ವಲ್ಸಾದ್ (ಗುಜರಾತ್): ಗುಜರಾತಿನ ವಲ್ಸಾದ್ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಗುರುವಾರ 35ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪ್ರವಾಹದ ನೀರಿನಲ್ಲಿ ಸಿಲುಕಿದ ಘಟನೆ ನಡೆದಿದೆ.
ಗುಜರಾತ್ನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ದಕ್ಷಿಣ ಭಾಗದಲ್ಲಿರುವ ವಲ್ಸಾದ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ. ವಲ್ಸಾದ್ನ ಉಂಬರ್ಗಾಂವ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆಯವರೆಗೆ ಕೇವಲ 16 ಗಂಟೆಗಳಲ್ಲಿ ಅಭೂತಪೂರ್ವ 1100 ಮಿಮೀ ಮಳೆಯಾಗಿದ್ದು, ಇದರಿಂದಾಗಿ ಪೀಡಿತ ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ನಿರಂತರ ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಮತ್ತು ಜಲಾವೃತ ಉಂಟಾಗುತ್ತಿದ್ದಂತೆ, ವಲ್ಸಾದ್ನ ವಾಪಿಯಿಂದ ಹಲವಾರು ಕಾರುಗಳು ನೀರಿನಲ್ಲಿ ಮುಳುಗಿರುವುದನ್ನು ತೋರಿಸುವ ವೀಡಿಯೊ ಹೊರಬಿದ್ದಿದೆ. ಮೇಲಿನಿಂದ ಚಿತ್ರೀಕರಿಸಲಾದ ವೀಡಿಯೊವು ಕಟ್ಟಡದ ಪಾರ್ಕಿಂಗ್ ಪ್ರದೇಶವು ಸಂಪೂರ್ಣವಾಗಿ ಜಲಾವೃತವಾಗಿದ್ದು, ನೀರಿನ ಮಟ್ಟವು ಕಿಟಕಿಗಳನ್ನು ತಲುಪಿದೆ ಎಂದು ತೋರಿಸುತ್ತದೆ. ಪಾರ್ಕಿಂಗ್ ಹೊರಗಿನ ಸುತ್ತಮುತ್ತಲಿನ ಪ್ರದೇಶವು ಸಹ ಪ್ರವಾಹದಿಂದ ತುಂಬಿರುವುದನ್ನು ಕಾಣಬಹುದು.
ಔರಂಗ, ಪರ್ ಮತ್ತು ದಮನ್ ಗಂಗಾ ಮುಂತಾದ ನದಿಗಳು ಉಕ್ಕಿ ಹರಿಯುತ್ತಿದ್ದು, ವಲ್ಸಾದ್ನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಸೂರತ್ ನಗರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ 2,200 ಕ್ಕೂ ಹೆಚ್ಚು ಜನರನ್ನು ಪ್ರವಾಹದ ನಂತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಲ್ಸಾದ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಸೂರತ್ನಿಂದ ಮಹಾರಾಷ್ಟ್ರದತ್ತ ಪ್ರಯಾಣಿಸುತ್ತಿದ್ದ ಬಸ್, ಮಾರ್ಗಮಧ್ಯೆ ರಸ್ತೆಯ ಮೇಲೆ ಹರಿಯುತ್ತಿದ್ದ ಆಳವಾದ ಪ್ರವಾಹ ದಾಟಲು ಯತ್ನಿಸಿದ ವೇಳೆ ಮಧ್ಯಭಾಗದಲ್ಲೇ ಸಿಲುಕಿಕೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಸ್ನಲ್ಲಿದ್ದ 35ಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬಸ್ನ ಟಾಪ್ ಮೇಲೆ ಏರಿ ಕುಳಿತಿದ್ದಾರೆ.
ಭಾರೀ ಮಳೆಯ ನಡುವೆಯೇ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲ ಪ್ರಯಾಣಿಕರು ನೆರವಿಗಾಗಿ ಕಾಯುತ್ತಾ ಬಸ್ನ ಟಾಪ್ ಮೇಲೆ ಆತಂಕದಿಂದ ಕುಳಿತಿದ್ದರು. ತುರ್ತು ರಕ್ಷಣೆಗೆ ಮನವಿ ಮಾಡುತ್ತಿದ್ದ ಅವರ ಮಾಹಿತಿ ದೊರಕುತ್ತಿದ್ದಂತೆ ವಲ್ಸಾಡ್ ಜಿಲ್ಲೆಯ ನಾನಾಪೋಂಧಾ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಪ್ರವಾಹದ ನೀರಿನಲ್ಲಿ ಸುರಕ್ಷಿತವಾಗಿ ಸಾಗಲು ಮೊದಲು ಪ್ರಯಾಣಿಕರಿಗೆ ಲೈಫ್ ಜಾಕೆಟ್ಗಳನ್ನು ಧರಿಸಲಾಯಿತು. ಬಳಿಕ ಹಗ್ಗಗಳ ಸಹಾಯದಿಂದ ಒಬ್ಬೊಬ್ಬರಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಮಗುವನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಕಾಲದಲ್ಲಿ ಕೈಗೊಂಡ ಈ ರಕ್ಷಣಾ ಕಾರ್ಯಾಚರಣೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಗುಜರಾತ್ನ ವಲ್ಸಾದ್, ನವಸಾರಿ ಹಾಗೂ ಸೂರತ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯ ಸರ್ಕಾರ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಮತ್ತಷ್ಟು ಚುರುಕುಗೊಳಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಉಪ ಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಲ್ಸಾಡ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಸ್ಥಳೀಯ ಆಡಳಿತಕ್ಕೆ ನೆರವಾಗಲು ಭಾರತೀಯ ಸೇನೆಯ 70 ಯೋಧರು, ಐದು ದೋಣಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ ಐದು ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್)ಯ ಐದು ತಂಡಗಳು ಹಾಗೂ ಅಗ್ನಿಶಾಮಕ ದಳದ 25 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದೇ ವೇಳೆ ಉಮರ್ಗಾಂ, ವಾಪಿ, ಧರಂಪುರ ಮತ್ತು ಪಾರ್ಡಿ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಿಂದ 500ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ