ಥಾಣೆ ಆಸ್ಪತ್ರೆಯಲ್ಲಿ ಶಿವಸೇನೆ ಕಾರ್ಪೊರೇಟರ್‌ನಿಂದ ವೈದ್ಯರ ಮೇಲೆ ಹಲ್ಲೆ : ‘ಭಯದಿಂದ ರಾಜೀನಾಮೆ ನೀಡಿದ್ದೇನೆ’ ಎಂದ ವೈದ್ಯ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಆಸ್ಪತ್ರೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ಬಣ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ನಡೆಸಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣದ ಬಳಿಕ, ಹಲ್ಲೆಗೊಳಗಾದ ವೈದ್ಯರಲ್ಲಿ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಭಯದಿಂದ ಶಾಶ್ವತವಾಗಿ ನಗರವನ್ನೇ ತೊರೆದಿರುವುದಾಗಿ ತಿಳಿಸಿದ್ದಾರೆ.
ಎನ್‌ಡಿಟಿವಿ ಜೊತೆ ಮಾತನಾಡಿದ ವೈದ್ಯರು, ಈ ಘಟನೆ ತಮ್ಮನ್ನು ತೀವ್ರವಾಗಿ ಬೆಚ್ಚಿಬೀಳುವಂತೆ ಮಾಡಿದ್ದು, ಆಸ್ಪತ್ರೆಯಲ್ಲಿ ಮುಂದುವರಿದು ಕೆಲಸ ಮಾಡಲು ಸುರಕ್ಷಿತ ವಾತಾವರಣ ಇಲ್ಲ ಎಂಬ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
“ನಾನು ತುಂಬಾ ಭಯದಲ್ಲಿದ್ದೇನೆ. ಗೂಂಡಾಗಳು ನಮ್ಮ ಮೇಲೆ ನಿಗಾ ಇಟ್ಟಿದ್ದಾರೆ. ನಾನು ಈಗಾಗಲೇ ನಗರ ಬಿಟ್ಟು ಹೋಗಿದ್ದೇನೆ. ಅವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು. ಇತರ ವೈದ್ಯರು ಅಲ್ಲಿ ಕೆಲಸ ಮುಂದುವರಿಸಬಹುದು. ಆದರೆ ನಾನು ಮಾತ್ರ ಮತ್ತೆ ಆ ಆಸ್ಪತ್ರೆಗೆ ಹಿಂತಿರುಗುವುದಿಲ್ಲ” ಎಂದು ಅವರು ಹೇಳಿದರು.

ಈ ಘಟನೆ ಜುಲೈ 6ರಂದು ಡೊಂಬಿವ್ಲಿಯಲ್ಲಿರುವ ಕಲ್ಯಾಣ-ಡೊಂಬಿವ್ಲಿ ಮಹಾನಗರ ಪಾಲಿಕೆ (ಕೆಡಿಎಂಸಿ) ನಿರ್ವಹಣೆಯ ಶಾಸ್ತ್ರಿ ನಗರ ಆಸ್ಪತ್ರೆಯಲ್ಲಿ ನಡೆದಿತ್ತು.
ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ನವಜಾತ ಶಿಶುವಿನ ಚಿಕಿತ್ಸೆಗೆ ಸಂಬಂಧಿಸಿದ ವಿಚಾರವೇ ಈ ಘಟನೆಗೆ ಕಾರಣವಾಗಿದೆ. ಆಸ್ಪತ್ರೆಯ ನಿಯೋನೇಟಲ್ ಇಂಟೆನ್ಸಿವ್ ಕೇರ್ ಯೂನಿಟ್ (ಎನ್‌ಐಸಿಯು) ಸಂಪೂರ್ಣ ಭರ್ತಿಯಾಗಿದ್ದರಿಂದ, ಶಿಶುವಿಗೆ ಸಮರ್ಪಕ ಚಿಕಿತ್ಸೆ ದೊರೆಯುವ ಉದ್ದೇಶದಿಂದ ಆಸ್ಪತ್ರೆ ವೈದ್ಯರು ಮಗುವನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕುಟುಂಬಕ್ಕೆ ಸಲಹೆ ನೀಡಿದ್ದರು.
ಈ ಸಲಹೆಯ ನಂತರ, ಮಗುವಿನ ಸಂಬಂಧಿಕರು ಸ್ಥಳೀಯ ಶಿವಸೇನೆ ಕಾರ್ಪೊರೇಟರ್ ರಮೇಶ ಮ್ಹಾತ್ರೆ ಅವರನ್ನು ಸಂಪರ್ಕಿಸಿದ್ದರು. ಬಳಿಕ ಕಾರ್ಪೊರೇಟರ್ ಮ್ಹಾತ್ರೆ ತಮ್ಮ ಬೆಂಬಲಿಗರೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು.

ಪ್ರಮುಖ ಸುದ್ದಿ :-   ಇಂಡೋನೇಷ್ಯಾದ 1000 ವರ್ಷಗಳ ಹಿಂದಿನ ಶಿವ ದೇವಾಲಯದ ಪುನರುಜ್ಜೀವನಕ್ಕೆ ಭಾರತದ ನೆರವು ಘೋಷಿಸಿದ ಮೋದಿ; ಈ ದೇಗುಲದ ಮಹತ್ವವೇನು?

ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಮ್ಹಾತ್ರೆ ಮತ್ತು ಅವರ ಬೆಂಬಲಿಗರು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಬಳಿಕ ಅವರ ಮೇಲೆ ಹಲ್ಲೆ ನಡೆಸಿರುವುದು ದಾಖಲಾಗಿತ್ತು.
ಘರ್ಷಣೆಯ ವೇಳೆ, ಮಹಿಳಾ ವೈದ್ಯರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ, ಮ್ಹಾತ್ರೆ ಅವರ ಕೈಯಲ್ಲಿದ್ದ ಮೊಬೈಲ್‌ಗೆ ಹೊಡೆದು ಕೆಳಗೆ ಬೀಳಿಸಿದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ, ಮತ್ತೊಬ್ಬ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿರುವುದು ದೃಶ್ಯಗಳಲ್ಲಿ ಕಂಡುಬಂದಿದ್ದು, ಘಟನೆಯಲ್ಲಿ ಒಬ್ಬ ವೈದ್ಯರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement