಿಂದ ಚಂಪತ್ ರಾಯ್‌ ರಾಜೀನಾಮೆ ಅಂಗೀಕಾರ; ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ ನೇಮಕ

ಉಡುಪಿ ಜಿಲ್ಲೆಯಲ್ಲಿ ನಿರ್ಮಿಸಿದ ತೂಗು ಸೇತುವೆಗಳು…
ಕೆಮ್ಮಣ್ಣು ತೂಗು ಸೇತುವೆ: ಉಡುಪಿ ಜಿಲ್ಲೆಯ ಅತ್ಯಂತ ಪ್ರಸಿದ್ಧ ತೂಗು ಸೇತುವೆಗಳಲ್ಲಿ ಒಂದಾದ ಇದು ಸೀತಾ ಮತ್ತು ಸುವರ್ಣ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಉಡುಪಿ ನಗರದ ಸಮೀಪದಲ್ಲಿರುವ ಈ ಸೇತುವೆಯು ಪಡುಕುದ್ರು ಮತ್ತು ತಿಮ್ಮಣ್ಣಕುದ್ರು ದ್ವೀಪಗಳನ್ನು ಸಂಪರ್ಕಿಸುತ್ತದೆ. ಸುಂದರ ನದಿ ದೃಶ್ಯಗಳು ಹಾಗೂ ಜಲಕ್ರೀಡೆಗಳಿಗಾಗಿ ಇದು ಜನಪ್ರಿಯ ಪ್ರವಾಸಿ ತಾಣವಾಗಿಯೂ ಹೆಸರು ಪಡೆದಿದೆ.
ಜಿನ್ನೆತ್ತುಗುಡ್ಡು ತೂಗು ಸೇತುವೆ: ಬ್ರಹ್ಮಾವರದಿಂದ ಸುಮಾರು 5 ಕಿ.ಮೀ. ಹಾಗೂ ಉಡುಪಿಯಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಈ ಸೇತುವೆಯು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಉಪ್ಪೂರು ಮತ್ತು ಹೇರೂರು ಗ್ರಾಮಗಳನ್ನು ಸಂಪರ್ಕಿಸುತ್ತದೆ.
ಮೂಡುಕುದ್ರು ತೂಗು ಸೇತುವೆ: ಸುವರ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸುಂದರ ಪಾದಚಾರಿ ತೂಗು ಸೇತುವೆಯು ಮೂಡುಕುದ್ರುವನ್ನು ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುತ್ತದೆ. ಹಿನ್ನೀರಿನ ಮನೋಹರ ದೃಶ್ಯಾವಳಿಗಾಗಿ ಈ ಸೇತುವೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಭರತ್ಕಲ್‌–ಹಾಲಾಡಿ ಅಕ್ವಿಡಕ್ಟ್ ಸೇತುವೆ: ಉಡುಪಿ ಜಿಲ್ಲೆಯ ವಿಶಿಷ್ಟ ಎಂಜಿನಿಯರಿಂಗ್ ಸಾಧನೆಗಳಲ್ಲಿ ಒಂದಾದ ಈ ನಿರ್ಮಾಣದಲ್ಲಿ ಪಾದಚಾರಿ ಅಥವಾ ವಾಹನ ಸೇತುವೆಯ ಬದಲಾಗಿ ಹಾಲಾಡಿ ನದಿಗೆ ಅಡ್ಡಲಾಗಿ ಕಾಲುವೆ ನೀರನ್ನು ಸಾಗಿಸಲು ಅಕ್ವಿಡಕ್ಟ್ (ಜಲಸೇತು) ನಿರ್ಮಿಸಲಾಗಿದೆ. ಈ ವಿನೂತನ ಯೋಜನೆಗೆ ಗಿರೀಶ ಭಾರದ್ವಾಜ ಅವರು ತಾಂತ್ರಿಕ ಮಾರ್ಗದರ್ಶನ ನೀಡಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement