ಬೆಂಗಳೂರು : ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕೊರತೆ ಮುಂದುವರಿದಿದ್ದು, ಜೂನ್ 1ರಿಂದ ಜುಲೈ 6ರ ವರೆಗೆ ಮುಂಗಾರು ಮಳೆ ಬಿದ್ದ ಪ್ರಮಾಣ ಗಮಿಸಿದರೆ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಮಳೆ ಕೊರತೆ(Deficit)ಯಾಗಿದೆ.
13 ಜಿಲ್ಲೆಗಳಲ್ಲಿ ಬಹುತೇಕ ವಾಡಿಕೆ (Normal)ಯಷ್ಟು ಮಳೆಯಾಗಿದ್ದರೆ ಒಂದು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಟಿಸಿದ ವರದಿ ತಿಳಿಸಿದೆ.
ವರದಿ ಪ್ರಕಾರ, ತುಮಕೂರು ಜಿಲ್ಲೆಯಲ್ಲಿ ಶೇ.17, ಚಿಕ್ಕಬಳ್ಳಾಪುರ ಶೇ.12, ಬೆಂಗಳೂರು ಗ್ರಾಮಾಂತರ ಶೇ.10, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ತಲಾ ಶೇ.6, ಬೆಂಗಳೂರು ನಗರದಲ್ಲಿ ಶೇ.4 ಮತ್ತು ಬೆಳಗಾವಿಯಲ್ಲಿ ಶೇ.2ರಷ್ಟು ಹೆಚ್ಚುವರಿ ಅಥವಾ ವಾಡಿಕೆ ಮಳೆ ದಾಖಲಾಗಿದೆ.
ಬಾಗಲಕೋಟೆ (-2%), ಕೋಲಾರ (-9%), ಚಿತ್ರದುರ್ಗ (-11%), ಬಳ್ಳಾರಿ (-11%), ಚಾಮರಾಜನಗರ (-19%) ಹಾಗೂ ವಿಜಯಪುರ (-19%) ಜಿಲ್ಲೆಗಳಲ್ಲಿಯೂ ಮಳೆ ಕೊರತೆ ಇದ್ದರೂ, ಅವು ಕೂಡ ಬಹುತೇಕ ವಾಡಿಕೆಯಷ್ಟು ಮಳೆಯಾಗಿದ್ದರಿಂದ ಇವುಗಳ ಸಹ ವಾಡಿಕೆ ಮಳೆಯಾದ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಯಾಗಿವೆ.
ಧಾರವಾಡ (-20%), ಯಾದಗಿರಿ (-22%), ಗದಗ (-22%), ರಾಯಚೂರು (-25%), ಉತ್ತರ ಕನ್ನಡ (-29%), ಹಾಸನ (-33%), ಕೊಪ್ಪಳ (-33%), ಉಡುಪಿ (-38%), ಬೀದರ್ (-40%), ದಕ್ಷಿಣ ಕನ್ನಡ (-43%), ಕಲಬುರಗಿ (-43%), ಶಿವಮೊಗ್ಗ (-44%), ಹಾವೇರಿ (-46%), ದಾವಣಗೆರೆ (-47%), ಚಿಕ್ಕಮಗಳೂರು (-48%), ಕೊಡಗು (-51%) ಹಾಗೂ ಮೈಸೂರು (-55%) ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಕೊರತೆ ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿದ್ದು, ಶೇ.61ರಷ್ಟು ತೀವ್ರ ಮಳೆ ಕೊರತೆ (Large Deficit) ಎದುರಾಗಿದೆ.
ಜೂನ್ 1ರಿಂದ ಜುಲೈ 6ರ ವರೆಗಿನ ಒಟ್ಟಾರೆ ನೈಋತ್ಯ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 249 ಮಿ.ಮೀ.ಯಷ್ಟು ವಾಡಿಕೆಯ ಮಳೆಯ ಬದಲಿಗೆ 165 ಮಿ.ಮೀ. ಮಳೆಯಾಗಿದ್ದು, ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ.
ಪ್ರದೇಶವಾರು ಮಳೆ ಸ್ಥಿತಿ
ದಕ್ಷಿಣ ಒಳನಾಡು ಕರ್ನಾಟಕ: ಶೇ.13 ಮಳೆ ಕೊರತೆ.
ಉತ್ತರ ಒಳನಾಡು ಕರ್ನಾಟಕ: ಶೇ.23 ಮಳೆ ಕೊರತೆ.
ಮಲೆನಾಡು: ಶೇ.46 ಮಳೆ ಕೊರತೆ.
ಕರಾವಳಿ: ಶೇ.35 ಮಳೆ ಕೊರತೆ.
ಜಿಲ್ಲೆಗಳ ಮಳೆ ವರ್ಗೀಕರಣ
ವಾಡಿಕೆ ಮಳೆಯಾದ ಪ್ರದೇಶಗಳು : 13 ಜಿಲ್ಲೆಗಳು, 70 ತಾಲ್ಲೂಕುಗಳು.
ಮಳೆ ಕೊರತೆ: 17 ಜಿಲ್ಲೆಗಳು, 129 ತಾಲ್ಲೂಕುಗಳು
ಅತೀ ಮಳೆ ಕೊರತೆ: 1 ಜಿಲ್ಲೆ, 11 ತಾಲ್ಲೂಕುಗಳು
ಹೆಚ್ಚುವರಿ ಮಳೆ: 25 ತಾಲ್ಲೂಕುಗಳಲ್ಲಿ ದಾಖಲಾಗಿದೆ.
ಅತಿಹೆಚ್ಚು ಮಳೆ: 5 ತಾಲ್ಲೂಕುಗಳಲ್ಲಿ ದಾಖಲಾಗಿದೆ.
ಜುಲೈ 1ರಿಂದ 6ರ ವರೆಗಿನ ಮಳೆಯ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಶೇ.134ರಷ್ಟು, ಬಾಗಲಕೋಟೆಯಲ್ಲಿ ಶೇ.50, ಉತ್ತರ ಕನ್ನಡದಲ್ಲಿ ಶೇ.25, ದಕ್ಷಿಣ ಕನ್ನಡದಲ್ಲಿ ಶೇ.13 ಹಾಗೂ ಉಡುಪಿಯಲ್ಲಿ ಶೇ.7ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜುಲೈ ಮೊದಲ ವಾರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದ್ದರೂ, ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಒಟ್ಟಾರೆ ಮುಂಗಾರು ಮಳೆ ಸ್ಥಿತಿ ಸಾಮಾನ್ಯ ವಿಭಾಗದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ರಾಜ್ಯದ ಮುಂಗಾರು ಮಳೆಯ ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ ಎಂದು ವರದಿ ಸೂಚಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ