ಕೇಂದ್ರದ ಜೊತೆ 3ನೇ ಸುತ್ತಿನ ಮಾತುಕತೆ ಯಶಸ್ವಿ : ದೆಹಲಿ ಜಂತರ್‌ ಮಂತರ್‌ ಪ್ರತಿಭಟನೆ ಅಂತ್ಯಗೊಳಿಸಿದ ಸಿಜೆಪಿ

ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್‌ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆಯನ್ನು “ತಕ್ಷಣದಿಂದಲೇ ಜಾರಿಗೆ ಬರುವಂತೆ” ಹಿಂಪಡೆದಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿದ್ದ ಬೆಂಬಲಿಗರಿಗೆ ಮನೆಗೆ ಹಿಂತಿರುಗುವಂತೆ ಮನವಿ ಮಾಡಿದೆ.
ಶುಕ್ರವಾರ ಅಪರಾಹ್ನ ನಡೆದ ಸರ್ಕಾರ ಮತ್ತು ‘ಸಿಜೆಪಿ’ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಮುಖ ಘೋಷಣೆ ಹೊರಬಿದ್ದಿದೆ. ಶಿಕ್ಷಣ ಸಚಿವರ ರಾಜೀನಾಮೆಯು ಸಿಜೆಪಿಯ (satirical political group) ಮುಖ್ಯ ಬೇಡಿಕೆಯಾಗಿತ್ತು.
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ ರಾಂಕಾ, ಸರ್ಕಾರವು ನೀಡಿದ ಭರವಸೆಯ ಆಧಾರದ ಮೇಲೆ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈಗಾಗಲೇ ಒಂದು ಪ್ರಮುಖ ಬೇಡಿಕೆ ಈಡೇರಿದ್ದು, ಉಳಿದ ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸಿದೆ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ:

ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಹಾಗೂ ಪ್ರತಿಭಟನೆಯಲ್ಲಿ ನಿರತ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಅಥವಾ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾವಳಿಗಳ ಪ್ರಕಾರ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಸೌರವ್ ದಾಸ್ ಮಾತನಾಡಿ, “ಸರ್ಕಾರವು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿರುವ ಭರವಸೆ ನೀಡಿದ್ದರಿಂದ ಪ್ರತಿಭಟನಾ ನಿರತರೆಲ್ಲರೂ ಶಾಂತಿಯುತವಾಗಿ ಮನೆಗೆ ಹಿಂತಿರುಗಬೇಕಾಗಿ ವಿನಂತಿಸುತ್ತೇವೆ” ಎಂದರು. ಮತ್ತೊಬ್ಬ ವಕ್ತಾರ ಅಶುತೋಷ್ ರಾಂಕಾ ಮಾತನಾಡಿ, ಎಲ್ಲರೂ ಪ್ರತಿಭಟನಾ ಸ್ಥಳಗಳಿಂದ ಶಾಂತಿಯುತವಾಗಿ ಹೊರನಡೆಯಬೇಕೆಂದು ಕೋರುತ್ತೇವೆ. ನಮ್ಮ ಬೇಡಿಕೆಗಳು ತೀವ್ರಸ್ವರೂಪದ್ದಾಗಿರಲಿಲ್ಲ, ಅತ್ಯಂತ ಮೂಲಭೂತವಾಗಿದ್ದವು. ಈಗ ಸರ್ಕಾರ ಅವುಗಳನ್ನು ಅಂಗೀಕರಿಸಿದೆ,” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಅರಬ್ಬಿ ಸಮುದ್ರದ ಬೃಹತ್ ʼವಾಯು ಸುಳಿʼಯೇ ಪಶ್ಚಿಮ ಕರಾವಳಿ-ಗುಜರಾತ್‌ನಲ್ಲಿ ದಿಢೀರ್‌ ಮಳೆ ಆರ್ಭಟಕ್ಕೆ ಕಾರಣ; ಏನಿದು ವಾಯು ಸುಳಿ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement